ADVERTISEMENT

ಕಾರವಾರ ನಗರಸಭೆ ಬಜೆಟ್: ₹ 44.69 ಕೋಟಿ ಆದಾಯ ನಿರೀಕ್ಷೆ

₹ 39 ಲಕ್ಷ ಉಳಿತಾಯ ಬಜೆಟ್ ಮಂಡನೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2022, 12:53 IST
Last Updated 19 ಮಾರ್ಚ್ 2022, 12:53 IST
ಕಾರವಾರ ನಗರಸಭೆಯಲ್ಲಿ ಅಧ್ಯಕ್ಷ ಡಾ.ನಿತಿನ್ ಪಿಕಳೆ ಶನಿವಾರ ಬಜೆಟ್ ಮಂಡನೆ ಮಾಡಿದರು. ಉಪಾಧ್ಯಕ್ಷ ಪ್ರಕಾಶ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತಾ ಥಾಮ್ಸೆ ಮತ್ತು ಆಯುಕ್ತ ಆರ್.ಪಿ.ನಾಯ್ಕ ಇದ್ದಾರೆ
ಕಾರವಾರ ನಗರಸಭೆಯಲ್ಲಿ ಅಧ್ಯಕ್ಷ ಡಾ.ನಿತಿನ್ ಪಿಕಳೆ ಶನಿವಾರ ಬಜೆಟ್ ಮಂಡನೆ ಮಾಡಿದರು. ಉಪಾಧ್ಯಕ್ಷ ಪ್ರಕಾಶ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತಾ ಥಾಮ್ಸೆ ಮತ್ತು ಆಯುಕ್ತ ಆರ್.ಪಿ.ನಾಯ್ಕ ಇದ್ದಾರೆ   

ಕಾರವಾರ: ನಗರಸಭೆಗೆ 2022– 23ನೇ ಸಾಲಿನಲ್ಲಿ ₹ 44.69 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ₹ 44.30 ಕೋಟಿ ಖರ್ಚು ಇರಬಹುದು. ಒಟ್ಟು ₹ 39 ಲಕ್ಷ ಉಳಿತಾಯ ಆಗಬಹುದು ಎಂದು ಅಂದಾಜಿಸಲಾಗಿದೆ.

ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ ಶನಿವಾರ ಮಂಡಿಸಿದ ಬಜೆಟ್‌ನಲ್ಲಿ ಈ ಅಂಶಗಳನ್ನು ಪ್ರಸ್ತಾಪಿಸಿದರು.

ಹೊಸ ಖರ್ಚು: ನಗರಸಭೆ ಅಧ್ಯಕ್ಷರಿಗೆ ಹೊಸ ಕಾರು ಖರೀದಿಸಲು ₹ 25 ಲಕ್ಷ, ಶಿರವಾಡದಲ್ಲಿ ಗೋಶಾಲೆ ನಿರ್ಮಾಣಕ್ಕೆ ₹ 25 ಲಕ್ಷ ಮತ್ತು ವೃದ್ಧಾಶ್ರಮ ನಿರ್ಮಾಣಕ್ಕೆ ₹ 20 ಲಕ್ಷ, ಕಡಲತೀರದಲ್ಲಿರುವ ಹಳೆಯ ಮೀನುಮಾರುಕಟ್ಟೆ ಕಟ್ಟಡವನ್ನು ಮಾರ್ಪಡಿಸಿ, ಹಳೆ ಬಟ್ಟೆಗಳನ್ನು ಸಂಗ್ರಹಿಸಿ ಬಡವರಿಗೆ ವಿತರಿಸಲು ಬಳಕೆ ಮಾಡಲು ₹ 5 ಲಕ್ಷವನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ.

ADVERTISEMENT

ಉಳಿದಂತೆ, ರಸ್ತೆಗಳ ನಿರ್ಮಾಣ ಮತ್ತು ನವೀಕರಣಕ್ಕೆ ₹ 1.70 ಕೋಟಿ, ಚರಂಡಿ ನಿರ್ಮಾಣ, ನಿರ್ವಹಣೆ ಮತ್ತು ಸ್ಲ್ಯಾಬ್ ಅಳವಡಿಕೆಗೆ ₹ 1.65 ಕೋಟಿ, ಚರಂಡಿಗಳಿಂದ ಹೂಳು ತೆಗೆಯಲು ₹ 1.15 ಕೋಟಿ, ಉದ್ಯಾನಗಳ ನಿರ್ಮಾಣ ಮತ್ತು ನಿರ್ವಹಣೆಗೆ ₹ 1 ಕೋಟಿ, ಒಳಚರಂಡಿ ಉನ್ನತೀಕರಣ ಮತ್ತು ಕೋಣೆನಾಲಾ ಅಭಿವೃದ್ಧಿಗೆ ₹ 4.50 ಕೋಟಿ ನಿಗದಿ ಮಾಡಲಾಗಿದೆ.

ಜಲಮಂಡಳಿಯಿಂದ ನೀರು ಖರೀದಿಗೆ ₹ 1 ಕೋಟಿ, ಬೀದಿ ದೀಪಗಳ ವಿದ್ಯುತ್ ಶುಲ್ಕ ಪಾವತಿಗೆ ₹ 5.50 ಕೋಟಿ, ಸಿಬ್ಬಂದಿ ವೇತನಕ್ಕಾಗಿ ₹ 3.49 ಕೋಟಿ, ಹೊರಗುತ್ತಿಗೆಯಡಿ ಬೀದಿ ಸ್ವಚ್ಛತೆಗೆ ಪೌರಕಾರ್ಮಿಕರ, ವಾಹನ ಚಾಲಕರ ಪೂರೈಕೆ, ಎಸ್.ಟಿ.ಪಿ, ಕಡಲತೀರ ನಿರ್ವಹಣೆ ಮತ್ತು ಶಿರವಾಡದ ತ್ಯಾಜ್ಯ ವಿಲೇವಾರಿ ಘಟಕದ ನಿರ್ವಹಣೆಗೆ ಒಟ್ಟು ₹ 2.15 ಕೋಟಿ ಹಣ ಮೀಸಲಿಡಲಾಗಿದೆ.

ಉಳಿದಂತೆ, ನಗರದಲ್ಲಿ ವಾಹನ ನಿಲುಗಡೆ ವ್ಯವಸ್ಥೆ, ಸೂಚನಾ ಫಲಕಗಳು, ಫೈಬರ್ ರಸ್ತೆ ವಿಭಜಕಗಳ ಅಳವಡಿಕೆ, ಎಲ್ಲ ವಾರ್ಡ್‌ಗಳಲ್ಲಿ ನಾಮಫಲಕಗಳನ್ನು ಅಳವಡಿಸುವುದು ಸೇರಿದಂತೆ ವಿವಿಧ ಯೋಜನೆಗಳಿಗೆ ಬಜೆಟ್‌ನಲ್ಲಿ ಹಣ ನಿಗದಿ ಮಾಡಲಾಗಿದೆ.

ಸಭಾತ್ಯಾಗ:

ಸಭೆಯ ಆರಂಭದಲ್ಲಿ ಸದಸ್ಯ ಗಣಪತಿ ನಾಯ್ಕ ಮಾತನಾಡಿ, ‘ಮುಲ್ಲಾ ಸ್ಟಾಪ್‌ನಲ್ಲಿ ವಾಣಿಜ್ಯ ಕಟ್ಟಡವೊಂದನ್ನು ನಿಯಮ ಬಾಹಿರವಾಗಿ ನಿರ್ಮಿಸಲಾಗಿದೆ. ಅದರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ? ಈ ಬಗ್ಗೆ ಮೂರು ಸಭೆಗಳಲ್ಲಿ ಕೇಳಲಾಗಿದೆ’ ಎಂದರು.

ಆಯುಕ್ತ ಆರ್.ಪಿ.ನಾಯ್ಕ ಮತ್ತು ಅಧ್ಯಕ್ಷ ಡಾ.ನಿತಿನ್ ಪಿಕಳೆ, ‘ಬಜೆಟ್ ಮಂಡನೆಯ ನಂತರ ಚರ್ಚಿಸೋಣ. ಕಟ್ಟಡದ ಕಾರ್ಯ ನಿರ್ವಹಣೆಗೆ ನಗರಸಭೆಯಿಂದ ಅನುಮತಿ ನೀಡಿಲ್ಲ. ಅದರ ಮಾಲೀಕರಿಗೆ ನ್ಯಾಯಾಲಯದಿಂದ ನೋಟಿಸ್ ಜಾರಿ ಮಾಡಲಾಗಿದೆ’ ಎಂದರು.

ಇದರಿಂದ ಸಮಾಧಾನಗೊಳ್ಳದ ಗಣಪತಿ, ‘ನೀವು ಬಜೆಟ್ ಭಾಷಣ ಮಾಡ್ಕೊಳ್ಳಿ. ನಾನು ಹೋಗುತ್ತೇನೆ’ ಎಂದು ಸಭೆಯಿಂದ ಹೊರಟು ಹೋದರು.

----

* ಸ್ವಚ್ಛ ಸರ್ವೇಕ್ಷಣೆಯಲ್ಲಿ ‘ತ್ರೀ ಸ್ಟಾರ್‌’ ಪಡೆಯಲು ಅರ್ಜಿ ಸಲ್ಲಿಸಲಾಗಿದೆ. ಮುಂದಿನ ತಿಂಗಳು ಅಧಿಕಾರಿಗಳ ತಂಡ ಪರಿಶೀಲಿಸಲಿದೆ. ಎಲ್ಲ ವಾರ್ಡ್‌ಗಳನ್ನು ಸ್ವಚ್ಛವಾಗಿಡಲು ಸಹಕರಿಸಿ.

- ಆರ್.ಪಿ.ನಾಯ್ಕ, ನಗರಸಭೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.