ADVERTISEMENT

ಕಾರವಾರ | ನೆಲೆ ಇಲ್ಲದ ನರ್ಸಿಂಗ್ ಕಾಲೇಜು

ಕೊಠಡಿ ತೆರವು ಮಾಡಲು ನೋಟಿಸ್: ಅತಂತ್ರ ಸ್ಥಿತಿಯಲ್ಲಿ ವಿದ್ಯಾರ್ಥಿಗಳು

ಗಣಪತಿ ಹೆಗಡೆ
Published 25 ಜುಲೈ 2025, 4:06 IST
Last Updated 25 ಜುಲೈ 2025, 4:06 IST
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಕಟ್ಟಡ
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಕಟ್ಟಡ   

ಕಾರವಾರ: ಐದು ವರ್ಷದ ಹಿಂದೆ 450 ಹಾಸಿಗೆಯ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಜಾಗ ಬಿಟ್ಟುಕೊಟ್ಟಿದ್ದ, ಇಲ್ಲಿನ ಜನರಲ್ ನರ್ಸಿಂಗ್ ಮತ್ತು ಮಿಡ್‌ವೈಫರಿ ಕೋರ್ಸ್ (ಜಿಎನ್‌ಎಂ) ಬೋಧಿಸುವ ಸರ್ಕಾರಿ ನರ್ಸಿಂಗ್ ಕಾಲೇಜು ಪುನಃ ನೆಲೆ ಕಳೆದುಕೊಳ್ಳುವ ಆತಂಕದಲ್ಲಿದೆ.

ಜಿಲ್ಲಾಸ್ಪತ್ರೆ ಆವರಣದಲ್ಲಿ ಸ್ವಂತ ಕಟ್ಟಡ ಹೊಂದಿದ್ದ ಸರ್ಕಾರಿ ನರ್ಸಿಂಗ್ ಕಾಲೇಜಿನ ಕಟ್ಟಡವನ್ನು 2020ರಲ್ಲಿ ತೆರವುಗೊಳಿಸಲಾಗಿತ್ತು. ಜೊತೆಗೆ ವಿದ್ಯಾರ್ಥಿನಿಯರ ವಸತಿ ನಿಲಯದ ಕಟ್ಟಡವನ್ನೂ ಬಿಟ್ಟುಕೊಡಲಾಗಿತ್ತು. ಕಟ್ಟಡ ಇದ್ದ ಜಾಗದಲ್ಲಿ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಸ್ಥಾಪನೆಗಾಗಿ ಜಾಗ ನೀಡಲಾಗಿತ್ತು.

ಪರ್ಯಾಯವಾಗಿ ನರ್ಸಿಂಗ್ ಕಾಲೇಜಿನ ತರಗತಿಗಳನ್ನು ನಡೆಸಲು ಕ್ರಿಮ್ಸ್ ಆಡಳಿತ ಮಂಡಳಿಯು ಕ್ರಿಮ್ಸ್‌ ಕಟ್ಟಡದ 7ನೇ ಮಹಡಿಯಲ್ಲಿ ಅವಕಾಶ ಕಲ್ಪಿಸಿತ್ತು. ವಿದ್ಯಾರ್ಥಿನಿಯರ ವಸತಿಗೆ ವೈದ್ಯಕೀಯ ವಿದ್ಯಾರ್ಥಿನಿಯರ ಹಾಸ್ಟೆಲ್‌ನ 8 ಕೊಠಡಿಗಳನ್ನು ಮೀಸಲಿಡಲಾಗಿತ್ತು.

ADVERTISEMENT

‘ನರ್ಸಿಂಗ್ ಕಾಲೇಜಿನ ತರಗತಿಗಳನ್ನು ನಡೆಸಲು ಬಳಸುತ್ತಿದ್ದ 7ನೇ ಮಹಡಿಯ ಕೊಠಡಿಗಳನ್ನು ಮತ್ತು ಹಾಸ್ಟೆಲ್‌ನ ಕೊಠಡಿಗಳನ್ನು ಆಗಸ್ಟ್ ತಿಂಗಳ ಒಳಗೆ ಬಿಟ್ಟುಕೊಡುವಂತೆ ಕ್ರಿಮ್ಸ್‌ ನಿರ್ದೇಶಕರಿಂದ ನೋಟಿಸ್ ಬಂದಿದೆ. ಏಕಾಏಕಿ ಸ್ಥಳಾಂತರ ಮಾಡಲು ಪರ್ಯಾಯ ಸ್ಥಳಾವಕಾಶವೂ ಇಲ್ಲ. ಸದ್ಯ ಕಾಲೇಜಿನಲ್ಲಿ 85 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಅವರ ಭವಿಷ್ಯದ ಚಿಂತೆ ಏನು?’ ಎಂಬ ಪ್ರಶ್ನೆ ಎದುರಾಗಿದೆ ಎಂದು ನರ್ಸಿಂಗ್ ಕಾಲೇಜಿನ ಆಡಳಿತದ ಜವಾಬ್ದಾರಿ ನಿಭಾಯಿಸುತ್ತಿರುವ ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯ ಡಾ.ವಿನೋದ ಭೂತೆ ಹೇಳಿದರು.

‘ಜಿಲ್ಲಾ ತರಬೇತಿ ಕೇಂದ್ರದ ಕಟ್ಟಡವೂ ಹಳತಾಗಿದ್ದು, ಇಲ್ಲಿಯೂ ಇಕ್ಕಟ್ಟಾದ ಜಾಗವಿದೆ. ಇಲ್ಲಿಗೆ ಸ್ಥಳಾಂತರವೂ ಕಷ್ಟ. ಪರ್ಯಾಯ ಜಾಗ ಸಿಗುವವರೆಗೆ ಕ್ರಿಮ್ಸ್ ಕಟ್ಟಡದಲ್ಲಿಯೇ ಅವಕಾಶ ಮುಂದುವರಿಸಲು ನಿರ್ದೇಶಕರಿಗೆ ಮನವಿ ಮಾಡಲಾಗಿದೆ’ ಎಂದು ತಿಳಿಸಿದರು.

ಕ್ರಿಮ್ಸ್ ಕಟ್ಟಡದ ಕೊಠಡಿಯಲ್ಲಿ ನರ್ಸಿಂಗ್ ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿರುವುದು
ನರ್ಸಿಂಗ್ ಕಾಲೇಜಿಗೆ ಪರ್ಯಾಯ ಜಾಗ ಹುಡುಕಿಕೊಳ್ಳಲು ಇಲಾಖೆಯಿಂದ ಸೂಚನೆ ನೀಡಿದ್ದರೂ 5 ವರ್ಷದಿಂದ ಸ್ಥಳಾಂತರಕ್ಕೆ ಪ್ರಯತ್ನಿಸಿಲ್ಲ. ಕ್ರಿಮ್ಸ್‌ನಲ್ಲಿ ನರ್ಸಿಂಗ್ ಸೇರಿದಂತೆ ಹಲವು ಹೊಸ ಕೋರ್ಸ್‌ಗಳು ಆರಂಭಗೊಳ್ಳಲಿದ್ದು ಜಾಗದ ಅಗತ್ಯವಿದೆ
ಡಾ.ಪೂರ್ಣಿಮಾ ಆರ್.ಟಿ ಕ್ರಿಮ್ಸ್ ನಿರ್ದೇಶಕಿ

ಬೋಧಕರೂ ಇಲ್ಲ:

3 ವರ್ಷದ ಜನರಲ್ ನರ್ಸಿಂಗ್ ಮತ್ತು ಮಿಡ್‌ವೈಫರಿ ಕೋರ್ಸ್ ಹೊಂದಿರುವ ಕಾಲೇಜಿನಲ್ಲಿ ಪಾಠ ಬೋಧನೆಗೆ ಕನಿಷ್ಠ 6 ಬೋಧಕರ ಅಗತ್ಯವಿದೆ. ಆದರೆ ಸದ್ಯ ಕೇವಲ 3 ಬೋಧಕರು ಮಾತ್ರ ಪಾಠ ಬೋಧಿಸುತ್ತಿದ್ದಾರೆ. ಅವರಲ್ಲೂ ಕೆಲವರು ಬೇರೆ ತಾಲ್ಲೂಕಿಗೆ ವರ್ಗಾವಣೆಯಾಗಿದ್ದು ವಾರದಲ್ಲಿ ಒಂದೆರಡು ದಿನ ತರಗತಿ ನಡೆಸಲು ಬರುತ್ತಿದ್ದಾರೆ. ‘ಸರ್ಕಾರಿ ಆಸ್ಪತ್ರೆಗಳಲ್ಲಿ ಶುಶ್ರೂಷಕರಾಗಿರುವ ಹಿರಿಯ ಶಿಶ್ರೂಷಕಿಯರೇ ನರ್ಸಿಂಗ್ ಕಾಲೇಜಿನ ಬೋಧಕರಾಗಿದ್ದಾರೆ. ಅವರಿಗೆ ಆಸ್ಪತ್ರೆ ಹುದ್ದೆ ನಿಭಾಯಿಸುವ ಜೊತೆಗೆ ತರಗತಿ ನಡೆಸುವ ಜವಾಬ್ದಾರಿ ಇದೆ. ಪ್ರತ್ಯೇಕ ಬೋಧಕರಿಲ್ಲದ ಪರಿಣಾಮ ಪಾಠ ಕಲಿಕೆಗೆ ನಮಗೂ ಸಮಸ್ಯೆ ಆಗುತ್ತಿದೆ’ ಎಂದು ನರ್ಸಿಂಗ್ ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ನಗರದಲ್ಲಿ ಕಲಿಕೆ ಹಳ್ಳಿಯಿಂದ ಅಲೆದಾಟ:

‘ನರ್ಸಿಂಗ್ ಕಲಿಕೆಗೆ ಪ್ರವೆಶಾತಿ ಪಡೆದ ಎಲ್ಲರಿಗೂ ಕ್ರಿಮ್ಸ್ ಹಾಸ್ಟೆಲ್‌ನಲ್ಲಿ ವಸತಿಗೆ ಅವಕಾಶ ಸಿಕ್ಕಿಲ್ಲ. ನಗರದಿಂದ 22 ಕಿ.ಮೀ ದೂರದ ಸಿದ್ದರ ಗ್ರಾಮದಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನಿಂದ ಬರಬೇಕು. ಪ್ರಾಯೋಗಿಕ ತರಬೇತಿ ಸಲುವಾಗಿ ಆಸ್ಪತ್ರೆಯಲ್ಲೂ ಕೆಲಸ ಮಾಡಬೇಕಾಗುತ್ತದೆ. ಹೊರಜಿಲ್ಲೆಗಳ ವಿದ್ಯಾರ್ಥಿನಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದು ಊಟ ವಸತಿಗೆ ಅಲೆದಾಟ ನಡೆಸಬೇಕಾಗುತ್ತಿದೆ’ ಎಂದು ವಿದ್ಯಾರ್ಥಿನಿಯರು ಸಮಸ್ಯೆ ಹೇಳಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.