ADVERTISEMENT

 ಅಣೆಕಟ್ಟೆಯಲ್ಲಿ ಬಿರುಕು: ವದಂತಿಗೆ ಕಿವಿಗೊಟ್ಟು ಊರು ತೊರೆದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2019, 7:28 IST
Last Updated 8 ಆಗಸ್ಟ್ 2019, 7:28 IST
   

ಕಾರವಾರ: ತಾಲ್ಲೂಕಿನ ಕೊಡಸಳ್ಳಿ ಅಣೆಕಟ್ಟೆಯಲ್ಲಿ ಬಿರುಕು ಬಿಟ್ಟಿದೆ ಎಂಬ ವದಂತಿಯಿಂದ ಭೀತರಾದ ನೂರಾರು ಜನರು ಗುರುವಾರ ಭೀಕರ ಮಳೆಯಲ್ಲೇ ಊರು ತೊರೆದರು. ಸಣ್ಣ ಮಕ್ಕಳು, ಮಹಿಳೆಯರು, ವೃದ್ಧರನ್ನು ಕರೆದುಕೊಂಡು ಕದ್ರಾ ಗ್ರಾಮದಿಂದ ಓಡಿ ಬಂದರು.

ಜಲಾಶಯದ ಜಲಾನಯನ ಪ್ರದೇಶದಲ್ಲಿರುವ ಕೆರೆಕಟ್ಟೆಗಳು ತುಂಬಿ ತುಳುಕುತ್ತಿವೆ. ಅದರಿಂದ ಏಕಾಏಕಿ ಹೊರಬಂದ ಭಾರಿ ಪ್ರಮಾಣದ ನೀರನ್ನು ಕಂಡು ಜಲಾಶಯವೇ ಬಿರುಕು ಬಿಟ್ಟಿದೆ ಎಂದು ಯಾರೋ ವಾಟ್ಸ್ ಆ್ಯಪ್ ನಲ್ಲಿ ಸುದ್ದಿ ಹಬ್ಬಿಸಿದರು. ಇದನ್ನು ನಂಬಿದ ನೂರಾರು ಗ್ರಾಮಸ್ಥರು ಬಟ್ಟೆ, ದಿನಸಿಗಳನ್ನು ಗಂಟುಮೂಟೆ ಕಟ್ಟಿಕೊಂಡು ಅಳುತ್ತಾ ಊರು ತೊರೆದರು. ಪೊಲೀಸರು, ಜಿಲ್ಲಾಡಳಿತದ ಅಧಿಕಾರಿ‌ಗಳು, ಮಾಧ್ಯಮ ಪ್ರತಿನಿಧಿಗಳು ವದಂತಿಗೆ ಕಿವಿಗೊಡಬೇಡಿ, ಅಣೆಕಟ್ಟೆಗೆ ಏನೂ ಆಗಿಲ್ಲ. ಸುರಕ್ಷಿತವಾಗಿದೆ ಎಂದರೂ ಕೇಳಲಿಲ್ಲ.

ಕದ್ರಾದಿಂದ ಸದಾಶಿವಗಡ ಔರಾದ ರಾಜ್ಯ ಹೆದ್ದಾರಿಗೆ ಬಂದು ಸಿಕ್ಕಸಿಕ್ಕ ವಾಹನಗಳನ್ನೇರಿದರು. ಜೊಯಿಡಾ ಭಾಗದಲ್ಲಿ ಎಲ್ಲಾದರೂ ಎತ್ತರದ ಪ್ರದೇಶಕ್ಕೆ ಹೋಗುವುದಾಗಿ ಕೂಗಿದರು.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, 'ವದಂತಿಗಳಿಗೆ ಯಾರೂ ಕಿವಿಗೊಡಬಾರದು. ಕಾಳಿ ನದಿಯ ಎಲ್ಲ ಜಲಾಶಯಗಳೂ ಸುರಕ್ಷಿತವಾಗಿವೆ. ಎಲ್ಲರ ರಕ್ಷಣೆ ಜಿಲ್ಲಾಡಳಿತದ ಜವಾಬ್ದಾರಿ' ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.