ADVERTISEMENT

ಕಾರವಾರ | ಅಣೆಕಟ್ಟೆ ಮಾರ್ಗದಲ್ಲಿ ಮತ್ತೆ ಭೂಕುಸಿತ

ಭಾರಿ ಮಳೆಯಿಂದ ಅವಾಂತರ: ಕುಗ್ರಾಮದಲ್ಲಿ ಸಿಲುಕಿರುವ ಬಸ್

ಗಣಪತಿ ಹೆಗಡೆ
Published 4 ಜುಲೈ 2025, 5:21 IST
Last Updated 4 ಜುಲೈ 2025, 5:21 IST
ಕಾರವಾರ ತಾಲ್ಲೂಕಿನ ಕದ್ರಾ ಜಲಾಶಯದ ನಾಲ್ಕು ಕ್ರಸ್ಟ್ ಗೇಟ್‌ಗಳ ಮೂಲಕ ಕಾಳಿನದಿಗೆ ನೀರು ಹರಿಬಿಡಲಾಯಿತು 
ಕಾರವಾರ ತಾಲ್ಲೂಕಿನ ಕದ್ರಾ ಜಲಾಶಯದ ನಾಲ್ಕು ಕ್ರಸ್ಟ್ ಗೇಟ್‌ಗಳ ಮೂಲಕ ಕಾಳಿನದಿಗೆ ನೀರು ಹರಿಬಿಡಲಾಯಿತು    

ಕಾರವಾರ: ತಾಲ್ಲೂಕಿನ ಕದ್ರಾ, ಕೊಡಸಳ್ಳಿ ಭಾಗದ ಕಾಳಿ ಜಲಾನಯನ ಪ್ರದೇಶದಲ್ಲಿ ಸರಾಸರಿ 18 ಸೆಂ.ಮೀನಷ್ಟು ಮಳೆ ಸುರಿದಿದ್ದು ಕೊಡಸಳ್ಳಿ ಜಲಾಶಯಕ್ಕೆ ಸಂಪರ್ಕಿಸುವ ರಸ್ತೆಯ ಪಕ್ಕ ಭಾರಿ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದೆ. ಕದ್ರಾ ಮತ್ತು ಕೊಡಸಳ್ಳಿ ಅಣೆಕಟ್ಟೆಗೆ ಹತ್ತಿರದ ಸ್ಥಳದಲ್ಲೇ ಅವಘಡ ಸಂಭವಿಸಿರುವುದು ಜನರ ಆತಂಕಕ್ಕೂ ಕಾರಣವಾಗಿದೆ.

ಕದ್ರಾದಿಂದ ಕೊಡಸಳ್ಳಿ ಸಂಪರ್ಕಿಸುವ ಮಾರ್ಗದ ಬಾಲೆಮನೆ ಬಳಿ ಸುಮಾರು 50 ಮೀಟರ್‌ನಷ್ಟು ಅಗಲದಲ್ಲಿ ಗುಡ್ಡ ಕುಸಿದು ಬಿದ್ದಿದ್ದು ಅಪಾರ ಪ್ರಮಾಣದ ಮಣ್ಣು, ಕಲ್ಲಿನ ರಾಶಿಯೊಂದಿಗೆ ಮರಗಳು ರಸ್ತೆ, ಕಾಳಿ ಹಿನ್ನೀರಿಗೆ ಬಿದ್ದಿವೆ. ಅವಘಡ ನಡೆದ ಸ್ಥಳದಿಂದ ಕದ್ರಾ ಅಣೆಕಟ್ಟೆ 12 ಕಿ.ಮೀ., ಕೊಡಸಳ್ಳಿ ಅಣೆಕಟ್ಟೆ 22 ಕಿ.ಮೀ ಅಂತರದಲ್ಲಿವೆ.

ಬಾಳೆಮನೆ, ಜೊಯಿಡಾ ತಾಲ್ಲೂಕಿನ ಸೂಳಗೇರಿ ಗ್ರಾಮದ ಜನರಿಗೆ ಇದೊಂದೇ ರಸ್ತೆ ಸಂಪರ್ಕಕ್ಕೆ ಆಸರೆಯಾಗಿದೆ. ಕೊಡಸಳ್ಳಿ ಅಣೆಕಟ್ಟೆ ನಿರ್ವಹಣೆ ಕೆಲಸಕ್ಕೆ ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿ) ಸಿಬ್ಬಂದಿ ತೆರಳಲೂ ಇದೊಂದೇ ಮಾರ್ಗ. ಸದ್ಯ ಅಲ್ಲಿ ವಾಹನ ಸಂಚಾರ ಸಾಧ್ಯವಿಲ್ಲದ ಸ್ಥಿತಿ ಉಂಟಾಗಿದೆ. ಸೂಳಗೇರಿ ಗ್ರಾಮಕ್ಕೆ ಬುಧವಾರ ತೆರಳಿದ್ದ ರಾತ್ರಿ ತಂಗುವ ಬಸ್ ಅದೇ ಗ್ರಾಮದಲ್ಲಿ ನಿಲುಗಡೆಯಾಗುವಂತಾಗಿದೆ.

ADVERTISEMENT

2019ರಲ್ಲಿ ಕೊಡಸಳ್ಳಿ ಅಣೆಕಟ್ಟೆ ಬಳಿ ಭೂಕುಸಿತ ಸಂವಿಸಿತ್ತು. ಇದು ಕಾಳಿನದಿ ಪಾತ್ರದ ಜನರಲ್ಲಿ ಆತಂಕ ಉಂಟುಮಾಡಿತ್ತು. 2021ರಲ್ಲಿ ಯಲ್ಲಾಪುರ ತಾಲ್ಲೂಕಿನ ಕಳಚೆ ಭೂಕುಸಿತ ದುರಂತದ ಬಳಿಕ ಅಧ್ಯಯನ ನಡೆಸಿದ್ದ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ ಸಂಸ್ಥೆಯ (ಜಿಎಸ್‌ಐ) ತಜ್ಞರು ಗುರುತಿಸಿದ್ದ 439 ಸಂಭಾವ್ಯ ಭೂಕುಸಿತದ ಸ್ಥಳಗಳಲ್ಲಿ ಕೊಡಸಳ್ಳಿ ಅಣೆಕಟ್ಟೆ ಸಮೀಪದ ಪ್ರದೇಶವೂ ಇದೆ ಎಂದು ಜಿಲ್ಲಾಡಳಿತ ತಿಳಿಸಿತ್ತು. ಅದೇ ವರ್ಷದ ಜುಲೈನಲ್ಲಿ ಕದ್ರಾ–ಕೊಡಸಳ್ಳಿ ನಡುವಿನ ದಟ್ಟಾರಣ್ಯದಲ್ಲಿ ಕುಸಿತ ಉಂಟಾಗಿತ್ತು. ಈಗ ಪುನಃ ಇದೇ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಕುಸಿತ ಸಂಭವಿಸಿದೆ.

‘ಕಾಳಿ ಜಲಾನಯನ ಪ್ರದೇಶದ ಪಕ್ಕದಲ್ಲಿರುವ ಗುಡ್ಡದಲ್ಲಿ ಈ ಹಿಂದೆ ಕೆಲ ಬಾರಿ ಭೂಕುಸಿತ ಉಂಟಾಗಿದೆ. ಈ ಬಾರಿ ಭಾರಿ ಪ್ರಮಾಣದಲ್ಲಿ ಕುಸಿತ ಸಂಭವಿಸಿದೆ. ಆದರೂ, ಕೆಪಿಸಿಯಾಗಲಿ, ಜಿಲ್ಲಾಡಳಿತವಾಗಲಿ ಹಿಂದಿನ ಅವಘಡಗಳನ್ನು ಆಧರಿಸಿ ಸೂಕ್ತ ಮುನ್ನೆಚ್ಚರಿಕೆ ವಹಿಸಿಲ್ಲ’ ಎಂದು ಕದ್ರಾ ಗ್ರಾಮ ಪಂಚಾಯಿತಿ ಸದಸ್ಯ ಶ್ಯಾಮನಾಥ ನಾಯ್ಕ ದೂರಿದರು.

ಕಾರವಾರ ತಾಲ್ಲೂಕಿನ ಕದ್ರಾ–ಕೊಡಸಳ್ಳಿ ಮಾರ್ಗದ ಬಾಳೆಮನೆ ಸಮೀಪ ಭಾರಿ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದೆ
ಭೂಕುಸಿತ ಉಂಟಾದ ಸ್ಥಳವು ಅಣೆಕಟ್ಟೆಗಳಿಂದ ಸಾಕಷ್ಟು ದೂರದಲ್ಲಿದೆ. ಅಣೆಕಟ್ಟೆಗಳಿಗೆ ಅಪಾಯವಿಲ್ಲ. ಜನರು ಆತಂಕಪಡುವ ಅಗತ್ಯವಿಲ್ಲ
ಶ್ರೀಧರ ಕೋರಿ ಕೆಪಿಸಿ ಮುಖ್ಯ ಎಂಜಿನಿಯರ್
ಕೊಡಸಳ್ಳಿ–ಕದ್ರಾ ನಡುವಿನ ಪ್ರದೇಶದಲ್ಲಿ ಈ ಹಿಂದೆಯೂ ಭೂಕುಸಿತ ಉಂಟಾಗಿತ್ತು. ಸೂಕ್ಷ್ಮ ಪ್ರದೇಶದಲ್ಲಿ ಸಣ್ಣ ಅವಘಡ ಘಟಿಸಿದರೂ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ತಜ್ಞರಿಂದ ಅಧ್ಯಯನ ನಡೆಸಿ ಕುಸಿತಕ್ಕೆ ಕಾರಣ ತಿಳಿದುಕೊಳ್ಳಬೇಕು
ಶ್ಯಾಮನಾಥ ನಾಯ್ಕ ಕದ್ರಾ ಗ್ರಾ.ಪಂ ಸದಸ್ಯ

12 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಕದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಸುರಿದ ಪರಿಣಾಮ ಒಳಹರಿವು ಪ್ರಮಾಣ ಏಕಾಏಕಿ ಏರಿಕೆಯಾಗಿದೆ. ಜಿಲ್ಲಾಡಳಿತದಿಂದ ನಿಗದಿಪಡಿಸಿದ ಗರಿಷ್ಠ 30 ಮೀಟರ್‌ನಷ್ಟು ನೀರು ಸಂಗ್ರಹವಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯದಿಂದ ನಾಲ್ಕು ಕ್ರಸ್ಟ್ ಗೇಟ್‌ಗಳನ್ನು ತೆರೆದು 12 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಯಿತು.

ಮಣ್ಣು ತೆರವು ಸದ್ಯಕ್ಕಿಲ್ಲ ‘ಕೊಡಸಳ್ಳಿ ರಸ್ತೆಯಲ್ಲಿ ಭೂಕುಸಿತವಾದ ಸ್ಥಳದಲ್ಲಿ ಬಿದ್ದಿರುವ ಮಣ್ಣಿನ ರಾಶಿ ತೆರವುಗೊಳಿಸದಂತೆ ಭೂವಿಜ್ಞಾನಿಗಳು ಸಲಹೆ ನೀಡಿದ್ದಾರೆ. ಮಣ್ಣು ಕಲ್ಲು ತೆರವುಗೊಳಿಸಿದರೆ ಗುಡ್ಡ ಪುನಃ ಕುಸಿಯುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಕೇವಲ ಮರಗಳನ್ನು ಮಾತ್ರ ಕಟಾವು ಮಾಡಿ ತೆರವು ಮಾಡಲಾಗುತ್ತದೆ. ಕೊಡಸಳ್ಳಿ ಅಣೆಕಟ್ಟೆ ನಿರ್ವಹಣೆಗೆ ತೆರಳುವ ಕೆಪಿಸಿ ಸಿಬ್ಬಂದಿಗೆ ದೋಣಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ’ ಎಂದು ತಹಶೀಲ್ದಾರ್ ನಿಶ್ಚಲ್ ನೊರ‍್ಹೋನಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.