ADVERTISEMENT

ಉತ್ತರ ಕನ್ನಡ: ಹಾನಿಯಾದ ಶಾಲೆಯನ್ನೇ ದುರಸ್ತಿ ಮಾಡಿ

ಕಾರವಾರ ತಾ.ಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷೆ ಪ್ರಮೀಳಾ ನಾಯ್ಕ ತಾಕೀತು

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 12:28 IST
Last Updated 12 ಜೂನ್ 2020, 12:28 IST
ಕಾರವಾರದಲ್ಲಿ ಶುಕ್ರವಾರ ನಡೆದ ತಾ.ಪಂ ಕೆ.ಡಿ.ಪಿ ಸಭೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಕುರಿತು ಮಾಹಿತಿಯ ಭಿತ್ತಿಪತ್ರಗಳನ್ನು ಅಧ್ಯಕ್ಷೆ ಪ್ರಮೀಳಾ ನಾಯ್ಕ ಬಿಡುಗಡೆ ಮಾಡಿದರು. ಉಪಾಧ್ಯಕ್ಷ ರವೀಂದ್ರ ಪವಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ, ತಾ.ಪಂ ಇ.ಒ ಡಾ.ಆನಂದಕುಮಾರ ಬಾಲಪ್ಪನವರ ಚಿತ್ರದಲ್ಲಿದ್ದಾರೆ.
ಕಾರವಾರದಲ್ಲಿ ಶುಕ್ರವಾರ ನಡೆದ ತಾ.ಪಂ ಕೆ.ಡಿ.ಪಿ ಸಭೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಕುರಿತು ಮಾಹಿತಿಯ ಭಿತ್ತಿಪತ್ರಗಳನ್ನು ಅಧ್ಯಕ್ಷೆ ಪ್ರಮೀಳಾ ನಾಯ್ಕ ಬಿಡುಗಡೆ ಮಾಡಿದರು. ಉಪಾಧ್ಯಕ್ಷ ರವೀಂದ್ರ ಪವಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ, ತಾ.ಪಂ ಇ.ಒ ಡಾ.ಆನಂದಕುಮಾರ ಬಾಲಪ್ಪನವರ ಚಿತ್ರದಲ್ಲಿದ್ದಾರೆ.   

ಕಾರವಾರ: ‘ನೆರೆಯಿಂದ ಹಾನಿಗೊಂಡ ಶಾಲೆಗಳನ್ನೇದುರಸ್ತಿ ಮಾಡಬೇಕು. ಉತ್ತಮ ಸ್ಥಿತಿಯಲ್ಲಿರುವ ಶಾಲೆಗಳಿಗೇ ಮತ್ತೆ ಕಾಮಗಾರಿ ಮಂಜೂರು ಮಾಡಿದರೆ ಹಣ ವ್ಯರ್ಥವಾಗುತ್ತದೆ’ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಪ್ರಮೀಳಾ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಶುಕ್ರವಾರ ಹಮ್ಮಿಕೊಂಡ ತಾಲ್ಲೂಕು ಪಂಚಾಯ್ತಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಶಾಲೆಗಳ ದುರಸ್ತಿ ಸಂಬಂಧಇಲಾಖೆಯಿಂದ ಕಳುಹಿಸಿದ ಪಟ್ಟಿಯೇ ಬೇರೆಯಿರುತ್ತದೆ. ಮಂಜೂರಾಗಿ ಬರುವ ಕೆಲಸಗಳೇ ಬೇರೆ ಇರುತ್ತವೆ. ಮಲ್ಲಾಪುರ ಭಾಗದಲ್ಲಿ ನಾಲ್ಕು ಶಾಲೆಗಳಲ್ಲಿ ವಿನಾ ಕಾರಣ ಕಾಮಗಾರಿ ಕೈಗೊಳ್ಳಲಾಗಿದೆ. ಅದರ ಬದಲು ಅಗತ್ಯವಿರುವ ಶಾಲೆಗಳ ಚಾವಣಿ ದುರಸ್ತಿ ಮಾಡಿ’ ಎಂದು ತಾಕೀತು ಮಾಡಿದರು.

ADVERTISEMENT

ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ ಧ್ವನಿಗೂಡಿಸಿ, ‘ನೆರೆ ಪರಿಹಾರ ಸಂಬಂಧ ನಿರ್ಮಿತಿ ಮತ್ತು ಲ್ಯಾಂಡ್ ಆರ್ಮಿಯವರು ಕೈಗೊಳ್ಳುವ ಕಾಮಗಾರಿಗಳ ಬಗ್ಗೆ ಯಾರಿಗೂ ತಿಳಿಯುತ್ತಿಲ್ಲ. ಕನಿಷ್ಠ ಆಯಾ ಗ್ರಾಮ ಪಂಚಾಯ್ತಿಗೂ ಹೇಳುವುದಿಲ್ಲ. ಇದರಿಂದ ಕ್ರಿಯಾಯೋಜನೆಯನ್ನು ಬದಲಾಯಿಸಿ ಹೊಸದಾಗಿ ಮಾಡಬೇಕಾಗುತ್ತದೆ. ಇಷ್ಟೊಂದು ಬೇಜವಾಬ್ದಾರಿ ಯಾಕೆ’ ಎಂದು ಪ್ರಶ್ನಿಸಿದರು.

‌ಹೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿ.ಎಸ್.ಶೇಬಣ್ಣನವರ ಮಾತನಾಡಿ, ‘ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ವಿದ್ಯುತ್ ತಂತಿ, ಕಂಬಗಳನ್ನು ಬದಲಿಸಲು ಗುತ್ತಿಗೆದಾರರು, ಕಾರ್ಮಿಕರು ಸಿಗುತ್ತಿಲ್ಲ. ಯಲ್ಲಾಪುರದಿಂದಲೇ ಕಾರ್ಮಿಕರು ಬರಬೇಕಿದ್ದು, ಕೊರೊನಾ ಕಾರಣದಿಂದ ಅವರಿಗೆ ವಸತಿ ಕಲ್ಪಿಸಲೂ ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಮ್ಮ ಸಿಬ್ಬಂದಿಯಿಂದಲೇ ಸಾಧ್ಯವಾದಷ್ಟು ಮಟ್ಟಿನ ಕೆಲಸ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಮನೋಜ್ಮಾತನಾಡಿ, ‘ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಗೋವಾದಿಂದ ಬರುವ ವಿದ್ಯಾರ್ಥಿಗಳಿಗೆ ಉಳಗಾದ ವಸತಿ ನಿಲಯದಲ್ಲಿ ಉಳಿದುಕೊಳ್ಳಲು ಅವಕಾಶ ಕೊಡಲು ಚಿಂತಿಸಲಾಗಿದೆ. ಆದರೆ, ಇದಕ್ಕೆ ಸ್ಥಳೀಯರು ವಿರೋಧಿಸುತ್ತಿದ್ದಾರೆ’ ಎಂದು ಗಮನ ಸೆಳೆದರು.

‘ಈ ವಿಚಾರವು ಇಲಾಖೆಯ ನಿರ್ದೇಶಕರ ಹಂತದಲ್ಲಿ ಚರ್ಚೆಯಾಗುತ್ತಿದೆ. ಹಾಗಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು’ ಎಂದು ಶಿಕ್ಷಣ ಇಲಾಖೆಯ ಅಧಿಕಾರಿ ಹೇಳಿದರು.

ಪಶುಸಂಗೋಪನೆ ಇಲಾಖೆ ಅಧಿಕಾರಿ ಮಾಹಿತಿ ನೀಡಿ, ‘ತಾಲ್ಲೂಕಿಗೆ 135 ಕಿಸಾನ್ ಕ್ರೆಡಿಟ್ ಕಾರ್ಡ್ ಮಂಜೂರಾಗಿವೆ. ಅವುಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಹೈನುಗಾರಿಕೆಗೆ ಸಾಲ ಪಡೆದುಕೊಳ್ಳಬಹುದು’ ಎಂದರು.

‘ಆಕಳಿನ ಕಿವಿಗೆ ಓಲೆ ಹಾಕುವುದು ಇನ್ನುಮುಂದೆ ಕಡ್ಡಾಯವಾಗಲಿದೆ. ಸಮೀಕ್ಷೆ ಮಾಡುವಾಗ, ವನ್ಯಜೀವಿಗಳು ಬೇಟೆಯಾಡಿದಾಗ, ಅಪಘಾತ ಪರಿಹಾರ, ನೆರೆ ಹಾನಿಯಾದಾಗ, ಲಸಿಕೆ ನೀಡಿದ ಮಾಹಿತಿಗಳನ್ನು ದಾಖಲಿಸಿಕೊಳ್ಳಲು ಓಲೆಗಳು ಅಗತ್ಯವಾಗಲಿವೆ’ ಎಂದು ಸ್ಪಷ್ಟಪಡಿಸಿದರು. ‌

ಮನವಿ ಮಾಡಲು ಸಲಹೆ:‘ಹೊರ ರಾಜ್ಯಗಳಿಂದ ಜಿಲ್ಲೆಗೆ ಬರುವ ಎಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್ ಮಾಡಬೇಕು. ಕಾರವಾರವನ್ನು ಕೊರೊನಾದಿಂದ ರಕ್ಷಿಸಲು ಇದು ಅಗತ್ಯ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಮಾಡೋಣ’ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ಮಾರುತಿ ನಾಯ್ಕ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಆನಂದಕುಮಾರ ಬಾಲಪ್ಪನವರ, ‘ಕೋವಿಡ್ ಹೊಸ ಕಾಯಿಲೆಯಾಗಿರುವ ಕಾರಣ ಸರ್ಕಾರದ ನಿರ್ದೇಶನಗಳನ್ನು ಪಾಲಿಸಬೇಕಾಗುತ್ತದೆ. ಮುಂದೆಯೂ ಬದಲಾವಣೆ ಆಗಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.