ಕಾರವಾರ: ಕಳೆದ ಒಂದು ವಾರದಿಂದ ಈಚೆಗೆ ಬಿರುಸು ಕಳೆದುಕೊಂಡಿದ್ದ ಮಳೆಯು ಶನಿವಾರ ಪುನಃ ಬಿರುಸು ಪಡೆಯಿತು. ಅರ್ಧ ದಿನಗಳ ಕಾಲ ಸುರಿದ ಮಳೆಯಿಂದ ಹಲವೆಡೆ ಜಲಾವೃತ ಸಮಸ್ಯೆ ಉಂಟಾಯಿತು.
ತಾಲ್ಲೂಕಿನ ಮುದಗಾ ಸಮೀಪ ಸಂಪರ್ಕ ರಸ್ತೆಯ ಮೇಲೆ ನೀರು ನಿಂತು ಸಂಚಾರಕ್ಕೆ ಸಮಸ್ಯೆ ಉಂಟಾಯಿತು. ಸಮೀಪದ ಕಾರ್ಮಿಕರ ಕಾಲೊನಿಗಳಿಗೂ ನೀರು ನುಗ್ಗಿತ್ತು. ಸತತ ಮಳೆಯಿಂದ ನಗರದ ಸಾಯಿಕಟ್ಟಾ, ಪದ್ಮನಾಭ ನಗರ ಸೇರಿದಂತೆ ಕೆಲವೆಡೆ ರಸ್ತೆಯ ಮೇಲೆ ಕೆಲ ಹೊತ್ತು ನೀರು ನಿಂತಿತ್ತು.
ಶುಕ್ರವಾರ ತಡರಾತ್ರಿ ಬೀಸಿದ ವೇಗದ ಗಾಳಿಯಿಂದ ಮರಗಳ ಟೊಂಗೆಗಳು ಮುರಿದು ಬಿದ್ದಿದ್ದರಿಂದ ಬಾಂಡಿಶಿಟ್ಟಾ, ನಂದನಗದ್ದಾ ಭಾಗದಲ್ಲಿ ಹಲವು ತಾಸುಗಳವರೆಗೆ ವಿದ್ಯುತ್ ವ್ಯತ್ಯಯ ಉಂಟಾಯಿತು. ರಭಸದಿಂದ ಸುರಿದ ಮಳೆಯಿಂದ ಶಾಲೆ ಕಾಲೇಜುಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಪರದಾಡಿದರು.
ಶುಕ್ರವಾರದಿಂದ ಶನಿವಾರ ನಸುಕಿನ ಜಾವದವರೆಗೆ ಜಿಲ್ಲೆಯ ಹೊನ್ನಾವರದಲ್ಲಿ 13 ಸೆಂ.ಮೀ, ಭಟ್ಕಳದಲ್ಲಿ 12.9 ಸೆಂ.ಮೀ, ಕುಮಟಾದಲ್ಲಿ 11 ಸೆಂ.ಮೀ, ಸಿದ್ದಾಪುರದಲ್ಲಿ 7.5 ಸೆಂ.ಮೀ, ಕಾರವಾರದಲ್ಲಿ 6.3 ಸೆಂ.ಮೀ ಮಳೆ ಸುರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.