ADVERTISEMENT

ಕಾರವಾರ | ಕಾಳಿ ಸೇತುವೆ: ಪೈಲಿಂಗ್ ಪರೀಕ್ಷೆ ಸ್ಥಗಿತ!

ನಿಗದಿತ ಆಳಕ್ಕಿಂತ ಮೇಲ್ಮೈನಲ್ಲೇ ಸಿಕ್ಕ ಕಲ್ಲಿನ ಪದರು

ಗಣಪತಿ ಹೆಗಡೆ
Published 16 ನವೆಂಬರ್ 2025, 4:20 IST
Last Updated 16 ನವೆಂಬರ್ 2025, 4:20 IST
ಕಾರವಾರದ ಕಾಳಿ ನದಿ ದಡದಲ್ಲಿ ಹೊಸ ಸೇತುವೆ ಕಾಮಗಾರಿಗೆ ಅಗತ್ಯ ಸಲಕರಣೆಗಳನ್ನು ದಾಸ್ತಾನು ಇರಿಸಿರುವುದು.
ಕಾರವಾರದ ಕಾಳಿ ನದಿ ದಡದಲ್ಲಿ ಹೊಸ ಸೇತುವೆ ಕಾಮಗಾರಿಗೆ ಅಗತ್ಯ ಸಲಕರಣೆಗಳನ್ನು ದಾಸ್ತಾನು ಇರಿಸಿರುವುದು.   

ಕಾರವಾರ: ಇಲ್ಲಿನ ಕೋಡಿಭಾಗದ ಬಳಿ ಕಾಳಿ ನದಿಗೆ ಹೊಸ ಸೇತುವೆ ನಿರ್ಮಾಣಕ್ಕೆ ನಡೆಸಲಾದ ಪೈಲಿಂಗ್ ಪರೀಕ್ಷೆ ವೇಳೆ ಪ್ರಕ್ರಿಯೆ ತಾತ್ಕಾಲಿಕ ಸ್ಥಗಿತಗೊಂಡಿದೆ. ನದಿಯೊಳಗೆ ಪರೀಕ್ಷೆ ಕೈಗೊಳ್ಳಲು ಅನುಮತಿಗೆ ಗುತ್ತಿಗೆ ಕಂಪನಿ ಕಾಯುತ್ತಿದೆ.

‘ಕುಸಿತವಾಗಿದ್ದ ಹಳೆಯ ಸೇತುವೆ ಬುಡಭಾಗದಲ್ಲಿ ಮೊದಲ ಸ್ಥಳದ ಪೈಲಿಂಗ್ ಪರೀಕ್ಷೆ ನಡೆಸಲಾಗುತ್ತಿತ್ತು. ನಿಗದಿತ ಆಳಕ್ಕಿಂತ ಮುಂಚಿತವಾಗಿಯೇ ಗಟ್ಟಿ ಕಲ್ಲಿನ ಪದರ ಸಿಕ್ಕಿದ್ದರಿಂದ ಪೈಲಿಂಗ್ ಪರೀಕ್ಷೆ ಸ್ಥಗಿತಗೊಳಿಸಿದ್ದಾಗಿ ಪ್ರಕ್ರಿಯೆ ನಡೆಸುತ್ತಿರುವ ಕಂಪನಿ ತಿಳಿಸಿದೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಯೋಜನಾ ನಿರ್ದೇಶಕ ಕೆ. ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಳಿ ನದಿಯ ಹೊಸ ಸೇತುವೆ ಕಾಮಗಾರಿ ಕೈಗೊಳ್ಳಲು ಕನಿಷ್ಠ ನಾಲ್ಕರಿಂದ ಐದು ಸ್ಥಳಗಳಲ್ಲಿ ಪೈಲಿಂಗ್ ಪರೀಕ್ಷೆ ನಡೆಸಬೇಕಾಗಬಹುದು. ಪೈಲಿಂಗ್ ಪರೀಕ್ಷೆ ವೇಳೆ ನೆಲದ ಮೇಲ್ಮೈನಿಂದ 27 ಮೀಟರ್ ಆಳದವರೆಗೆ ಗಟ್ಟಿ ಕಲ್ಲಿನ ಪದರ ಸಿಗಬಾರದು. ನೆಲದ ಭಾಗದಲ್ಲಿ ಮೊದಲು ಗುರುತಿಸಿದ ಸ್ಥಳದಲ್ಲೇ ಪದರ ಮೇಲ್ಮೈನಲ್ಲೇ ಸಿಕ್ಕಿದೆ. ಹೀಗಾಗಿ, ನದಿಭಾಗದಲ್ಲಿ ಪೈಲಿಂಗ್ ಪರೀಕ್ಷೆ ನಡೆಸಲಾಗುತ್ತದೆ’ ಎಂದು ತಿಳಿಸಿದರು.

ADVERTISEMENT

‘ನದಿಯಲ್ಲಿ ಪೈಲಿಂಗ್ ನಡೆಸಲು ಬಂದರು ಜಲಸಾರಿಗೆ ಮಂಡಳಿಯಿಂದ ಅನುಮತಿ ಪಡೆಯಬೇಕಾಗುತ್ತದೆ. ಒಂದೆರಡು ದಿನದೊಳಗೆ ಅನುಮತಿ ಕೋರಿ ಪತ್ರ ಬರೆಯಲಾಗುವುದು. ಅನುಮತಿ ಸಿಕ್ಕ ಬಳಿಕ ಪ್ರಕ್ರಿಯೆ ಆರಂಭಿಸಲಾಗುತ್ತದೆ’ ಎಂದೂ ವಿವರಿಸಿದರು.

‘ಬಂದರು ಇರುವ ಪ್ರದೇಶದಿಂದ 8 ಕಿ.ಮೀ ವ್ಯಾಪ್ತಿಯಲ್ಲಿ ಪೈಲಿಂಗ್ ಅಥವಾ ನೆಲ ಕೊರೆಯುವ ಯಾವುದೇ ಪ್ರಕ್ರಿಯೆ ಕೈಗೊಳ್ಳಲು ಅನುಮತಿ ಪಡೆಯುವುದು ಕಡ್ಡಾಯ. ಕಾಳಿ ಸೇತುವೆ ಕಾಮಗಾರಿಗೆ ಪೈಲಿಂಗ್ ನಡೆಸಲು ಅನುಮತಿ ಕೋರಿ ಪತ್ರ ಬಂದ ಮಾಹಿತಿ ಇಲ್ಲ. ಅನುಮತಿ ಕೇಳಿದರೆ ಪರಿಶೀಲಿಸಿ ಅನುಮತಿ ನೀಡಲಾಗುತ್ತದೆ’ ಎಂದು ಬಂದರು ಜಲಸಾರಿಗೆ ಮಂಡಳಿಯ ಹಿರಿಯ ಎಂಜಿನಿಯರ್ ಒಬ್ಬರು ಪ್ರತಿಕ್ರಿಯಿಸಿದರು.

ಪೈಲಿಂಗ್ ಪರೀಕ್ಷೆ ಬಾಕಿ ಇರುವುದು ಒಂದೆಡೆಯಾದರೆ, ಸೇತುವೆ ನಿರ್ಮಾಣದ ಉಪಗುತ್ತಿಗೆ ಪಡೆದಿರುವ ಪೊದ್ದಾರ್ ಇನ್‌ಫ್ರಾಸ್ಟ್ರಕ್ಚರ್ ಕಂಪನಿಯು ನಿರ್ಮಾಣ ಕಾಮಗಾರಿಗೆ ಅಗತ್ಯವಿರುವ ಸಾಮಗ್ರಿಗಳನ್ನು ದಾಸ್ತಾನು ಮಾಡಿಕೊಳ್ಳುತ್ತಿದೆ.

ಪೈಲಿಂಗ್ ಪರೀಕ್ಷೆ ತಿಂಗಳೊಳಗೆ ಪೂರ್ಣಗೊಳ್ಳಬಹುದು. ಆ ಬಳಿಕ ಸೇತುವೆ ಕಾಮಗಾರಿ ಆರಂಭಿಸಲಾಗುತ್ತದೆ
ಕೆ.ಶಿವಕುಮಾರ್ ಎನ್‌ಎಚ್ಎಐ ಯೋಜನಾ ನಿರ್ದೇಶಕ

ಪೈಲಿಂಗ್ ಪರೀಕ್ಷೆ ಏಕೆ?

‘ಸೇತುವೆ ನಿರ್ಮಾಣಕ್ಕೆ ಮುನ್ನ ಕಾಮಗಾರಿ ನಡೆಸುವ ಜಾಗದ ಆಳದಲ್ಲಿನ ಮಣ್ಣು ಕಲ್ಲುಗಳ ಗುಣಮಟ್ಟದ ಬಗ್ಗೆ ಅಧ್ಯಯನ ನಡೆಸಲು ಪೈಲಿಂಗ್ ಪರೀಕ್ಷೆ ನಡೆಸಲಾಗುತ್ತದೆ. ವೃತ್ತಾಕಾರದಲ್ಲಿ ಗುಂಡಿ ತೆಗೆಯುತ್ತ ಆಳದವರೆಗೆ ಮಣ್ಣು ತೆಗೆದು ಪರೀಕ್ಷೆ ನಡೆಸಲಾಗುತ್ತದೆ. ಈ ವೇಳೆ ಕನಿಷ್ಠ 27 ಮೀ. ಆಳದವರೆಗೆ ಯಾವುದೇ ಅಡೆತಡೆ ಎದುರಾಗದಿದ್ದರೆ ಆ ಸ್ಥಳದಲ್ಲಿ ಸೇತುವೆಯ ಅಡಿಪಾಯ ಕೆಲಸ ಕೈಗೊಳ್ಳಲಾಗುತ್ತದೆ. ಆಯಾ ಜಾಗದ ಮಣ್ಣು ಮತ್ತು ಕಲ್ಲಿನ ಗುಣ ಆಧರಿಸಿ ಸೇತುವೆ ಕಾಮಗಾರಿಗೆ ಬಳಸಬಹುದಾದ ಉಕ್ಕು ಕಾಂಕ್ರೀಟ್‌ ಪ್ರಮಾಣ ನಿರ್ಧರಿಸಲಾಗುತ್ತದೆ. ಸೇತುವೆ ಕಾಮಗಾರಿಯಲ್ಲಿ ಈ ಪ್ರಕ್ರಿಯೆಯೇ ಮುಖ್ಯವಾದುದು’ ಎಂದು ಎನ್‌ಎಚ್ಎಐ ಯೋಜನಾ ನಿರ್ದೇಶಕ ಕೆ. ಶಿವಕುಮಾರ್ ವಿವರಿಸಿದರು.