ADVERTISEMENT

ಗರಡೊಳ್ಳಿಗೆ ಮುಖ್ಯ ಚುನಾವಣಾಧಿಕಾರಿ ಭೇಟಿ

ಮತದಾರರ ಪಟ್ಟಿ ಪರಿಶೀಲಿಸಿ, ಮತದಾನದ ಮಹತ್ವದ ತಿಳಿಸಿದ ಡಾ.ಸಂಜೀವ ಕುಮಾರ್

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2021, 16:22 IST
Last Updated 9 ಫೆಬ್ರುವರಿ 2021, 16:22 IST
ಹಳಿಯಾಳ ತಾಲ್ಲೂಕಿನ ಗರಡೊಳ್ಳಿಗೆ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಡಾ.ಸಂಜೀವ ಕುಮಾರ್ ಮಂಗಳವಾರ ಭೇಟಿ ನೀಡಿದರು. ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಚಿತ್ರದಲ್ಲಿದ್ದಾರೆ.
ಹಳಿಯಾಳ ತಾಲ್ಲೂಕಿನ ಗರಡೊಳ್ಳಿಗೆ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಡಾ.ಸಂಜೀವ ಕುಮಾರ್ ಮಂಗಳವಾರ ಭೇಟಿ ನೀಡಿದರು. ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಚಿತ್ರದಲ್ಲಿದ್ದಾರೆ.   

ಕಾರವಾರ: ರಾಜ್ಯ ಮುಖ್ಯ ಚುನಾವಣಾಧಿಕಾರಿ ಡಾ.ಸಂಜೀವ ಕುಮಾರ್ ಅವರು ಹಳಿಯಾಳ ತಾಲ್ಲೂಕಿನ ಸಾಂಬ್ರಾಣಿ ಹೋಬಳಿಯ ಗರಡೊಳ್ಳಿಗೆ ಮಂಗಳವಾರ ಭೇಟಿ ನೀಡಿದರು. ಬುಡಕಟ್ಟು ಸಮುದಾಯದ ಜನರೇ ಅಧಿಕವಿರುವ ಈ ಗ್ರಾಮದಲ್ಲಿ ಮತದಾರರ ಪಟ್ಟಿಯಲ್ಲಿ ಗ್ರಾಮಸ್ಥರ ಹೆಸರು ಸೇರ್ಪಡೆಯ ಬಗ್ಗೆ ಪರಿಶೀಲಿಸಿದರು.

ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದ ಬಳಿಕ ಅವರ ಅಹವಾಲುಗಳನ್ನು ಸ್ವೀಕರಿಸಿದರು. ಯುವ ಮತದಾರರ ಹೆಸರು ನೋಂದಣಿ, ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದವರ ಸೇರ್ಪಡೆ ಮುಂತಾದ ಎಲ್ಲ ಅಂಶಗಳನ್ನು ಖುದ್ದು ಕೂಲಂಕಷವಾಗಿ ವಿಚಾರಿಸಿದರು.

ಇದೇವೇಳೆ ಗ್ರಾಮಸ್ಥರೊಂದಿಗೆ ಮಾತನಾಡಿದ ಅವರು ಮತದಾನದ ಬಗ್ಗೆ ಜನರಿಗೆ ತಿಳಿವಳಿಕೆ ಹಾಗೂ ಚುನಾವಣೆಯ ಮಹತ್ವವನ್ನು ವಿವರಿಸಿದರು.

ADVERTISEMENT

‘ತಾವು ಬುಡಕಟ್ಟು ಜನಾಂಗಕ್ಕೆ ಸೇರಿದ್ದೀರಿ. ಮತದಾನ ಪ್ರಕ್ರಿಯೆಯಲ್ಲಿ ಎಲ್ಲರಂತೆ ಭಾಗವಹಿಸಲು ತಮಗೂ ಹಕ್ಕಿದೆ. ಈ ಮೂಲಕ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವ ಕೆಲಸ ತಮ್ಮಿಂದಲೂ ಆಗಬೇಕು. ಇದರ ಅರಿವು ಮೂಡಿಸುವ ಕಾರಣದಿಂದಲೇ ನಾನು ಈ ಹಳ್ಳಿಗೆ ಭೇಟಿ ನೀಡಿದ್ದೇನೆ. ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಪ್ರಕ್ರಿಯೆಯನ್ನು ಪರಿಶೀಲಿಸಿದ್ದೇನೆ’ ಎಂದರು.

ಬುಡಕಟ್ಟು ಜನರೇ ಅಧಿಕ

ಹಳಿಯಾಳ ತಾಲೂಕಿನ ಗರಡೊಳ್ಳಿ ಗ್ರಾಮದಲ್ಲಿ ಸುಮಾರು 80 ಮನೆಗಳಿದ್ದು, ಬುಡಕಟ್ಟು ಸಮುದಾಯದವರೇ ಪ್ರಮುಖರಾಗಿದ್ದಾರೆ. ಗ್ರಾಮದಲ್ಲಿ 150ಕ್ಕೂ ಅಧಿಕ ಮತದಾರರಿದ್ದಾರೆ. ಈ ರೀತಿ ಹಿಂದುಳಿದ ಪ್ರದೇಶಕ್ಕೆ ಮುಖ್ಯ ಚುನಾವಣಾಧಿಕಾರಿ ಮೊದಲ ಬಾರಿಗೆ ಭೇಟಿ ನೀಡಿದರು. ಅಲ್ಲದೇ ಮತದಾರರ ಪಟ್ಟಿ ಮತ್ತು ಚುನಾವಣೆಯ ಬಗ್ಗೆ ಜನಜಾಗೃತಿ ಮೂಡಿಸಿದ್ದು ವಿಶೇಷವಾಗಿದೆ.

ಜಿಲ್ಲಾಧಿಕಾರಿ ಡಾ.ಕೆ.ಹರೀಶ ಕುಮಾರ್, ಉಪ ವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ಕೂಡ ಸ್ಥಳದಲ್ಲಿ ಹಾಜರಿದ್ದು,ಮುಖ್ಯ ಚುನಾವಣಾಧಿಕಾರಿಗೆ ಮಾಹಿತಿ ನೀಡಿದರು. ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿದಾಗ ಗ್ರಾಮಸ್ಥರು ಸಾಂಪ್ರದಾಯಿಕವಾಗಿ ಸ್ವಾಗತಿಸಿದರು.

––––

* ಯಾವುದೇ ಕಾರಣಕ್ಕೂ ಮತದಾನ ಪ್ರಕ್ರಿಯೆಯಿಂದ ಹಿಂದುಳಿಯದೇ ಸಕ್ರಿಯವಾಗಿ ಭಾಗವಹಿಸಿ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಇದು ನಮ್ಮ ಆಶಯವೂ ಆಗಿದೆ.

– ಡಾ.ಸಂಜೀವ ಕುಮಾರ್, ರಾಜ್ಯ ಮುಖ್ಯ ಚುನಾವಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.