ADVERTISEMENT

ಕಾರವಾರ: ಪ್ರೇಕ್ಷಕರ ಮೆಚ್ಚುಗೆ ಪಡೆದ ಶ್ವಾನಗಳು

ಸಂಯಮ, ಚಾಕಚಕ್ಯತೆ ಪ್ರದರ್ಶಿಸಿ ಭದ್ರತಾ ಪಡೆಯ ಶ್ವಾನ:ಆಕರ್ಷಿಸಿದ ಹಲವು ತಳಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 5:07 IST
Last Updated 28 ಡಿಸೆಂಬರ್ 2025, 5:07 IST
ಕಾರವಾರದಲ್ಲಿ ನಡೆದ ಶ್ವಾನ ಪ್ರದರ್ಶನದಲ್ಲಿ ಕೇಂದ್ರೀಯ ಕೈಗಾರಿಕೆ ಭದ್ರತಾ ಪಡೆಯ ಶ್ವಾನ ಸಾಹಸ ಪ್ರದರ್ಶಿಸಿತು.
ಕಾರವಾರದಲ್ಲಿ ನಡೆದ ಶ್ವಾನ ಪ್ರದರ್ಶನದಲ್ಲಿ ಕೇಂದ್ರೀಯ ಕೈಗಾರಿಕೆ ಭದ್ರತಾ ಪಡೆಯ ಶ್ವಾನ ಸಾಹಸ ಪ್ರದರ್ಶಿಸಿತು.   

ಕಾರವಾರ: ಸ್ಫೋಟಕಗಳನ್ನು ಜೀವಭಯವಿಲ್ಲದೆ ಹಿಡಿದು ತರುವ, ತರಬೇತುದಾರನ ಪ್ರತಿ ಆಣತಿಯನ್ನೂ ಚಾಚೂತಪ್ಪದೆ ಪಾಲಿಸುವ ಕೇಂದ್ರೀಯ ಕೈಗಾರಿಕೆ ಭದ್ರತಾ ಪಡೆ (ಸಿಐಎಸ್‌ಎಫ್) ಮತ್ತು ಪೊಲೀಸ್ ಇಲಾಖೆಯ ತರಬೇತಿ ಹೊಂದಿದ ಶ್ವಾನಗಳ ನಡೆಗೆ ಭರಪೂರ ಕರತಾಡನ ಸಿಕ್ಕವು. ಬಗೆಬಗೆಯ ತಳಿಯ ಶ್ವಾನಗಳನ್ನು ಕಂಡು ಜನರು ಖುಷಿಪಟ್ಟರು.

ಇಲ್ಲಿನ ಮಾಲಾದೇವಿ ಮೈದಾನದಲ್ಲಿ ಕರಾವಳಿ ಉತ್ಸವ ಸಪ್ತಾಹದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಶ್ವಾನ ಪ್ರದರ್ಶನ ಇಂತಹ ಸನ್ನಿವೇಶಗಳಿಗೆ ಸಾಕ್ಷಿಯಾಯಿತು.

ಪೊಲೀಸ್ ಇಲಾಖೆಯ ಶ್ವಾನಗಳಾದ ಶೈನಿ, ಮಾರ್ವೆಲ್, ಅಕಿರಾ ಹಾಗೂ ಸಿಐಎಸ್‌ಎಫ್‌ನ ಐರಾ, ಅಭಯ್, ಭೈರವ್ ಶ್ವಾನಗಳ ಶಿಸ್ತು, ಸಂಯಮ ಜನರನ್ನು ಬೆರಗುಗೊಳಿಸಿತು. ಶ್ವಾನಗಳ ಜಾಣ ನಡೆಗೆ ಪ್ರೇಕ್ಷಕರು ಕರತಾಡನದ ಮೂಲಕ ಮೆಚ್ಚುಗೆ ಸೂಚಿಸಿದರು. ಎರಡೂ ತಂಡಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ತಲಾ ₹10 ಸಾವಿರ ನಗದು ಬಹುಮಾನ ನೀಡಿದರು.

ADVERTISEMENT

ಸ್ಥಳೀಯರಷ್ಟೆ ಅಲ್ಲದೆ ಹೊರಜಿಲ್ಲೆಗಳಿಂದಲೂ ವಿವಿಧ ತಳಿಯ ಶ್ವಾನಗಳನ್ನು ಪ್ರದರ್ಶನಕ್ಕೆ ತರಲಾಗಿತ್ತು. 21 ತಳಿಯ 52 ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಟಿಬೆಟಿಯನ್ ಮಾಸ್ಟಿಫ್, ಲ್ಯಾಬ್ರಡರ್, ಜರ್ಮನ್ ಶೆಪರ್ಡ್, ಗೋಲ್ಡನ್ ರಿಟ್ರಿವರ್, ಮುಧೋಳ ಹೌಂಡ್, ಪೊಮೇರಿಯನ್, ವೇನಸ್ ಕಾರ್ಗಿ, ರಾಜ ಪಾಳ್ಯಮ್, ಬೆಲ್ಜಿಯನ್ ಮೆಲಿನೊಯ್ಸ್ ತಳಿಗಳ ಶ್ವಾನಗಳು ಆಕರ್ಷಕ ಎನಿಸಿದವು. 11 ಮುದ್ದಾದ ನಾಯಿಮರಿಗಳು ಪ್ರೇಕ್ಷಕರನ್ನು ರಂಜಿಸಿದವು.

ಅಂತರಾಷ್ಟ್ರೀಯ ಖ್ಯಾತಿಯ ಶ್ವಾನ ತರಬೇತುದಾರ ಕುಮಾರ್ ರಿಚ್ ಪ್ರದರ್ಶಿಸಿದ ಬೆಲ್ಜಿಯಂ ಮೆಲಿನಾಯ್ಸ್ ತಳಿಯ ಡ್ಯೂಕ್ ರಕ್ಷಣಾ ಚಾಕಚಕ್ಯತೆ ಗಮನಸೆಳೆಯಿತು. ಬರ್ಲಿನ್ ಶ್ವಾನದ ಚಾಕಚಕ್ಯತೆಗೆ ಜನರು ಮನಸೋತರು. ಶ್ವಾನಗಳ ಸ್ಪರ್ಧೆಯಲ್ಲಿ ಸುನೀಲ್ ಉಡಾಡಿ ಅವರ ಜರ್ಮನ್ ಶೆಫರ್ಡ್ ಶ್ವಾನಕ್ಕೆ ಪ್ರಥಮ, ವೆಂಕಪ್ಪ ನವಲಗಿ ಮುಧೋಳ ಅವರ ಮುಧೋಳ ತಳಿ ಶ್ವಾನಕ್ಕೆ ದ್ವಿತೀಯ, ಸುಹಾಸ್ ದಾವಣಗೆರೆ ಅವರ ಬೀಗಲ್ ತಳಿ ಶ್ವಾನಕ್ಕೆ ತೃತೀಯ ಬಹುಮಾನ ಲಭಿಸಿತು. ಶ್ವಾನ ಮರಿಗಳ (ಪಪ್ಪಿ) ವಿಭಾಗದಲ್ಲಿ ಹನುಮಂತಪ್ಪ ನಿಪ್ಪಾಣಿ ಅವರ ಬೆಲ್ಜಿಯಂ ಮೆಲಿನೊಯ್ಸ್ ತಳಿಯ ಮರಿಗೆ ಮೊದಲ ಸ್ಥಾನ ಲಭಿಸಿತು. ಡಾ.ಲೋಕೇಶ್, ಡಾ.ಮಾಧವ ಜಿ.ಕೆ ನಿರ್ಣಾಯಕರಾಗಿದ್ದರು.

ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ, ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಕೆ.ಎಂ.ಮೋಹನ ಕುಮಾರ್, ರಾಘವೇಂದ್ರ ಭಟ್, ಇತರರು ಪಾಲ್ಗೊಂಡಿದ್ದರು.

ಶ್ವಾನ ಪ್ರದರ್ಶನದಲ್ಲಿ ಶ್ವಾನ ಮರಿ ವಿಭಾಗದಲ್ಲಿ ಮೊದಲ ಬಹುಮಾನ ಪಡೆದ ಹನುಂತಪ್ಪ ನಿಪ್ಪಾಣಿ ಅವರ ಬೆಲ್ಜಿಯಂ ಮೆಲೊನೊಯ್ಸ್ ನಾಯಿಮರಿಗೆ ಬಹುಮಾನವನ್ನು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ವಿತರಿಸಿದರು.
ಕರಾವಳಿ ಉತ್ಸವ ಸಪ್ತಾಹದಲ್ಲಿ ಗಾಯಕ ರಾಜೇಶ್ ಕೃಷ್ಣನ್ ಮತ್ತು ಗಾಯಕಿ ಮಾನಸಾ ಹೊಳ್ಳ ಸಂಗೀತ ಪ್ರಸ್ತುತಪಡಿಸಿದರು

ರಾಜೇಶ್ ಕೃಷ್ಣನ್ ಗಾನಸುಧೆ

ಕನ್ನಡದ ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಅವರ ಗಾನಸುಧೆಗೆ ಸಹಸ್ರಾರು ಪ್ರೇಕ್ಷಕರು ತಲೆದೂಗಿದರು. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಹಾಡಿದ್ದ ಹಳೆಯ ಕನ್ನಡ ಗೀತೆಗಳ ಜೊತೆಗೆ ತಾವೇ ಹಾಡಿದ ಹೊಸ ಹಾಡುಗಳನ್ನು ರಾಜೇಶ್ ಹಾಡಿದರು. ಅವರಿಗೆ ಗಾಯಕಿ ಮಾನಸ ಹೊಳ್ಳ ಗಾಯನಕ್ಕೆ ಜತೆಯಾದರು. ಸುಮಾರು ಎರಡು ತಾಸುಗಳ ಕಾಲ ಗಾನಸುಧೆಯ ಮೂಲಕ ರಂಜಿಸಿದರು.

ಇಂದು ಸಮಾರೋಪ: ಡಿಸಿಎಂ ಭಾಗಿ

ಕಳೆದ ಆರು ದಿನಗಳಿಂದ ಟ್ಯಾಗೋರ್ ಕಡಲತೀರಕ್ಕೆ ಜನರನ್ನು ಆಕರ್ಷಿಸುತ್ತಿರುವ ಕರಾವಳಿ ಉತ್ಸವ ಸಪ್ತಾಹಕ್ಕೆ ಭಾನುವಾರ ರಾತ್ರಿ ತೆರೆಬೀಳಲಿದೆ. ಸಂಜೆ 7 ಗಂಟೆಗೆ ಮಯೂರ ವರ್ಮ ವೇದಿಕೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ಸಮಾರೋಪ ಸಮಾರಂಭದ ಬಳಿಕ ಪಂಜಾಬಿ ಗಾಯಕ ದಲೇರ್ ಮೆಹಂದಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಉತ್ಸವದ ಕೊನೆಯ ದಿನ ಈ ಕಾರ್ಯಕ್ರಮ ಆಕರ್ಷಣೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.