ಕಾರವಾರ: ‘ಸಾಮಾಜಿಕ ಮತ್ತು ಧಾರ್ಮಿಕ ಮೌಲ್ಯಯುತ ಚಿಂತನೆಗಳೊಂದಿಗೆ ಜೀವನದಲ್ಲಿ ಸಾಧನೆ ಮಾಡಿದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸ್ತ್ರೀ ಕುಲಕ್ಕೆ ಮಾದರಿ’ ಎಂದು ಹಿಂದೂ ಪ್ರೌಢಶಾಲೆಯ ಶಿಕ್ಷಕಿ ವನಿತಾ ಶೇಟ್ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
‘ಧರ್ಮಶೀಲತೆ, ಶ್ರದ್ಧೆ ಮತ್ತು ಸಾತ್ವಿಕತೆಯ ಪ್ರತೀಕವಾಗಿದ್ದರು. ಕೌಟುಂಬಿಕ ಸಂಕಷ್ಟಗಳನ್ನು ಮೆಟ್ಟಿ ನಿಂತು ಕುಟುಂಬಕ್ಕೆ ಭೂಷಣ ಪ್ರಾಯವಾಗಿದ್ದರು. ಬಸವತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದ ಅವರು ವೇಮನ ಮಹಾಯೋಗಿಯಾಗಿ ಬದಲಾಗಲು ಪ್ರೇರಣೆಯಾದವರು’ ಎಂದರು.
‘ಕರ್ನಾಟಕದಲ್ಲಿ ಮಾತ್ರವಲ್ಲದೇ ಆಂಧ್ರ ಪ್ರದೇಶ, ಮಹಾರಾಷ್ಟ್ರ ಹಾಗೂ ಹಲವು ರಾಜ್ಯಗಳಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ, ಉತ್ಸವ ಆಚರಿಸಲಾಗುತ್ತಿದೆ’ ಎಂದು ತಿಳಿಸಿದರು.
ಅಂಗನವಾಡಿ ಕಾರ್ಯಕರತೆಯರು, ವಿವಿಧ ಇಲಾಖೆಯ ಅಧಿಕಾರಿ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು. ಶಿವಾಜಿ ವಿದ್ಯಾಮಂದಿರದ ಶಿಕ್ಷಕ ಮಹಾದೇವ ರಾಣೆ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ನಾಯಕ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.