ADVERTISEMENT

ಉತ್ತರ ಕನ್ನಡ: ಜಿಲ್ಲೆಯಲ್ಲಿ ಅಗ್ನಿ ನಂದಕ ವಾಹನಗಳ ಕೊರತೆ

15 ವರ್ಷ ಹಳೆಯ ವಾಹನ ಮೂಲೆಗೆ: ಸವಾಲುಗಳ ನಡುವೆ ಕೆಲಸ

ಗಣಪತಿ ಹೆಗಡೆ
Published 24 ಮಾರ್ಚ್ 2025, 7:04 IST
Last Updated 24 ಮಾರ್ಚ್ 2025, 7:04 IST
ಕಾರವಾರದ ಕೋಡಿಬಾಗದಲ್ಲಿ ಕಾರಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು
ಕಾರವಾರದ ಕೋಡಿಬಾಗದಲ್ಲಿ ಕಾರಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು   

ಕಾರವಾರ: ಬಿಸಿಲ ಝಳ ಹೆಚ್ಚಿದಂತೆ ಅಗ್ನಿ ಅವಘಡ ಸಂಭವಿಸುವುದು ಹೆಚ್ಚು. ಅಂತಹ ಸಂದರ್ಭದಲ್ಲಿ ತ್ವರಿತವಾಗಿ ಕಾರ್ಯಾಚರಿಸಲು ಜಿಲ್ಲೆಯಲ್ಲಿ ಅಗ್ನಿಶಾಮಕ ದಳ ಸವಾಲುಗಳನ್ನು ಎದುರಿಸಬೇಕಾದ ಸ್ಥಿತಿ ಇದೆ.

ಭೌಗೋಳಿಕವಾಗಿ ವಿಸ್ತಾರವಾದ ಜಿಲ್ಲೆಯಲ್ಲಿ ಸರಾಸರಿ ಪ್ರತಿ 30ರಿಂದ 40 ಕಿ.ಮೀ ದೂರದಲ್ಲಿ ಅಗ್ನಿನಂದಕ ವಾಹನಗಳ ಲಭ್ಯತೆ ಇದೆ. 12 ತಾಲ್ಲೂಕುಗಳ ಪೈಕಿ ದಾಂಡೇಲಿ ಹೊರತುಪಡಿಸಿ ಉಳಿದೆಡೆಗಳಲ್ಲಿ ವಾಹನಗಳಿದ್ದರೂ 4,500 ಲೀಟರ್ ನೀರು ಸಂಗ್ರಹಣಾ ಸಾಮರ್ಥ್ಯದ ವಾಹನಗಳಿರುವುದು ಕೇವಲ 7 ಮಾತ್ರ. 3 ವಾಹನಗಳು ಕೇವಲ 500 ಲೀಟರ್ ಸಂಗ್ರಹಣಾ ಸಾಮರ್ಥ್ಯ ಹೊಂದಿವೆ.

15 ವರ್ಷಕ್ಕಿಂತ ಹಳೆಯದಾದ ವಾಹನಗಳ ನೋಂದಣಿ ನವೀಕರಣ ರದ್ದುಪಡಿಸಿದ ಬೆನ್ನಲ್ಲೇ ಜಿಲ್ಲೆಯಲ್ಲಿ ಐದಕ್ಕೂ ಹೆಚ್ಚು ವಾಹನಗಳು ಮೂಲೆಗೆ ಸೇರಿವೆ. ಭಟ್ಕಳದ ಅಗ್ನಿನಂದಕ ವಾಹನವೊಂದನ್ನು ಈಚೆಗಷ್ಟೆ ಬದಿಗೆ ಸರಿಸಿಡಲಾಗಿದೆ.

ADVERTISEMENT

‘21 ಮೀಟರ್‌ಗಿಂತ ಎತ್ತರದ ಕಟ್ಟಡ ನಿರ್ಮಿಸಿದರೆ ಅಗ್ನಿ ಅವಘಡದ ವೇಳೆ ಕಾರ್ಯಾಚರಣೆ ಕಷ್ಟ. ಜಿಲ್ಲೆಯಲ್ಲಿ ಅಂತಹ ಕಟ್ಟಡಗಳ ಸಂಖ್ಯೆ ತೀರಾ ಕಡಿಮೆ ಇದೆ. ಕಟ್ಟಡ ಎತ್ತರಿಸುವ ಮುನ್ನ ಅಗ್ನಿಶಾಮಕ ದಳದ ನಿರಾಕ್ಷೇಪಣ ಪತ್ರ ಪಡೆಯಬೇಕಾದ ಕಾರಣ ಕಟ್ಟಡ ಎತ್ತರಿಸಲು ಅವಕಾಶ ನೀಡುತ್ತಿಲ್ಲ’ ಎಂದು ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಸುನೀಲಕುಮಾರ ತಿಳಿಸಿದರು.

ಶಿರಸಿ ತಾಲ್ಲೂಕು ವ್ಯಾಪ್ತಿಯಲ್ಲಿ 2 ಅಗ್ನಿ ನಂದಕ ವಾಹನಗಳಿದ್ದರೂ ಬಳಕೆಗೆ ಸಿಗುತ್ತಿರುವುದು ಒಂದು ಮಾತ್ರ. 15 ವರ್ಷ ಮುಗಿದ ಒಂದು ವಾಹನ ಠಾಣೆಯ ಶೆಡ್‌ನೊಳಗೆ ನಿಂತಿದೆ. ಹಾಲಿ ಕಾರ್ಯ ನಿರ್ವಹಿಸುತ್ತಿರುವ ಒಂದು ವಾಹನದ ಅವಧಿ ಇನ್ನು 1 ವರ್ಷ ಮಾತ್ರ ಬಾಕಿ ಇದೆ.

‘ಶಿರಸಿಗೆ ಇನ್ನೊಂದು ಅಗ್ನಿ ನಂದಕ ವಾಹನ ನೀಡಲು ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತರಬೇಕು’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಮಂಜುನಾಥ ಹೆಗಡೆ ಹೆಗಡೆಕಟ್ಟಾ.

ಯಲ್ಲಾಪುರ ಪಟ್ಟಣದಲ್ಲಿರುವ ಅಗ್ನಿಶಾಮಕ ಠಾಣೆ ಸುಸಜ್ಜಿತ ಕಟ್ಟಡ ಹೊಂದಿದ್ದು 4,500 ಲೀಟರ್ ನೀರು ಸಂಗ್ರಹದ ದೊಡ್ಡ ನಂದಕ ವಾಹನ ಹೊಂದಿದೆ.

‘ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಆಗಾಗ ಬೆಂಕಿ ಕಾಣಿಸಿಕೊಳ್ಳುತ್ತದೆ. ಆದರೆ ಅರಣ್ಯದಲ್ಲಿ ವಾಹನ ಹೋಗಲು ಅನೇಕ ಸಲ ರಸ್ತೆ ಇರುವುದಿಲ್ಲ. ಬೆಂಕಿನಂದಿಸಲು ಹೆಚ್ಚಿನ ಸಿಬ್ಬಂದಿ ಅಗತ್ಯ. ಅಗ್ನಿಶಾಮಕ ಸಿಬ್ಬಂದಿ ಜೊತೆ ಅರಣ್ಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಕೈಜೋಡಿಸಿದಾಗ ಮಾತ್ರ ತ್ವರಿತಗತಿಯಲ್ಲಿ ಬೆಂಕಿ ನಂದಿಸಬಹುದು’ ಎನ್ನುತ್ತಾರೆ ಲೀಡ್ ಫೈರ್‌ಮ್ಯಾನ್ ವಿಜಯ ಪಾಟೀಲ.

ಮುಂಡಗೋಡದ ಎಪಿಎಂಸಿ ಆವರಣದಲ್ಲಿ ಸ್ವಂತ ಕಟ್ಟಡ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, ಉದ್ಘಾಟನೆಗೆ ದಿನಗಳನ್ನು ಎಣಿಸುತ್ತಿದೆ.

‘ತಾಲ್ಲೂಕಿನಲ್ಲಿ ಕಬ್ಬು ಬೆಳೆಯುವ ಪ್ರದೇಶ ಹೆಚ್ಚಾದಂತೆ, ಕಬ್ಬಿನ ಗದ್ದೆಯಲ್ಲಿ ಬೇಸಿಗೆ ಸಮಯದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಳ್ಳುವ ಪ್ರಕರಣಗಳು ಕೆಲ ವರ್ಷಗಳಿಂದ ಹೆಚ್ಚುತ್ತಿದೆ. ಗದ್ದೆಗಳಲ್ಲಿ ಒಣಮೇವಿಗೆ ಬೆಂಕಿ ಕಾಣಿಸಿಕೊಳ್ಳುವುದು, ತೋಟಗಳಲ್ಲಿ ವಿದ್ಯುತ್‌ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಅವಘಡ ಸಂಭವಿಸುವುದು ಹೆಚ್ಚು’ ಎನ್ನುತ್ತಾರೆ ವಕೀಲ ಗುಡ್ಡಪ್ಪ ಕಾತೂರ.

ಹೊನ್ನಾವರದಲ್ಲಿ ಬಿಸಿಲು ಏರುತ್ತಿದ್ದಂತೆ ಬೆಂಕಿ ಅವಘಡ ಪ್ರಕರಣಗಳ ಸಂಖ್ಯೆ ಹೆಚ್ಚುವ ಆತಂಕ ಎದುರಾಗಿದ್ದು ವಾಹನ ಹಾಗೂ ಸಿಬ್ಬಂದಿ ಕೊರತೆ ಪ್ರಸ್ತುತ ಇರುವ ಅಗ್ನಿಶಾಮಕ ಸಿಬ್ಬಂದಿಯ ಒತ್ತಡ ಹೆಚ್ಚಿಸಿದೆ. ಠಾಣೆಯಲ್ಲಿ 10 ಸಿಬ್ಬಂದಿ ಹುದ್ದೆ ಖಾಲಿ ಇದ್ದು ಪ್ರಸ್ತುತ 14 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ಕಳೆದ ತಿಂಗಳು ಗುಣವಂತೆಯ ಸಮೀಪ ಹೆದ್ದಾರಿ ಬದಿಯ ಗುಜರಿ ಅಂಗಡಿಗೆ ಬೆಂಕಿ ಬಿದ್ದಾಗ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತುರ್ತಾಗಿ ಆಗಮಿಸಿದರೂ ಸಕಾಲದಲ್ಲಿ ನಿಗದಿತ ಪ್ರಮಾಣದ ಸೇವೆ ಒದಗಿಸಲು ಅವರಿಗೆ ಸಾಧ್ಯವಾಗಲಿಲ್ಲ’ ಎಂದು ಅಲ್ಲಿನ ಸಾರ್ವಜನಿಕರು ದೂರಿದರು.

‘ಹೆಚ್ಚಿನ ನೀರು ಧಾರಣಾ ಸಾಮರ್ಥ್ಯದ ವಾಹನಕ್ಕೆ ಬೇಡಿಕೆ ಇಟ್ಟು ಕೆಡಿಪಿ ಸಭೆಯಲ್ಲಿ ಹಲವು ಬಾರಿ ಪ್ರಸ್ತಾಪಿಸಲಾಗಿದೆ. ಬೆಂಕಿ ಅವಘಡ ಸಂಭವಿಸಿದಾಗ ನೆರೆಯ ತಾಲ್ಲೂಕುಗಳ ವಾಹನ ತರಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ’ ಎಂದು ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ಪ್ರದೀಪ ನಾಯ್ಕ ಹೇಳಿದರು.

ಸಿದ್ದಾಪುರದ ಅಗ್ನಿಶಾಮಕ ಠಾಣೆಯಲ್ಲಿ ಕಳೆದ ಆಗಸ್ಟ್ ತಿಂಗಳಿನಿಂದ 500 ಲೀ. ಸಾಮರ್ಥ್ಯದ ಚಿಕ್ಕ ಅಗ್ನಿ ನಂದಕ ವಾಹನ ಕಾರ್ಯನಿರ್ವಹಿಸುತ್ತಿದೆ. ತುರ್ತು ಪರಿಸ್ಥಿತಿಗಳಲ್ಲಿ ಅಗ್ನಿ ನಂದಿಸಲು ತೊಂದರೆ ಉಂಟಾಗುತ್ತಿದೆ. ಸ್ಥಳೀಯರ ಸಹಾಯ ಪಡೆದು ಸ್ಥಳೀಯವಾಗಿ ಲಭ್ಯವಿರುವ ನೀರಿನ ಮೂಲಗಳು ಅಥವಾ ಟ್ಯಾಂಕರ್ ನೀರಿನ ಸಹಾಯದೊಂದಿಗೆ ಬೆಂಕಿ ನಂದಿಸಲಾಗುತ್ತಿದೆ.

‘ಠಾಣೆಯಲ್ಲಿ ಅಧಿಕಾರಿ ಸೇರಿ 18 ಜನ ಕಾರ್ಯನಿರ್ವಹಿಸುತ್ತಿದ್ದೇವೆ. ದೊಡ್ಡ ಅಗ್ನಿ ನಂದಕ ವಾಹನಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ’ ಎದು ಅಗ್ನಿಶಾಮಕ ಠಾಣೆಯ ಅಧಿಕಾರಿ ಸುಬ್ರಮಣ್ಯ ಮಾಹಿತಿ ನೀಡಿದರು.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಶಾಂತೇಶ ಬೆನಕನಕೊಪ್ಪ, ರವಿ ಸೂರಿ, ಎಂ.ಜಿ.ಹೆಗಡೆ, ಪ್ರವೀಣಕುಮಾರ ಸುಲಾಖೆ, ಸುಜಯ್ ಭಟ್, ವಿಶ್ವೇಶ್ವರ ಗಾಂವ್ಕರ.

ದಾಂಡೇಲಿಯ ಅಂಬೇವಾಡಿಯಲ್ಲಿ ನಿರ್ಮಾಣ ಹಂತದಲ್ಲಿರುವ ಅಗ್ನಿಶಾಮಕ ಠಾಣೆ ಕಟ್ಟಡ
ಬೆಂಕಿ ಅವಘಡ ಇತರ ತುರ್ತು ಸ್ಥಿತಿಯಲ್ಲಿ ಕಾರ್ಯಾಚರಿಸಲು ಸಿಬ್ಬಂದಿ ಕೊರತೆ ಇಲ್ಲ. ಅಗತ್ಯ ಸಂಖ್ಯೆಯ ವಾಹನ ಒದಗಿಸಲು ಪ್ರಸ್ತಾವ ಸಲ್ಲಿಕೆಯಾಗಿದೆ.
–ಸುನೀಲಕುಮಾರ್, ಜಿಲ್ಲಾ ಅಗ್ನಿಶಾಮಕ ದಳ ಅಧಿಕಾರಿ

ಅಗ್ನಿನಂದಕ ಬರಲು ತಾಸು ಬೇಕು

ಗೋಕರ್ಣ ಧಾರ್ಮಿಕ ಪ್ರವಾಸಿ ತಾಣವಾಗಿದ್ದು ಲಕ್ಷಾಂತರ ಪ್ರವಾಸಿಗರು ವಾರ್ಷಿಕವಾಗಿ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ದೇವಸ್ಥಾನ ನೂರಾರು ರೆಸಾರ್ಟ್ ಹೊಟೆಲ್‌ಗಳಿದ್ದರೂ ಅಗ್ನಿಶಾಮಕ ಠಾಣೆ ಸ್ಥಳೀಯವಾಗಿಲ್ಲ. ಅಗ್ನಿ ಅವಘಡ ಸಂಭವಿಸಿದರೆ ಪಕ್ಕದ ಕುಮಟಾ ಅಥವಾ ಅಂಕೋಲಾದಿಂದ ಅಗ್ನಿಶಾಮಕ ವಾಹನ ಬರಬೇಕು. ವಾಹನ ಸ್ಥಳಕ್ಕೆ ತಲುಪಲು ಕನಿಷ್ಠ ಎಂದರೂ ಒಂದು ತಾಸು ಸಮಯ ಬೇಕಾಗುತ್ತದೆ. ಅಲ್ಲಿಯ ವರೆಗೆ ಪರಿಸ್ಥಿತಿ ಕೈ ಮೀರಿ ಹೋಗುವ ಸಂಭವವೇ ಜಾಸ್ತಿ.

ಹೀಗಾದ ಅನೇಕ ಉದಾಹರಣೆಗಳು ಇದೆ. ನಂತರ ಸ್ಥಳೀಯರೇ ಶ್ರಮ ಪಟ್ಟು ಬೆಂಕಿ ನೊಂದಿಸಿದ ಘಟನೆ ಅನೇಕ ಬಾರಿ ನಡೆದಿದೆ. ‘ಅಗ್ನಿಶಾಮಕ ಘಟಕ ಈ ಭಾಗದಲ್ಲಿ ಬೇಕು ಎಂಬ ಆಗ್ರಹ ಗ್ರಾಮ ಸಭೆಗಳಲ್ಲಿ ಹಲವು ಬಾರಿ ಚರ್ಚೆಯಾಗಿದೆ. ಗೋಕರ್ಣ ಮತ್ರು ಕುಮಟಾದ ಮಧ್ಯಭಾಗದಲ್ಲಿ ಅಗ್ನಿಶಾಮಕ ಘಟಕ ಇರಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮೀಶ ಮಹಾಬಲೇಶ್ವರ ಗೌಡ.

5 ವರ್ಷ ಕಳೆದರೂ ನಿರ್ಮಾಣವಾಗದ ಠಾಣೆ

ದಾಂಡೇಲಿ ನೂತನ ತಾಲ್ಲೂಕು ಘೋಷಣೆಯಾಗಿ ಐದು ವರ್ಷ ಕಳೆದರೂ ಅಗ್ನಿಶಾಮಕ ಠಾಣೆ ಸ್ಥಾಪನೆಯಾಗಿಲ್ಲ. ಹೊಸ ಕಟ್ಟಡ ನಿರ್ಮಾಣ ಕಾಮಗಾರಿಗೆ ಫೆ.1 ರಂದು ಚಾಲನೆ ನೀಡಲಾಗಿದೆ. ಜಾಗ ದೊರೆಯಲು ಹಲವು ಸಮಯ ಕಳೆದಿತ್ತು.

ಅಂಬೇವಡಿಯಲ್ಲಿ ಜಾಗ ಗುರುತಿಸಿ ₹3 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸುವ ಕೆಲಸ ಪ್ರಗತಿಯಲ್ಲಿದೆ. ಸದ್ಯ ಇಲ್ಲಿ ವೆಸ್ಟ್ ಕೋಸ್ಟ್ ಪೇಪರ್ ಮಿಲ್‍ನ ಎರಡು ಅಗ್ನಿಶಾಮಕ ವಾಹನಗಳು ಮಾತ್ರ ಕೆಲಸ ಮಾಡುತ್ತಿವೆ. ಗ್ರಾಮೀಣ ಮತ್ತು ನಗರದ ಪ್ರದೇಶದಲ್ಲಿ ಯಾವುದೇ ಅಗ್ನಿ ಅವಘಡ ಸಂಭವಿಸಿದರೆ ಯಾವುದೇ ಸರ್ಕಾರಿ ಅಗ್ನಿಶಾಮಕ ವಾಹನ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.