ADVERTISEMENT

ಹುಲಿಮನೆ ಜಯರಾಮ ಹೆಗಡೆಯವರ ಚೊಚ್ಚಲ ಕೃತಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 5:01 IST
Last Updated 21 ನವೆಂಬರ್ 2025, 5:01 IST
ಜಯರಾಮ ಹೆಗಡೆ
ಜಯರಾಮ ಹೆಗಡೆ   

ಸಿದ್ದಾಪುರ: ತಾಲ್ಲೂಕಿನ ಹುಲಿಮನೆಯ‌ ಮೂಲದ ಮಿಜಾರಿನ ನಿವಾಸಿ ಜಯರಾಮ ಹೆಗಡೆ ಅವರ ಚೊಚ್ಚಲ ಕೃತಿಗೆ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಕಾಂತಾವರ ಕನ್ನಡ ಸಂಘದ ವಾರ್ಷಿಕ ಗೌರವ ಪ್ರಶಸ್ತಿ ಪ್ರಕಟವಾಗಿದೆ.

ರಂಗಭೂಮಿಯ ಭೀಷ್ಮ, ಟಿಪ್ಪೂ ನಾಟಕದ ಮೂಲಕವೇ ರಂಗಭೂಮಿಯ ಇತಿಹಾಸ ಸೃಷ್ಟಿಸಿದ್ದ ಜಯರಾಮ ಹೆಗಡೆ ಅವರ ಚಿಕ್ಕಪ್ಪ ಹುಲಿಮನೆ ಸೀತಾರಾಮ ಶಾಸ್ತ್ರಿಗಳಿಂದ ಪ್ರಭಾವಿತರಾಗಿದ್ದ ಇವರು ಮೂಡಬಿದಿರೆಯ ಆಳ್ವಾ‌ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡಿ ಸೇವಾ ನಿವೃತ್ತರಾದವರು. ಮಿಜಾರಿನಲ್ಲಿ ಪತ್ನಿ ಜೊತೆ ವಾಸವಿದ್ದು, ವೈದ್ಯಕೀಯ ದಂಪತಿಗಳಾದ ಮಗ ಲಕ್ಷ್ಮೀಶ ಹಾಗೂ ಸೊಸೆ ಸಮೀಕ್ಷಾ ಜೊತೆ‌ಗಿದ್ದಾರೆ.

ನಿತ್ಯ ಬದುಕಿನ ಘಟನೆಗಳನ್ನು ಅಕ್ಷರದಲ್ಲಿಯೂ ದಾಖಲಿಸುತ್ತಿದ್ದ ಇವರು, ತಮ್ಮ ಬದುಕಿನ ವಿವಿಧ ಮಗ್ಗಲುಗಳನ್ನು ಕೃತಿಗಳ‌ ಮೂಲಕವೂ ದಾಖಲಿಸಿದ್ದಾರೆ. ಈಚೆಗಷ್ಟೇ ಬಿಡುಗಡೆಗೊಳಿಸಿದ 'ಬೀದಿಯ ಬದುಕು' ಕೃತಿಯಲ್ಲಿನ ವಿಶಿಷ್ಟ ದಾಖಲೆ ಹಾಗೂ ನಿರೂಪಣೆಗಾಗಿ ಈ ಪ್ರಶಸ್ತಿ ಲಭಿಸಿದೆ.

ADVERTISEMENT

ಪ್ರಶಸ್ತಿಯು ಐದು ಸಾವಿರ ರೂಪಾಯಿ ನಗದು ಹಾಗೂ ತಾಮ್ರ‌ಪ್ರಶಸ್ತಿ ಒಳಗೊಂಡಿದೆ. ಡಿಸೆಂಬರ್ 28ರಂದು ಕಾಂತಾವರದಲ್ಲಿ ನಡೆಯುವ ಕನ್ನಡ‌ ಸಂಘದ ಸುವರ್ಣ ಸಂಭ್ರಮದ ದ್ವಿತೀಯ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ‌ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.