ADVERTISEMENT

ಕಾಂಗ್ರೆಸ್‌ನಿಂದ ಈಡಿಗ ಸಮುದಾಯಕ್ಕೆ ಅನ್ಯಾಯ: ಪ್ರಣವಾನಂದ ಸ್ವಾಮೀಜಿ ಆರೋಪ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2023, 5:34 IST
Last Updated 24 ಏಪ್ರಿಲ್ 2023, 5:34 IST
ಪ್ರಣವಾನಂದ ಸ್ವಾಮೀಜಿ
ಪ್ರಣವಾನಂದ ಸ್ವಾಮೀಜಿ    

ಕಾರವಾರ: ವಿಧಾನಸಭೆ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ಕಾಂಗ್ರೆಸ್ ನಾಮಧಾರಿ, ಈಡಿಗ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಆರೋಪಿಸಿದರು.

ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಾಮಧಾರಿ ಸಮುದಾಯ ಪ್ರಬಲವಾಗಿದೆ. ಪಕ್ಕದ ದಕ್ಷಿಣ ಕನ್ನಡದಲ್ಲಿಯೂ ಸಾಕಷ್ಟು ಜನರಿದ್ದಾರೆ. ಕಾಂಗ್ರೆಸ್ ಪಕ್ಷದ ಜತೆ ಸಮುದಾಯ ಬೆಂಬಲವಾಗಿ ನಿಂತಿತ್ತು. ಕುಮಟಾ, ಭಟ್ಕಳದಲ್ಲೂ ನಾಮಧಾರಿ ಸಮುದಾಯಕ್ಕೆ ಸೇರಿದ ಹಲವರು ಆಕಾಂಕ್ಷಿಗಳು ಅರ್ಜಿ ಹಾಕಿದ್ದರು. ಆದರೆ ಅವರಿಗೆ ಟಿಕೆಟ್ ನೀಡಿಲ್ಲ ಎಂದರು.

ದಕ್ಷಿಣ ಕನ್ನಡದಲ್ಲಿ ಐದು ಲಕ್ಷಕ್ಕೂ ಹೆಚ್ಚು ಮತದಾರರಿದ್ದರೂ ಒಂದೇ ಸೀಟು ನೀಡಲಾಗಿದೆ‌. ಕಡಿಮೆ ಮತದಾರರನ್ನು ಹೊಂದಿರುವ ಸಮುದಾಯಕ್ಕೆ ಎರಡು ಟಿಕೆಟ್ ಕೊಟ್ಟಿದ್ದಾರೆ. ಇದು ಸಮುದಾಯಕ್ಕೆ ಮಾಡಿದ ಅಪಮಾನ ಎಂದರು.

ADVERTISEMENT

ಸಮುದಾಯದಲ್ಲಿ ಸಂಘಟನೆಯ ಕೊರತೆ ಇದೆ. ಕಾಂಗ್ರೆಸ್ ನಲ್ಲಿರುವ ಸಮುದಾಯದ ಮುಖಂಡರಿಗೆ ಕೆಪಿಸಿಸಿ ಹುದ್ದೆ, ನಿಗಮ ಮಂಡಳಿಯಲ್ಲಿ ಸ್ಥಾನ ಕಲ್ಪಿಸಬೇಕು. ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಮುಂದಾಗಿದ್ದ ಮುಖಂಡರಲ್ಲಿ ಯಾರಾದರೂ ಒಬ್ಬರು ಅಥವಾ ಇಬ್ಬರನ್ನು ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

'ಈಡಿಗರಿಗೆ ಪಕ್ಷದಲ್ಲಿ ಉಂಟಾಗಿರುವ ಅನ್ಯಾಯದ ಬಗ್ಗೆ ರಾಹುಲ್ ಗಾಂಧಿ ಅವರ ಗಮನಕ್ಕೂ ತರಲಾಗಿದೆ' ಎಂದರು.

ವಾರದೊಳಗೆ ಈ ಬೇಡಿಕೆ ಈಡೇರಿಸದಿದ್ದರೆ ಸಮುದಾಯದಲ್ಲಿ ರಾಜಕೀಯ ಜಾಗೃತಿ ಮೂಡಿಸಿ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸುವ ಬಗ್ಗೆ ನಿರ್ಣಯಿಸಲಾಗುವುದು. ಬೇರೆ ಪಕ್ಷದ ಮುಖಂಡರೂ ಸಂಪರ್ಕಿಸುತ್ತಿದ್ದಾರೆ. ಆದರೆ ಸಾಮಾಜಿಕ ನ್ಯಾಯ ಪಾಲನೆಗೆ ಕಾಂಗ್ರೆಸ್ ಆದ್ಯತೆ ನೀಡುವ ಕಾರಣ ಸಿದ್ಧಾಂತ ಬಿಟ್ಟು ಬೇರೆಯವರಿಗೆ ಬೆಂಬಲಿಸಲು ಈಗಲೆ ನಿರ್ಧರಿಸಿಲ್ಲ' ಎಂದರು.

ಈಡಿಗ ಮಹಾಮಂಡಳದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಕಾರ್ಯದರ್ಶಿ ಉಲ್ಲಾಸ ನಾಯ್ಕ, ದಿನೇಶ ನಾಯ್ಕ, ಮಹಾಬಲೇಶ್ವರ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.