ADVERTISEMENT

ಶತಮಾನದ ಅಜ್ಜಿಗೆ ‘ಜಾನಪದ’ ಗೌರವ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 14:32 IST
Last Updated 26 ಫೆಬ್ರುವರಿ 2020, 14:32 IST
ಹುಸೇನಬಿ
ಹುಸೇನಬಿ   

ಶಿರಸಿ/ಮುಂಡಗೋಡ: ಶತಮಾನದ ಹೊಸಿಲನ್ನು ದಾಟಿರುವ ಅಜ್ಜಿ, ಹಳಿಯಾಳ ತಾಲ್ಲೂಕು ಸಾಂಬ್ರಾಣಿಯ ಹುಸೇನಬಿ ಬುಡನ್‌ಸಾಬ್ ಮುಜಾವರ ಸಿದ್ದಿ ಅವರು 2019ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಯಸ್ಸು 103 ದಾಟಿದರೂ ಅಗಾಧ ಸ್ಮರಣಶಕ್ತಿ ಹೊಂದಿರುವ ಅಜ್ಜಿ, ಪ್ರಶಸ್ತಿ ಘೋಷಣೆಯಾದ ಖುಷಿಯಲ್ಲಿ ಮನೆಗೆ ಬಂದ ಗಣ್ಯರೆದುರು ಹಾಡು ಹೇಳಿ ಸಂಭ್ರಮಿಸಿದರು.

ಮೂರ್ನಾಲ್ಕು ವರ್ಷದ ಬಾಲೆಯಾಗಿರುವಾಗಲೇ ಡಮಾಮಿ ನೃತ್ಯಕ್ಕೆ ಹೆಜ್ಜೆ ಹಾಕುತ್ತಿದ್ದ ಹುಸೇನಬಿ ಮುಂದೊಮ್ಮೆ ದೊಡ್ಡ ಕಲಾವಿದೆಯಾಗಬಹುದೆಂದು ಆಕೆಯ ಪಾಲಕರೂ ಊಹಿಸಿರಲಿಲ್ಲ. ಅಜ್ಜಿ–ತಾತ, ಅಮ್ಮ ಆಶಾಬಿ– ಅಪ್ಪ ಖಾಸಿಂ ಸಾಬ್ ಎಲ್ಲರೂ ಡಮಾಮಿ ಕಲಾವಿದರಾಗಿದ್ದರು. ಅವರ ನೃತ್ಯವನ್ನು ನೋಡುತ್ತಲೇ ಬೆಳೆದ ಬಾಲಕಿ ಹುಸೇನಬಿ, ಬಾಲ ಹೆಜ್ಜೆಯಲ್ಲೇ ನೃತ್ಯ ಮಾಡುತ್ತ ಬೆಳೆದವಳು. ಆ ಕಾಲದ ಬಡತನ, ಬಾಲಕಿಯ ಶೈಕ್ಷಣಿಕ ಜೀವನವನ್ನು ಹೊಸಕಿ ಹಾಕಿತು. ಶಾಲೆಯ ಮೆಟ್ಟಿಲು ಕಾಣದ, ಅಕ್ಷರವನ್ನೇ ಕಲಿಯದ ಬಾಲಕಿ ನೃತ್ಯಕ್ಕೆ ಜೀವನವನ್ನು ಮುಡಿಪಾಗಿಟ್ಟರು.

ADVERTISEMENT

‘ಅಮ್ಮ ನನ್ನಂತಹ ನೂರಾರು ಜನರಿಗೆ ಡಮಾಮಿ ಹಾಡು, ಡೋಲ್ಕಿ ಪದ ಕಲಿಸಿದವರು. ಜನಪದೀಯರ ಬಾಯಲ್ಲಿ ಹರಿದು ಬಂದ ಹಾಡುಗಳನ್ನು ಕಲಿತಿರುವ ಅವರಿಗೆ 100ಕ್ಕೂ ಹೆಚ್ಚು ಪದಗಳು ನಾಲಿಗೆಯಲ್ಲಿವೆ. 90 ವರ್ಷದವರೆಗೂ ನೃತ್ಯಕ್ಕೆ ಹೆಜ್ಜೆ ಹಾಕುತ್ತಿದ್ದರು. ಈಗಲೂ ಉತ್ಸಾಹ ಬಂದರೆ, ಹಾಡು ಹೇಳಿ ಉಳಿದವರನ್ನು ಕುಣಿಸುತ್ತಾರೆ’ ಎನ್ನುತ್ತಾರೆ ಹುಸೇನಬಿ ಪುತ್ರಿ ಮಮತಾಜ್ ಸಿದ್ದಿ.

‘ಈಗ ದೃಷ್ಟಿ ಕೊಂಚ ಮಂದವಾಗಿದೆ. ಕಿವಿ ಸರಿಯಾಗಿ ಕೇಳಿಸುತ್ತಿಲ್ಲ. ಆದರೆ, ಅವರ ಸ್ಮರಣಶಕ್ತಿ ಸ್ಫುಟವಾಗಿದೆ. ನೃತ್ಯ ಮಾಡುತ್ತಲೇ ಅಮ್ಮ ಮುದುಕಾದರು’ ಎಂದು ಅವರು ಮಾರ್ಮಿಕವಾಗಿ ಹೇಳಿದರು.

ಹುಸೇನಬಿ ಅವರಿಗೆ 11 ಮಕ್ಕಳು ಅವರಲ್ಲಿ ಐವರು ಈಗ ಬದುಕಿದ್ದಾರೆ. ಎಲ್ಲರೂ ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ಸರ್ಕಾರ ಈ ಹಿಂದೆ ನಡೆಸಿದ್ದ ಗುರು–ಶಿಷ್ಯ ಪರಂಪರೆ ಕಾರ್ಯಕ್ರಮದಲ್ಲಿ ಅವರು ಅನೇಕ ಕಾರ್ಯಕ್ರಮ‌‌ಗಳಿಗೆ ನಿರ್ದೇಶನ ನೀಡಿ ಬುಡುಕಟ್ಟು ಜನರಿಗೆ ತರಬೇತಿ ನೀಡಿದ್ದಾರೆ. ಅವರಿಂದ ತರಬೇತಿ ಪಡೆದ ಜ್ಯೂಲಿಯಾನಾ ಫರ್ನಾಂಡಿಸ್‌, ಮೇರಿ ಗರಿಬಾಚೆ ಅವರು ಡಮಾಮಿ ಹಾಗೂ ಡೋಲ್ಕಿ ನೃತ್ಯ ಕಲಾವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.