ಕಾರವಾರ: ಜಿಲ್ಲೆಯಾದ್ಯಂತ ಗಾಳಿ, ಮಳೆಯ ಅಬ್ಬರ ಜೋರಾಗಿದ್ದು ತೀವೃ ಚಳಿಯ ವಾತಾವರಣ ಸೃಷ್ಟಿಯಾಗಿದೆ. ಹವಾಮಾನ ವೈಪರಿತ್ಯದ ಪರಿಣಾಮವಾಗಿ ಯಾಂತ್ರೀಕೃತ ಮೀನುಗಾರಿಕೆ ದೋಣಿಗಳು ದಡದಲ್ಲೇ ಲಂಗರು ಹಾಕುವಂತಾಗಿದೆ.
ಕಳೆದ ನಾಲ್ಕೈದು ದಿನಗಳಿಂದ ಹದವಾಗಿ ಸುರಿಯುತ್ತಿದ್ದ ಮಳೆಯು ಭಾನುವಾರ ಸಂಜೆಯ ಬಳಿಕ ಬಿರುಸುಗೊಂಡಿದೆ. ಸೋಮವಾರ ದಿನವಿಡೀ ಮಳೆ ಸುರಿದಿದೆ. ಜೊತೆಗೆ ರಭಸದ ಗಾಳಿಯೂ ಆಗಾಗ ಬೀಸತೊಡಗಿದೆ. ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು ಆಳೆತ್ತರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ.
ನಿರಂತರ ಮಳೆಯಿಂದಾಗಿ ಕಾಳಿನದಿ, ಅದರ ಉಪನದಿಗಳಲ್ಲಿ ಹರಿವು ಹೆಚ್ಚಿದ್ದು ಪ್ರಮುಖ ಜಲಾಶಯಗಳಿಗೆ ಒಳಹರಿವಿನ ಪ್ರಮಾಣದಲ್ಲೂ ಏರಿಕೆಯಾಗಿದೆ. ಸೂಪಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ 31,762 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಕೊಡಸಳ್ಳಿ ಜಲಾಶಯಕ್ಕೆ 14 ಸಾವಿರ ಕ್ಯೂಸೆಕ್, ಕದ್ರಾ ಜಲಾಶಯಕ್ಕೆ 21 ಸಾವಿರ ಕ್ಯೂಸೆಕ್‌ನಷ್ಟು ನೀರು ಹರಿದುಬರುತ್ತಿದೆ. ಒಂದೇ ದಿನದಲ್ಲಿ ಪ್ರಮುಖ ಜಲಾಶಯಗಳಿಗೆ ಒಳಹರಿವು ದುಪ್ಪಟ್ಟಾಗಿದೆ.
ವಾಯುಭಾರ ಕುಸಿತದ ಪರಿಣಾಮವಾಗಿ ಸಮುದ್ರದಲ್ಲಿ ಗಾಳಿಯ ವೇಗ ಹೆಚ್ಚಿದ್ದು ಕಳೆದ ಐದು ದಿನಗಳಿಂದ ಯಾಂತ್ರೀಕೃತ ದೋಣಿಗಳು ಮೀನುಗಾರಿಕೆ ಸ್ಥಗಿತಗೊಳಿಸಿವೆ. ಸ್ಥಳೀಯ ದೋಣಿಗಳ ಜೊತೆಗೆ ಗೋವಾ ರಾಜ್ಯದ ವಾಸ್ಕೋ ಭಾಗದ ದೋಣಿಗಳನ್ನೂ ಇಲ್ಲಿನ ಬೈತಕೋಲದ ಮೀನುಗಾರಿಕೆ ಬಂದರು ಸಮೀಪ ನಿಲುಗಡೆ ಮಾಡಲಾಗಿದೆ.
‘ಮೀನುಗಾರಿಕೆ ಆರಂಭಗೊಂಡ ಎರಡು ವಾರದೊಳಗೆ ಹವಾಮಾನ ವೈಪರೀತ್ಯ ಸ್ಥಿತಿ ಎದುರಾಗಿದ್ದು, ಐದು ದಿನಗಳಿಂದ ದೋಣಿಗಳನ್ನು ನಿಲುಗಡೆ ಮಾಡಿದ್ದೇವೆ. ಕೆಲವು ದೋಣಿಗಳು ಗೋವಾದ ಬಂದರುಗಳಲ್ಲಿ ಆಸರೆ ಪಡೆದುಕೊಂಡಿವೆ’ ಎಂದು ಟ್ರಾಲರ್ ದೋಣಿ ಮಾಲೀಕ ಸುಭಾಷ ದುರ್ಗೇಕರ ತಿಳಿಸಿದ್ದಾರೆ.
ಸಸತ ಮಳೆ ಬಿದ್ದ ಮರ: ರಸ್ತೆ ಸಂಚಾರ ಅಸ್ತವ್ಯಸ್ತ
ದಾಂಡೇಲಿ: ಭಾನುವಾರ ರಾತ್ರಿ ಸುರಿದ ಮಳೆಯಿಂದ ದೊಡ್ಡ ಗುಲ್ಮೊಹರ್ ಮರವೊಂದು ಕೆ.ಎಸ್. ಆರ್. ಟಿ. ಸಿ. ಡಿಪೊ ಎದುರಿರುವ ದಾಂಡೇಲಿ ರಿವರ್ ರೇಸಾರ್ಟ್‌ಗೆ ಸೇರಿರುವ ಕಟ್ಟಡದ ಮೇಲೆ ಬಿದ್ದು ಕಟ್ಟಡ ಸಂಪೂರ್ಣ ನೆಲಸಮವಾಗಿದೆ. ಮರಬಿದ್ದಿದ್ದರಿಂದ ಹಳೇ ದಾಂಡೇಲಿಯಿಂದ ಪಟೇಲ್ ನಗರಕ್ಕೆ ಹೋಗುವ ರಸ್ತೆ ಸಂಪೂರ್ಣ ಬಂದಾಗಿತ್ತು. ವಿದ್ಯುತ್ ಕಂಬ ಮತ್ತು ಕಟ್ಟಡದ ಒಳಗಡೆ ವಿದ್ಯುತ್ ಮೀಟರ್‌ನಲ್ಲಿ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹತ್ತಿಕೊಂಡಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಯಾವುದೇ ಸಾವು ನೋವು ಹಾನಿ ಸಂಭವಿಸಿಲ್ಲ. ದಾಂಡೇಲಿ ಎಸಿಎಫ್ ಸಂತೋಷ ಚೌಹಾಣ್ ಆರ್. ಎಫ್‌ಒ ನದಾಫ್ ಸ್ಥಳಕ್ಕೆ ಭೇಟಿ ನೀಡಿ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇದೇ ರಸ್ತೆಯಲ್ಲಿ ಬ್ರಿಟಿಷ್ ಕಾಲದ ಹಳೇ ಮರದ ಕೊಂಬೆಗಳು ರಸ್ತೆಗೆ ಚಾಚಿಕೊಂಡು ಶಿಥಿಲ ಸ್ಥಿತಿಯಲ್ಲಿವೆ. ಕೆಳಗೆ ಕೊಂಬೆಗಳ ವಿದ್ಯುತ್ ಲೈನ್ ಹಾದು ಹೋಗಿದ್ದು ಕೂಡಲೇ ನಗರಸಭೆ ಅರಣ್ಯ ಇಲಾಖೆ ಮತ್ತು ಹೆಸ್ಕಾಂ ಸಿಬ್ಬಂದಿ ಸೂಕ್ತ ಕ್ರಮ ಕೈಗೊಂಡು ಆಗಬಹುದಾದ ಅನಾಹುತ ತಪ್ಪಿಸಿ ಎಂದು ಸ್ಥಳೀಯರು ನಾಗರಿಕರು ಒತ್ತಾಯಿಸಿದ್ದಾರೆ. ಬರ್ಚಿ ರಸ್ತೆಯಲ್ಲಿ ಕಾರಿನ ಮೇಲೆ ಬಿದ್ದ ಮರ: ಮಳೆಯಿಂದಾಗಿ ದಾಂಡೇಲಿಯಿಂದ ಬರ್ಚಿ ಕಡೆ ಹೋಗುತ್ತಿದ್ದ ಕಾರಿನ ಮೇಲೆ ಮರ ಬಿದಿದ್ದು ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಮೂರು ಮನೆಗಳಿಗೆ: ಹಾನಿ
ಕುಮಟಾ: ತಾಲ್ಲೂಕಿನಲ್ಲಿ ಸೋಮವಾರ ಸುರಿದ ತೀವ್ರ ಗಾಳಿ ಮಳೆಯಿಂದಾಗಿ ಮೂರು ಮನೆಗಳಿಗೆ ಹಾನಿಯಾಗಿ ಒಟ್ಟು ₹1.57 ಲಕ್ಷ ಹಾನಿ ಆಗಿದೆ ಎಂದು ತಹಶೀಲ್ದಾರ್ ಕೃಷ್ಣ ಕಾಮಕರ್ ತಿಳಿಸಿದ್ದಾರೆ. ಪಟ್ಟಣದ ಸೋನಾರಕೇರಿಯ ಶೈಲಾ ಮಡಿವಾಳ ಎಂಬುವವರ ಮನೆಯ ಮೇಲೆ ಮರ ಬಿದ್ದ ಪರಿಣಾಮ ಮೇಲ್ಚಾವಣಿ ಕುಸಿದು ₹1.30 ಲಕ್ಷ ಹಾನಿ ಸಂಭವಿಸಿದೆ. ತಾಲ್ಲೂಕಿನ ಹೊಲನಗದ್ದೆಯ ರಮಾಕಾಂತ ಹರಿಕಂತ್ರ ಎಂಬುವವರ ಮನೆಯ ಮೇಲ್ಚಾವಣಿ ಹಾಗೂ ಗೋಡೆ ಕುಸಿದು ₹15 ಸಾವಿರ ಹಾನಿ ಸಂಭವಿಸಿದೆ. ತಾಲ್ಲೂಕಿನ ಮೂರೂರು ಗ್ರಾಮದ ವಿಷ್ಣು ಕೊಡಿಯಾ ಎನ್ನುವವರ ಮನೆಯ ಚಾವಣಿ ಕುಸಿದು ₹12 ಸಾವಿರ ಹಾನಿ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.