ADVERTISEMENT

ಕಾರವಾರ | ವಾತಾವರಣ ಹದಗೆಡಿಸಿದ ಚರಂಡಿ ನೀರು: ಸಾಮಾನ್ಯ ಸಭೆಯಲ್ಲಿ ಸದಸ್ಯರ ಆರೋಪ

ಸಾಮಾನ್ಯ ಸಭೆಯಲ್ಲಿ ಸದಸ್ಯರ ಆರೋಪ: ಪರಿಶೀಲನೆಗೆ ತಂಡ ರಚಿಸುವ ಭರವಸೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 5:00 IST
Last Updated 16 ಅಕ್ಟೋಬರ್ 2025, 5:00 IST
ಮನೆ ಮನೆಯಿಂದ ಕಸ ಸಂಗ್ರಹಣೆಗೆ ಖರೀದಿಸಿದ ಕಸದ ಡಬ್ಬಿಯನ್ನು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಪೌರಾಯುಕ್ತ ಜಗದೀಶ ಹುಲಗೆಜ್ಜಿ ಪ್ರದರ್ಶಿಸಿದರು
ಮನೆ ಮನೆಯಿಂದ ಕಸ ಸಂಗ್ರಹಣೆಗೆ ಖರೀದಿಸಿದ ಕಸದ ಡಬ್ಬಿಯನ್ನು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಪೌರಾಯುಕ್ತ ಜಗದೀಶ ಹುಲಗೆಜ್ಜಿ ಪ್ರದರ್ಶಿಸಿದರು   

ಕಾರವಾರ: ನಗರದಲ್ಲಿನ ಹಲವು ಬಹುಮಹಡಿ ಕಟ್ಟಡಗಳಿಂದ ತ್ಯಾಜ್ಯ ನೀರು ನೇರವಾಗಿ ಚರಂಡಿ ಸೇರುತ್ತಿರುವುದರಿಂದ ಪರಿಸರ ಹದಗೆಡುತ್ತಿದೆ ಎಂಬ ದೂರು ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ವ್ಯಕ್ತವಾಯಿತು.

‘ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಶೌಚನೀರು ಸಂಸ್ಕರಣಾ ಘಟಕ ಕಾರ್ಯನಿರ್ವಹಿಸುತ್ತಿಲ್ಲ. ಈ ಹಿಂದೆ ಪರಿಶೀಲನೆಗೆ ತೆರಳಿದ್ದಾಗ ಇದು ತಿಳಿದುಬಂದಿದೆ. ಕ್ರಿಮ್ಸ್‌ನಿಂದ ಹೊರಬಿಡಲಾಗುವ ಸಾವಿರಾರು ಲೀಟರ್ ನೀರು ಚರಂಡಿ ತುಂಬಿಕೊಂಡು ಕಾಜುಬಾಗ, ಜೈಲ್‌ವಾಡಾ, ಪಿಂಗೆ ರಸ್ತೆ ಸೇರಿ ಹಲವೆಡೆ ದುರ್ನಾತದ ವಾತಾವರಣ ಉಂಟಾಗಿದೆ. ಜನರು ರೋಸಿ ಹೋಗಿದ್ದಾರೆ’ ಎಂದು ಸದಸ್ಯ ಗಣಪತಿ ನಾಯ್ಕ ಆಕ್ಷೇಪಿಸಿದರು.

‘ಕಾಜುಬಾಗದಲ್ಲಿರುವ ಹೋಟೆಲ್, ಕೆಲ ಬಹುಮಹಡಿ ಕಟ್ಟಡಗಳಿಂದ ತ್ಯಾಜ್ಯನೀರು ಸಂಸ್ಕರಿಸದೆ ಹರಿಬಿಡಲಾಗುತ್ತಿದೆ. ನಗರದ ಹಲವೆಡೆ ಇಂತಹ ಸ್ಥಿತಿ ಜ್ವಲಂತವಾಗಿದೆ. ವಾಣಿಜ್ಯ ಉದ್ದೇಶದ ಕಟ್ಟಡಗಳು ನಿಯಮ ಉಲ್ಲಂಘಿಸಿ, ಪರಿಸರ ಹಾನಿ ಮಾಡುತ್ತಿದ್ದರೂ ನಗರಸಭೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ’ ಎಂದು ಮಕ್ಬುಲ್ ಶೇಖ್ ಆರೋಪಿಸಿದರು.

ADVERTISEMENT

‘ಪರಿಸರ ಎಂಜಿನಿಯರ್ ಇಲ್ಲದೆ ಪರಿಶೀಲನೆಗೆ ಸಮಸ್ಯೆಯಾಗಿದೆ. ತ್ಯಾಜ್ಯ ನೀರು ಸಂಸ್ಕರಿಸದೇ ಚರಂಡಿಗೆ ಬಿಡದಂತೆ ಎಚ್ಚರಿಕೆ ನೀಡಲಾಗುತ್ತಿದೆ. ಈ ಬಗ್ಗೆ ಪರಿಶೀಲನೆಗೆ ಪ್ರತ್ಯೇಕ ತಂಡ ನೇಮಿಸಲಾಗುತ್ತದೆ’ ಎಂದು ಪೌರಾಯುಕ್ತ ಜಗದೀಶ ಹುಲಗೆಜ್ಜಿ ಭರವಸೆ ನೀಡಿದರು.

‘ಇಂದೋರ್ ಮಹಾನಗರ ಪಾಲಿಕೆ ಮಾದರಿಯಲ್ಲಿ ಮನೆಮನೆಯಿಂದ ಕಸ ಸಂಗ್ರಹಣೆ ವೇಳೆ ಸ್ಯಾನಿಟರಿ ಪ್ಯಾಡ್, ಇ–ತ್ಯಾಜ್ಯಗಳನ್ನು ಸಂಗ್ರಹಿಸಲು ಅನುಕೂಲವಾಗುವಂತೆ ಕಸ ಸಂಗ್ರಹಣೆ ವಾಹನದಲ್ಲಿ ಇರಿಸಲು ಡಸ್ಟ್ ಬಿನ್ ಖರೀದಿಸಲಾಗಿದೆ’ ಎಂದೂ ತಿಳಿಸಿದರು.

ಮೀನು ಮಾರುಕಟ್ಟೆ ಬಳಿ ನಾಲ್ಕು ಚಕ್ರದ ವಾಹನಗಳ ನಿಲುಗಡೆ ತಡೆಯಬೇಕು ಎಂದು ಪ್ರೇಮಾನಂದ ಗುನಗಾ ಒತ್ತಾಯಿಸಿದರು.

ಅಧ್ಯಕ್ಷ ರವಿರಾಜ್ ಅಂಕೋಲೇಕರ, ಉಪಾಧ್ಯಕ್ಷೆ ಪ್ರೀತಿ ಜೋಶಿ, ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.