ADVERTISEMENT

ಕಾರಾಗೃಹ ಮೋಜಿಗೆ ಸರ್ಕಾರದ ಕುಮ್ಮಕ್ಕು: ಬಿಜೆಪಿ ಆರೋಪ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 4:29 IST
Last Updated 13 ನವೆಂಬರ್ 2025, 4:29 IST
ಪರಪ್ಪನ ಅಗ್ರಹಾರದಲ್ಲಿ ರಾಜ್ಯ ಸರ್ಕಾರ ಉಗ್ರರಿಗೆ ರಾಜಾತಿಥ್ಯ ನೀಡುತ್ತಿದೆ ಎಂದು ಆರೋಪಿಸಿ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಮುಖಂಡರು, ಯುವ ಮೋರ್ಚಾದ ಸದಸ್ಯರು ಪ್ರತಿಭಟನೆ ನಡೆಸಿದರು
ಪರಪ್ಪನ ಅಗ್ರಹಾರದಲ್ಲಿ ರಾಜ್ಯ ಸರ್ಕಾರ ಉಗ್ರರಿಗೆ ರಾಜಾತಿಥ್ಯ ನೀಡುತ್ತಿದೆ ಎಂದು ಆರೋಪಿಸಿ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಮುಖಂಡರು, ಯುವ ಮೋರ್ಚಾದ ಸದಸ್ಯರು ಪ್ರತಿಭಟನೆ ನಡೆಸಿದರು   

ಕಾರವಾರ: ಪರಪ್ಪನ ಅಗ್ರಹಾರದಲ್ಲಿ ರಾಜ್ಯ ಸರ್ಕಾರ ಉಗ್ರರಿಗೆ ರಾಜಾತಿಥ್ಯ ನೀಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಘಟಕದ ವತಿಯಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.

ಕೈದಿಗಳನ್ನು ಬಂಧನದಲ್ಲಿಡಬೇಕಾದ ಕಾರಾಗೃಹವನ್ನು ರಾಜ್ಯ ಸರ್ಕಾರ ಅಪರಾಧಿ ಮನಸ್ಥಿತಿಯವರಿಗೆ ರೆಸಾರ್ಟ್ ಆಗಿ ಪರಿವರ್ತಿಸಿಕೊಟ್ಟಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಮಾತನಾಡಿ, ‘ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಿನಿಂದ ಸಮಾಜವಾದ ಸಿದ್ಧಾಂತದ ಹೆಸರಿನಲ್ಲಿ ದೇಶದ್ರೋಹಿಗಳ ಚಟುವಟಿಕೆಗೆ ಬೆಂಗಾವಲಾಗಿದ್ದಾರೆ. ಉಗ್ರ ಚಟುವಟಿಕೆಯಲ್ಲಿದ್ದವರಿಗೆ ತಮ್ಮದೇ ಸರ್ಕಾರ ಎಂದು ಭಾಸವಾದಂತಿದೆ. ಹಣ ಕೊಟ್ಟರೆ ಬೇಕಾದ ಸವಲತ್ತು ಸಿಗುತ್ತದೆ ಎಂಬುದಕ್ಕೆ ಪರಪ್ಪನ ಅಗ್ರಹಾರದ ಸ್ಥಿತಿ ನಿದರ್ಶನ’ ಎಂದು ಆರೋಪಿಸಿದರು.

ADVERTISEMENT

ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ, ‘ಕಳೆದ ಎರಡು ವರ್ಷಗಳಿಂದ ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಹದಗೆಟ್ಟಿದೆ. ಕಾನೂನಿನ ಭಯ ಇಲ್ಲದೆ ಕೈದಿಗಳು ರಾಜಾರೋಷವಾಗಿ ಮೋಜಿನಲ್ಲಿದ್ದಾರೆ’ ಎಂದರು.

ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಪ್ರೇಮಕುಮಾರ ನಾಯ್ಕ, ‘ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಅಪರಾಧಿಗಳು ವಿಜೃಂಭಿಸುತ್ತಾರೆ. ಮನಃಪರಿವರ್ತನೆ ಕೇಂದ್ರವಾಗಬೇಕಾದ ಕಾರಾಗೃಹವು ಅತ್ಯಾಚಾರಿ ಆರೋಪಿಗಳು, ಉಗ್ರರು, ದರೋಡರಕೋರರಿಗೆ ಮೋಜಿನ ತಾಣವಾಗಿ ಬದಲಾಗಿದೆ. ಮಾಧ್ಯಮಗಳಲ್ಲಿ ವರದಿ ಬಂದಿದ್ದರೂ ಗೃಹ ಸಚಿವರು ತಮಗೇನೂ ಗೊತ್ತಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ‌’ ಎಂದು ಆರೋಪಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ. ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಲಾಯಿತು‌. ಪ್ರಮೋದ ನಾಯ್ಕ, ಶುಭಂ ಕಳಸ, ಮನೋಜ ಭಟ್, ಸುಭಾಷ ಗುನಗಿ, ನಾಗೇಶ ಕುರ್ಡೇಕರ, ಗಣೇಶ ಹಳ್ಳೇರ ಪಾಲ್ಗೊಂಡಿದ್ದರು.

ಜಾಮೀನು ಪಡೆದು ಅಧಿಕಾರ

‘ಜೈಲಿನಿಂದಲೇ ಚುನಾವಣೆ ಎದುರಿಸಿದ ಶಾಸಕರು ಅರ್ಧ ಅವಧಿ ಜೈಲು ಅರ್ಧ ಅವಧಿ ಜಾಮೀನಿನ ಮೇಲೆ ಕಳೆಯುವ ಶಾಸಕರು ಕಾಂಗ್ರೆಸ್‍ನಲಿದ್ದಾರೆ. ಕಾರವಾರ ಕ್ಷೇತ್ರದ ಶಾಸಕರೇ ಅನಾರೋಗ್ಯದ ಹೆಸರಿನಲ್ಲಿ ಜಾಮೀನು ಪಡೆದುಕೊಂಡು ಹೊರಗೆ ಓಡಾಟ ನಡೆಸುತ್ತಿದ್ದಾರೆ. ಇದಕ್ಕೆಲ್ಲ ರಾಜ್ಯ ಸರ್ಕಾರದ ಕುಮ್ಮಕ್ಕು ಇದೆ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಆರೋಪಿಸಿದರು.

‘ಭಾರಿ ಪ್ರಮಾಣದ ಸ್ಫೋಟಕ ವಶಕ್ಕೆ ಪಡೆಯದಿದ್ದರೆ ದೇಶದಲ್ಲಿ ಭಾರಿ ದೊಡ್ಡ ಅವಘಡ ಸಂಭವಿಸುವ ಸಾಧ್ಯತೆ ಇತ್ತು. ಕೇಂದ್ರ ಗುಪ್ತಚರ ಇಲಾಖೆ ಅದನ್ನು ತಡೆದಿದೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ದೇಶದ್ರೋಹಿಗಳಿಗೆ ಬೆಂಬಲವಾಗಿ ನಿಲ್ಲುತ್ತಿದ್ದಾರೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.