ಕಾರವಾರ: ಅಣು ವಿದ್ಯುತ್ ನಿಗಮದಲ್ಲಿ ದುಡಿಯುವ ಕಾರ್ಮಿಕರು ಪ್ರತಿನಿತ್ಯ ಕೈಗಾಕ್ಕೆ ತಲುಪಲು ಅವಲಂಬಿಸಿರುವ ಸಾರಿಗೆ ಸಂಸ್ಥೆಯ ಬಸ್ ಪದೇ ಪದೇ ಕೆಟ್ಟು ನಿಲ್ಲುತ್ತಿದ್ದು, ದೂರಿದರೂ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಂದ ಸ್ಪಂದನೆ ಸಿಗುತ್ತಿಲ್ಲ ಎಂದು ನಿಗಮದ ಹೊರಗುತ್ತಿಗೆ ಕಾರ್ಮಿಕರು ಬುಧವಾರ ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರಿಗೆ ದೂರು ನೀಡಿದ್ದಾರೆ.
‘ನಿತ್ಯವೂ ಬೆಳಿಗ್ಗೆ 6 ಗಂಟೆಗೆ ಕಾರವಾರ ಬಸ್ ನಿಲ್ದಾಣದಿಂದ ಹೊರಟು, ಕದ್ರಾ ಮಾರ್ಗವಾಗಿ ಕೈಗಾಕ್ಕೆ ಸಂಚರಿಸುವ ಬಸ್‌ನ್ನು ಹಲವು ಕಾರ್ಮಿಕರು ಅವಲಂಬಿಸಿದ್ದಾರೆ. ಕೆಲಸಕ್ಕೆ ಹೋಗಲು ಇದೇ ಬಸ್‌ನಲ್ಲಿ ಸಂಚರಿಸುವುದು ಅನಿವಾರ್ಯವಾಗಿದೆ. ಕಳೆದ 15 ದಿನಗಳಿಂದ ಬಸ್ ಹಲವು ಬಾರಿ ಕೆಟ್ಟು ಮಾರ್ಗ ಮಧ್ಯೆಯೇ ನಿಂತಿದೆ. ಇದರಿಂದ ಸರಿಯಾದ ಸಮಯಕ್ಕೆ ಕೆಲಸಕ್ಕೆ ಹೋಗಲಾಗದೆ ಪರದಾಡಿದ್ದೇವೆ’ ಎಂದು ಕಾರ್ಮಿಕರು ಅಳಲು ತೋಡಿಕೊಂಡರು.
‘ಕಡಿಮೆ ವೇತನಕ್ಕೆ ದುಡಿಯುವ ಕಾರ್ಮಿಕರು ಕೆಲಸಕ್ಕೆ ಹೋಗಲು ಸ್ವಂತ ಅಥವಾ ಬಾಡಿಗೆ ವಾಹನ ಬಳಸುವುದು ಹೊರೆಯಾಗಲಿದೆ. ಪದೇ ಪದೇ ಬಸ್ ಕೆಟ್ಟು ನಿಲ್ಲುತ್ತಿರುವುದರಿಂದ ಖಾಸಗಿ ವಾಹನಗಳಿಗೆ ಬಾಡಿಗೆ ಮೊತ್ತ ಪಾವತಿಸಿದ್ದರಿಂದ ಆರ್ಥಿಕ ಸಮಸ್ಯೆಗೂ ಕಾರಣವಾಗಿದೆ. ಬಸ್ ಕೆಟ್ಟು ನಿಲ್ಲುತ್ತಿರುವ ಬಗ್ಗೆ ಸಾರಿಗೆ ಘಟಕ ವ್ಯವಸ್ಥಾಪಕರಿಗೆ ದೂರು ನೀಡಿದರೂ ಅವರು ಸರಿಯಾಗಿ ಸ್ಪಂದಿಸಿಲ್ಲ. ದುಸ್ಥಿತಿಯ ಬಸ್‌ನ್ನೇ ಕೈಗಾ ಮಾರ್ಗಕ್ಕೆ ಸಂಚರಿಸಲು ನೀಡಲಾಗುತ್ತಿದೆ’ ಎಂದು ದೂರಿದರು.
ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯ್ಕ, ಗುತ್ತಿಗೆ ಕಾರ್ಮಿಕರಾದ ವಿಘ್ನೇಶ್ವರ ಮೇತ್ರಿ, ಉಲ್ಲಾಸ ನಾಯ್ಕ, ಕಿರಣ ಆಚಾರಿ, ಪರಶುರಾಮ ನಾಯ್ಕ, ರಾಜೇಂದ್ರ ಕೊಠಾರಕರ, ಸಂದೀಪ್ ಕೊಠಾರಕರ, ಆನಂದ ಕೊಬ್ರೇಕರ, ಅಶ್ವಿನಿ ನಾಯ್ಕ, ಶೃತಿ ನಾಯ್ಕ, ಶೀತಲ್ ನಾಯ್ಕ, ಸ್ವಾತಿ ನಾಯ್ಕ ಇದ್ದರು.
ರಾತ್ರಿ ಬಸ್ ಪುನರಾರಂಭಿಸಿ
‘ಕೋವಿಡ್‌ಗೆ ಮುನ್ನ ಮಲ್ಲಾಪುರದಿಂದ ರಾತ್ರಿ 8.15ಕ್ಕೆ ಹೊರಟು ಕಾರವಾರ ತಲುಪುವ ಬಸ್ ವ್ಯವಸ್ಥೆ ಇತ್ತು. ಈ ಬಸ್ ನಿಲುಗಡೆ ಮಾಡಿ ಐದು ವರ್ಷ ಕಳೆದಿದೆ. ಸಂಜೆ ಕೆಲಸ ಮುಗಿಸಿ ಊರಿಗೆ ಮರಳಲು ಬಸ್ ಸಿಗದೆ ತೊಂದರೆ ಅನುಭವಿಸುತ್ತಿದ್ದೇವೆ. ಮುಂಚಿನಂತೆ ರಾತ್ರಿ ಬಸ್ ಸಂಚಾರ ಪುನರಾರಂಭಿಸಿದರೆ ಕೆಲಸದಿಂದ ಮರಳುವ ಕಾರ್ಮಿಕರಿಗೆ ಅನುಕೂಲ ಆಗಲಿದೆ’ ಎಂದು ಕಾರ್ಮಿಕರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.