ADVERTISEMENT

ಧ್ವನಿ ಹತ್ತಿಕ್ಕಲು ಪ್ರಕರಣ ದಾಖಲು: ಜೀವನ್ ಆರೋಪ

ಕೆಆರ್‌ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಜೀವನ್ ಆರೋಪ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 4:21 IST
Last Updated 9 ಜುಲೈ 2025, 4:21 IST
ಎಲ್.ಜೀವನ್
ಎಲ್.ಜೀವನ್   

ಕಾರವಾರ: ‘ರಾಜ್ಯದಾದ್ಯಂತ ನಡೆಸಲಾಗುತ್ತಿರುವ ಲಂಚ ಮುಕ್ತ ಅಭಿಯಾನದ ಭಾಗವಾಗಿ ಪಕ್ಷದ ಕಾರ್ಯಕರ್ತರು ಕಾರವಾರದ ತಹಶೀಲ್ದಾರ್ ಕಚೇರಿಗೆ ತೆರಳಿ ಸಿಬ್ಬಂದಿಗೆ ಅಡ್ಡಿಪಡಿಸದೆ ದೃಶ್ಯ ಚಿತ್ರೀಕರಿಸಿದ್ದರೂ ದುರುದ್ದೇಶದಿಂದ ಪ್ರಕರಣ ದಾಖಲಿಸುವ ಕೆಲಸ ನಡೆದಿದೆ’ ಎಂದು ಕೆ.ಆರ್.ಎಸ್ ಪಕ್ಷದ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಎಲ್.ಜೀವನ್ ಆರೋಪಿಸಿದರು.

ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಸ್ನೇಹಿ ವಾತಾವರಣ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪಕ್ಷವು ಅಭಿಯಾನ ಆರಂಭಿಸಿದೆ. ಹಲವು ಜಿಲ್ಲೆಗಳಲ್ಲಿ ಅಭಿಯಾನ ನಡೆಸಿದ್ದರೂ ಸಮಸ್ಯೆ ಉಂಟಾಗಿಲ್ಲ. ಕಾರವಾರದಲ್ಲಿ ಮಾತ್ರ ಕಾರ್ಯಕರ್ತರ ಧ್ವನಿ ಹತ್ತಿಕ್ಕುವ ಪ್ರಯತ್ನ ನಡೆದಿದೆ’ ಎಂದು ದೂರಿದರು.

‘ಉತ್ತರ ಕನ್ನಡ ಜಿಲ್ಲಾಧಿಕಾರಿ ಎಷ್ಟು ತಹಶೀಲ್ದಾರ್ ಕಚೇರಿಗೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ? ಕಾರವಾರ ಶಾಸಕರು ಸರ್ಕಾರಿ ಕಚೇರಿಗಳ ಅವ್ಯವಸ್ಥೆ ಬಗ್ಗೆ ಎಂದಾದರೂ ಪರಿಶೀಲನೆ ನಡೆಸಿದ್ದಾರೆಯೇ? ಹಾಗೊಂದು ವೇಳೆ ಪರಿಶೀಲಿಸಿ, ಸಮಸ್ಯೆ ಪರಿಹರಿಸಿದ್ದರೆ ಕೆಆರ್‌ಎಸ್ ಕಾರ್ಯಕರ್ತರು ಅಭಿಯಾನ ನಡೆಸುವ ಸ್ಥಿತಿ ಎದುರಾಗುತ್ತಿರಲಿಲ್ಲ’ ಎಂದರು.

ADVERTISEMENT

ಪಕ್ಷದ ಜಿಲ್ಲಾ ಉಸ್ತುವಾರಿ ರಂಜಿನಿ ಎಂ., ಮಂಜುನಾಥ ಶಿರಹಟ್ಟಿ, ರವಿ ಹೊಸ್ಕಟ್ಟಾ, ವೆಂಕಟೇಶ ವೈದ್ಯ ಇದ್ದರು.

ಜೂನ್ 25ರಂದು ಕಾರವಾರದ ತಹಶೀಲ್ದಾರ್ ಕಚೇರಿಯಲ್ಲಿ ಅನುಮತಿ ಪಡೆಯದೆ ವಿಡಿಯೊ ಚಿತ್ರೀಕರಿಸಲಾಗಿದೆ, ಮಹಿಳಾ ಸಿಬ್ಬಂದಿಗೆ ಮುಜುಗರವಾಗುವಂತೆ ವರ್ತಿಸಲಾಗಿದೆ ಎಂದು ನಗರ ಪೊಲೀಸ್ ಠಾಣೆಯಲ್ಲಿ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಸರ್ಕಾರಿ ಕಚೇರಿಗಳಲ್ಲಿ ವಿಡಿಯೊ ಚಿತ್ರೀಕರಿಸಲು ಯಾವ ಕಾನೂನಿನ ಅಡಿಯಲ್ಲಿ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಲಿ.
ಎಲ್.ಜೀವನ್, ಕೆಆರ್‌ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.