
ಕುಮಟಾ: `ವಿದ್ಯಾರ್ಥಿಗಳ ಕಲಿಕೆಯ ಸಂಭ್ರಮವನ್ನು ಶಾಲೆಯಲ್ಲಿ ಸಾಂಸ್ಕೃತಿಕ ಹಬ್ಬವಾಗಿ ಆಚರಿಸುವ ಹೊಸ ಪರಿಕಲ್ಪನೆ ಶಿಕ್ಷಣದ ಪ್ರಾಥಮಿಕ ಹಂತದಲ್ಲಿ ಬೆಳವಣಿಗೆಯಲ್ಲಿ ನಿಜಕ್ಕೂ ಗಮನಾರ್ಹ ಬದಲಾವಣೆ ತರುವಂಥದ್ದು' ಎಂದು ಜಿಲ್ಲಾ ಶಿಕ್ಷಣ ಹಾಗೂ ತರಬೇತಿ ಸಂಸ್ಥೆಯ ಉಪನಿರ್ದೇಶಕ ಎನ್.ಆರ್. ಹೆಗಡೆ ಹೇಳಿದರು.
ತಾಲ್ಲೂಕಿನ ಕೂಜಳ್ಳಿಯ ಶಾಲೆಯ ಕ್ಲಸ್ಟರ್ ಕೇಂದ್ರದಲ್ಲಿ ಈಚೆಗೆ ವಿಶಿಷ್ಟವಾಗಿ ಆಯೋಜಿಸಿದ್ದ ಶಾಲಾ ಕಲಿಕಾ ಹಬ್ಬವನ್ನು ಭತ್ತವನ್ನು ಬಳ್ಳದ (ಕೊಳಗ) ಮೂಲಕ ಅಳತೆ ಮಾಡಿ ರಾಶಿ ಹಾಕುವ ಮೂಲಕ ವಿಶಿಷ್ಟವಾಗಿ ಉದ್ಘಾಟಿಸಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳ ಸಾಧನೆಯನ್ನು ಶಿಕ್ಷಕರು ಪಾಲಕರು ಸೇರಿ ಶಾಲೆಯಲ್ಲಿ ಸಂಭ್ರಮಿಸುವ ಕಾರ್ಯಕ್ರಮಕ್ಕೆ ಸ್ಥಳೀಯ ಸಿ.ಆರ್.ಪಿ ರಾಜು ನಾಯಕವರು ಗ್ರಾಮೀಣ ಹಬ್ಬದ ಸಂಸ್ಕೃತಿಯ ಸ್ಪರ್ಶ ನೀಡಿ ಆಚರಿಸಿದ್ದು ವಿಶೇಷ' ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಉದಯ ನಾಯ್ಕ ಮಾತನಾಡಿ, `ನಮ್ಮ ಶಿಕ್ಷಣ ವ್ಯವಸ್ಥೆಯ ನಡುವೆ ಮರೆಯಾಗುತ್ತಿರುವ ನಮ್ಮ ಗ್ರಾಮೀಣ ಬದುಕಿನ ಸಂಸ್ಕೃತಿಯನ್ನು ಉಳಿಸುವ ರೀತಿಯಲ್ಲಿ ಆಯೋಜಿಸಿದ್ದ ಹೊಸ ಬಗೆಯ ಕಲಿಕಾ ಹಬ್ಬದ ಮಾದರಿಯನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆಗೆ ಕಳಿಸಿಕೊಡಲಾಗುವುದು' ಎಂದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಿ ಮಡಿವಾಳ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯ ಎನ್.ಜಿ. ನಾಯಕ, ಉಪನ್ಯಾಸಕ ಜಿ.ಎಸ್. ಭಟ್ಟ, ತಾಲ್ಲೂಕು ಪಂಚಾಯ್ತಿ ಇ.ಒ ಆರ್.ಎಲ್. ಭಟ್ಟ, ನಾಗರಾಜ ಗೌಡ, ಶಾಂತೇಶ ನಾಯಕ, ಸಿ.ಆರ್.ಪಿ. ರಾಜು ನಾಯಕ, ಭಾಗ್ಯಲಕ್ಷ್ಮಿ ಹೆಗಡೆ, ನಾಗರಾಜ ಶೇಟ್, ಶೈಲಜಾ ಆಚಾರಿ, ವಸಂತಲಕ್ಷ್ಮಿ, ಅಭವೃದ್ಧಿ ಸಮಿತಿ ಪದಾಧಿಕಾರಿಗಳು, ಗ್ರಾಮ ಪಂಚಾಯತಿ ಸದಸ್ಯರು ಪಾಲ್ಗೊಂಡಿದ್ದರು.
ಶೈಕ್ಷಣಿಕ ಸಾಧನೆ ಮಾಡಿದ ಶಿಕ್ಷಕರಾದ ನಾಗರಾಜ ಕೊಡಿಯಾ, ಕಸುಮಾ ನಾಯ್ಕ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಗಣ್ಯರು ಹಸಿರು ಬಣ್ಣದ ಕಲಿಕಾ ಟೋಪಿ, ಕೆಂಪು ಶಾಲು ಧರಿಸಿದ್ದು ವಿಶೇಷವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.