
ಕಾರವಾರ: ನಗರದಲ್ಲಿನ ಮುಖ್ಯ ರಸ್ತೆಗಳ ಬದಿಯಲ್ಲಿ ಬಳಕೆ ಮಾಡದೆ ಖಾಲಿ ಬಿಡಲಾಗಿದ್ದ 12 ಗೂಡಂಗಡಿಗಳನ್ನು ನಗರಸಭೆ ಅಧಿಕಾರಿಗಳು ಗುರುವಾರ ತೆರವುಗೊಳಿಸಿದರು.
ಇಲ್ಲಿನ ಎಂ.ಜಿ.ರಸ್ತೆ, ಗ್ರೀನ್ ಸ್ಟ್ರೀಟ್ ಸೇರಿದಂತೆ ವಿವಿಧೆಡೆಯಲ್ಲಿ ಹಲವು ತಿಂಗಳಿಂದ ಬಾಗಿಲು ತೆರೆಯದೆ ಇದ್ದ ಗೂಡಂಗಡಿಗಳನ್ನು ನಗರಸಭೆ ವಾಹನದ ಮೂಲಕ ತಂದು ನಗರಸಭೆ ಆವರಣದಲ್ಲಿ ಇರಿಸಲಾಯಿತು.
ಸ್ವಚ್ಛತೆ ಕಾಯ್ದುಕೊಳ್ಳವ ಸಲುವಾಗಿ ಗೂಡಂಗಡಿಗಳ ಮೇಲೆ ಕ್ರಮ ಕೈಗೊಳ್ಳಬೇಕು, ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸಬೇಕು ಎಂದು ಈಚೆಗೆ ನಡೆದಿದ್ದ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.
‘ಮಧ್ಯಪ್ರದೇಶ ರಾಜ್ಯದ ಇಂಧೋರ್ ಮಾದರಿಯಲ್ಲಿ ನಗರದಲ್ಲಿಯೂ ಸ್ವಚ್ಛತೆ ಕ್ರಮಗಳನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಕೆಲವು ಅಂಗಡಿಕಾರರು ಪರವಾನಗಿ ಪಡೆಯದೆ ಗೂಡಂಗಡಿ ಇಟ್ಟಿದ್ದಾರೆ. ಕೆಲವು ಕಡೆ ಗೂಡಂಗಡಿ ಅಳವಡಿಸಿ ಅದನ್ನು ಬಳಸದೆ ಹಾಗೆಯೇ ಬಿಡಲಾಗಿದೆ. ಅವುಗಳನ್ನು ಮೊದಲ ಹಂತದಲ್ಲಿ ತೆರವುಗೊಳಿಸಲಾಗಿದೆ. ಹಂತ ಹಂತವಾಗಿ ಉಳಿದ ಗೂಡಂಗಡಿಕಾರರಿಗೂ ಎಚ್ಚರಿಕೆ ನೀಡಲಾಗುವುದು’ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.