ಮುಂಡಗೋಡ: ಕನ್ನಡ ಪ್ರತಿಯೊಬ್ಬ ಕನ್ನಡಿಗನ ಹೃದಯದ ಭಾಷೆಯಾಗಿದೆ. ಕನ್ನಡ ಸಾಹಿತ್ಯಕ್ಕೆ ಡಾ.ದಿನಕರ ದೇಸಾಯಿ ಅವರು ಚುಟುಕುಗಳ ಮೂಲಕ ಅದ್ಭುತ ಕೊಡುಗೆಯನ್ನು ನೀಡಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎಸ್.ಫಕ್ಕೀರಪ್ಪ ಹೇಳಿದರು.
ಇಲ್ಲಿನ ಆದಿಜಾಂಭವ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗುರುವಾರ ನಡೆದ ಡಾ.ದಿನಕರ ದೇಸಾಯಿ ಅವರ 116ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ವಸಂತ ಕೊಣಸಾಲಿ ಮಾತನಾಡಿ, ಡಾ.ದಿನಕರ ದೇಸಾಯಿ ಅವರು ಜಿಲ್ಲೆಯ ಶ್ರೇಷ್ಠ ಕವಿಗಳಾಗಿ ನಾಡಿನಾದ್ಯಂತ ಹೆಸರು ಗಳಿಸಿದ ಸಾಹಿತಿಯಾಗಿದ್ದರು. ಕನ್ನಡ ಸಾಹಿತ್ಯವನ್ನು ಪ್ರತಿಯೊಬ್ಬರ ಮನೆ, ಮನಕ್ಕೆ ಮುಟ್ಟುವಂತ ಕೆಲಸ ಮಾಡಿದ್ದಾರೆ. ಚುಟುಕು ಸಾಹಿತ್ಯವು ಇಂದಿನ ದಿನಗಳಲ್ಲಿ ಹೆಚ್ಚು ಪ್ರಸ್ತುತವೆನಿಸುತ್ತಿದೆ. ಸಾಹಿತ್ಯವನ್ನು ಓದಿದಾಗ ಮಾತ್ರ, ಕವಿ, ಸಾಹಿತಿ, ಲೇಖಕನ ಅಂತರಾಳವನ್ನು ಅರಿಯಲು ಸಾಧ್ಯ. ನಾಡು, ನುಡಿಯ ವಿಷಯದಲ್ಲಿ ಕನ್ನಡಿಗರ ಒಗ್ಗಟ್ಟು ಹಿಂದೆಯೂ ಇತ್ತು. ಮುಂದೆಯೂ ಇರಲಿದೆ. ಸಾಹಿತ್ಯ ಪರಿಷತ್ತು ವತಿಯಿಂದ ಹೆಚ್ಚೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಶಿಕ್ಷಕ ಹಾಗೂ ಸಾಹಿತಿ ವಾಸುದೇವ ಮಡ್ಲಿ ಮಾತನಾಡಿದರು. ಮುಖ್ಯಶಿಕ್ಷಕ ಎಸ್.ಡಿ.ಮುಡೆಣ್ಣವರ, ಕೃಷ್ಣಾ ಗುಜಮಾಗಡಿ, ಎಸ್.ಕೆ.ಬೋರ್ಕರ, ಎಸ್.ಬಿ.ಹೂಗಾರ, ಸಂಗಪ್ಪ ಕೋಳೂರ, ಮಂಜುನಾಥ ಕಲಾಲ, ಸಂತೋಷ ಕುಸನೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.