ADVERTISEMENT

ಶಿರಸಿ: ಅಕ್ಷರ ದೇಗುಲದಲ್ಲಿ ಕಾವಿ ಕಲೆ

ರಾಜೇಂದ್ರ ಹೆಗಡೆ
Published 8 ಡಿಸೆಂಬರ್ 2024, 4:54 IST
Last Updated 8 ಡಿಸೆಂಬರ್ 2024, 4:54 IST
<div class="paragraphs"><p>ಶಿರಸಿಯ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಗೋಡೆಗಳಲ್ಲಿ ಅರಳಿದ ಕಾವಿಕಲೆ</p></div>

ಶಿರಸಿಯ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಗೋಡೆಗಳಲ್ಲಿ ಅರಳಿದ ಕಾವಿಕಲೆ

   

ಶಿರಸಿ: ಉತ್ತೇಜನವಿಲ್ಲದೆ ಸೊರಗುತ್ತಿದ್ದ ಅಪರೂಪದ ಕಾವಿಕಲೆಗೆ ಇಲ್ಲಿನ ಎಂ.ಇ.ಎಸ್ ಶಿಕ್ಷಣ ಸಂಸ್ಥೆಯ ಗೋಡೆಗಳು ವೇದಿಕೆಯಾದ ಪರಿಣಾಮ ಬಣ್ಣ ಕಳೆದುಕೊಂಡು, ಸೊರಗಿದಂತೆ ಕಾಣುತ್ತಿದ್ದ ಗೋಡೆಗಳು ವೈವಿಧ್ಯಮಯ ಕಾವಿ ಚಿತ್ರಗಳಿಂದ ಕಂಗೊಳಿಸುವಂತಾಗಿದೆ. 

ಕರಾವಳಿ ಹಾಗೂ ಗೋವಾ ರಾಜ್ಯದ ಕೆಲವು ದೇವಾಲಯಗಳನ್ನು ಸಿಂಗರಿಸಿರುವ ಕಾವಿ ಕಲೆಗೆ ಶತಮಾನಗಳ ಇತಿಹಾಸವಿದೆ. ಕೆಂಪು ಮಿಶ್ರಿತ ಕಂದು ಬಣ್ಣದ ಭಿತ್ತಿಚಿತ್ರಗಳು ಗೋವಾ, ದಕ್ಷಿಣ ಕನ್ನಡ, ಉತ್ತರ ಕನ್ನಡದ ಭಾಗದಲ್ಲಿನ ಪುರಾತನ ದೇವಾಲಯಗಳಲ್ಲಿ ಇಂದಿಗೂ ಕಾಣಸಿಗುತ್ತದೆ. ಅಂಥದ್ದೇ ಕಾವಿಕಲೆಗಳು ಎಂಇಎಸ್ ಶಿಕ್ಷಣ ಸಂಸ್ಥೆಯ ಕಲಾ ಮತ್ತು ವಿಜ್ಞಾನ ಕಾಲೇಜಿನ ಗೋಡೆಗಳನ್ನು ತುಂಬಿದ್ದು, ಗಮನ ಸೆಳೆಯುತ್ತಿವೆ. 

ADVERTISEMENT

ರಾಜ್ಯ ಲಲಿತಕಲಾ ಅಕಾಡೆಮಿ ವತಿಯಿಂದ ಕಾಲೇಜಿನಲ್ಲಿ ಕಾವಿಕಲೆಯ ತರಬೇತಿ ಆಯೋಜಿಸಿ, ಕಾಲೇಜಿನ ಒಳ ಆವರಣದ ಗೋಡೆಗಳನ್ನೇ ಕ್ಯಾನ್ವಾಸ್ ಆಗಿ ಬಳಸಲು ಅವಕಾಶ ನೀಡಿದ ಪರಿಣಾಮ ಚಿತ್ತಾರ ಮೂಡಿದೆ.

ವಿದ್ಯಾ ದೇಗುಲದ ಪ್ರವೇಶ ದ್ವಾರದಲ್ಲಿ ರಚಿಸಿರುವ ಸರಸ್ವತಿ ದೇವಿ ಚಿತ್ರ

ಗೋಕರ್ಣದ ಕಾವಿ ಕಲಾವಿದ ರವಿ ಗುನಗ ಅವರ ಮಾರ್ಗದರ್ಶನದಲ್ಲಿ ರಾಜ್ಯದ 16 ಜಿಲ್ಲೆಗಳ ಆಮಂತ್ರಿತ ಕಾವಿಕಲೆ ಕಲಾವಿದರು ನಾಲ್ಕು ದಿನಗಳ ಕಾಲ ಚಿತ್ರಗಳನ್ನು ಬಿಡಿಸಿ ಗೋಡೆಗಳ ಅಂದ ಹೆಚ್ಚಿಸಿದ್ದಾರೆ. 

‘ಮನಸ್ಸು ನಿಗ್ರಹ, ಏಕಾಗ್ರತೆ ಸಾಧಿಸುವುದು, ಮನೋಲ್ಲಾಸ ಸೇರಿ ಹದಿಹರೆಯದವರಿಗೆ ಅತಿ ಅಗತ್ಯವಾಗಿರುವ ಇಂದ್ರಿಯಗಳ ನಿಗ್ರಹ ಜ್ಞಾನ ನೀಡುವ 18 ವಿವಿಧ ಬಗೆಯ ಚಕ್ರಗಳು, ಕಾಲೇಜಿನ ಮುಂಭಾಗದಲ್ಲಿ ವಿದ್ಯಾ ದೇವತೆ ಸರಸ್ವತಿ ಚಿತ್ರ, ಎಲ್ಲ ಚಿತ್ರಗಳ ಕೆಳ ಹಾಗೂ ಮೇಲ್ಭಾಗದಲ್ಲಿ ಬಳ್ಳಿಗಳು ಹಬ್ಬಿ ನೋಡುಗರನ್ನು ಇನ್ನಷ್ಟು ಸೆಳೆಯುತ್ತಿವೆ. ಕಾವಿ ಚಿತ್ರಗಳನ್ನು ನೋಡಿದರೆ ಮತ್ತೆ ಮತ್ತೆ ನೋಡಬೇಕು ಎಂಬ ಭಾವನೆ ಬರುತ್ತದೆ’ ಎಂದು ಕಾಲೇಜಿನ ಪ್ರಾಚಾರ್ಯ ಜಿ.ಟಿ.ಭಟ್ ಹೇಳಿದರು.  

‘ಸಾಂಪ್ರದಾಯಿಕವಾಗಿ ಕಾವಿ ಬಣ್ಣವನ್ನು ನೈಸರ್ಗಿಕ ಬಣ್ಣ, ಗಾರೆ ಮಣ್ಣು, ಸುಣ್ಣದ ಮೂಲಕ ತಯಾರಿಸಲಾಗುತ್ತದೆ. ಒಮ್ಮೆ ಪೇಸ್ಟ್ ಸಿದ್ಧವಾದೊಡನೆ, ಗೋಡೆಗಳ ಮೇಲೆ ಅಚ್ಚು ಹಾಕಲಾಗುತ್ತದೆ. ಇಂದು ಸಾಂಪ್ರದಾಯಿಕ ಕಾವಿ ಬಣ್ಣ ತಯಾರಕರು ಇಲ್ಲ. ಆದ್ದರಿಂದ ಗೋವಾ, ಕರ್ನಾಟಕದಲ್ಲಿ ಹಲವು ದೇವಾಲಯಗಳಲ್ಲಿನ ವಿನ್ಯಾಸವನ್ನು ಅಧ್ಯಯನ ಮಾಡಿದ ತಜ್ಞ ಕಲಾವಿದರು ಅದೇ ರೀತಿ ಕಾಣುವ ಪೇಂಟ್‍ನ್ನು ವಿನ್ಯಾಸಗಳ ರಚನೆಗಾಗಿ ಬಳಕೆ ಮಾಡಿದ್ದಾರೆ. ಹಾಗಾಗಿ ದಶಕಗಳ ವರೆಗೆ ಮಾಸುವ ಪ್ರಶ್ನೆಯಿಲ್ಲ’ ಎಂದೂ ತಿಳಿಸಿದರು.

ಉತ್ತರ ಕನ್ನಡದ ಘಟ್ಟದ ಮೇಲೆ, ಶಿರಸಿ ಮಾರಿಕಾಂಬಾ ದೇವಾಲಯ ಹೊರತುಪಡಿಸಿದರೆ ಕಾವಿಕಲೆ ಕಂಡು ಬರುವುದು ಪ್ರಸ್ತುತ ಎಂಇಎಸ್ ಕಾಲೇಜಿನಲ್ಲಿ ಮಾತ್ರ
ಶಾಂತಾ ಕೊಲ್ಲೆಲಲಿತಕಲಾ ಅಕಾಡೆಮಿ ಸದಸ್ಯೆ
ಕಾಲೇಜಿನ ಗೋಡೆಗಳು ಸುಂದರವಾಗಷ್ಟೇ ಅಲ್ಲ ಸ್ವಚ್ಛವಾಗಿಯೂ ಕಾಣುತ್ತಿವೆ. ವಿದ್ಯಾರ್ಥಿಗಳು ಕಾವಿ ಕಲೆಯತ್ತ ಆಸಕ್ತಿ ತಳೆದಿರುವುದು ಖುಷಿ ತಂದಿದೆ
ಜಿ.ಟಿ.ಭಟ್, ಎಂಇಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಚಾರ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.