ಕಾರವಾರ: ಇಲ್ಲಿನ ಸಾಯಿಕಟ್ಟಾದ ಸಾಯಿಮಂದಿರಕ್ಕೆ ಸೋಮವಾರ ತಡರಾತ್ರಿ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ಬೆಳ್ಳಿ ಸಾಮಗ್ರಿಗಳನ್ನು ಕಳವು ಮಾಡಿದ್ದಾರೆ.
‘ಸಾಯಿಬಾಬಾ ಪೀಠದ ಬೆಳ್ಳಿಯ ಪ್ರಭಾವಳಿ, ಬೆಳ್ಳಿಯ ಪಾದುಕೆ ಸೇರಿದಂತೆ ಸುಮಾರು 12 ಕೆ.ಜಿಗೂ ಅಧಿಕ ಬೆಳ್ಳಿ ಸಾಮಗ್ರಿ ಕಳವು ಮಾಡಲಾಗಿದೆ’ ಎಂದು ನಗರಠಾಣೆ ಪೊಲೀಸರು ತಿಳಿಸಿದ್ದಾರೆ.
‘ಕಳವು ಮಾಡಿರುವ ದೃಶ್ಯಗಳು ದೇವಾಲಯದಲ್ಲಿನ ಸಿಸಿಟಿವಿಯಲ್ಲಿ ದಾಖಲಾಗಿದೆ. ಇಬ್ಬರು ಆಗಂತುಕರು ಈ ಕೃತ್ಯ ಎಸಗಿರುವುದು ದೃಶ್ಯದಲ್ಲಿದೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ’ ಎಂದೂ ಹೇಳಿದರು.
ಕೆಲ ತಿಂಗಳುಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ–66ರ ಪಕ್ಕದಲ್ಲೇ ಇರುವ, ತಾಲ್ಲೂಕಿನ ಅಮದಳ್ಳಿಯ ವೀರಗಣಪತಿ ದೇವಾಲಯದ ದೇವರ ಬೆಳ್ಳಿ ಕವಚ ಕಳವು ಮಾಡಲಾಗಿತ್ತು. ಈವರೆಗೆ ಆರೋಪಿಗಳ ಪತ್ತೆಯಾಗಿಲ್ಲ.
‘ದೇವಾಲಯಗಳಿಗೆ ನುಗ್ಗಿ ಬೆಳ್ಳಿ ಆಭರಣ ಕಳವು ಮಾಡುವುದನ್ನೇ ಕಸುಬಾಗಿಸಿಕೊಂಡವರಿಂದ ಈ ಕೃತ್ಯ ನಡೆದಿರುವ ಶಂಕೆ ಇದೆ. ಹಿಂದಿನ ಕಳವು ಪ್ರಕರಣಗಳಲ್ಲಿ ಭಾಗಿಯಾದವರೇ ಕಳವು ನಡೆಸಿರುವ ಸಾಧ್ಯತೆ ಇದೆ’ ಎಂದೂ ಪೊಲೀಸರು ಶಂಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.