ADVERTISEMENT

ಸೌದಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಕಾರವಾರಿಗ

ನೆರವಿಗೆ ಧಾವಿಸುವಂತೆ ವಿಡಿಯೊ ಸಂದೇಶದಲ್ಲಿ ಮೊರೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2020, 12:16 IST
Last Updated 22 ಜೂನ್ 2020, 12:16 IST
ಬಾಲಕೃಷ್ಣ ಕೊಠಾರಕರ
ಬಾಲಕೃಷ್ಣ ಕೊಠಾರಕರ   

ಕಾರವಾರ: ಉದ್ಯೋಗಕ್ಕೆಂದು ಸೌದಿ ಅರೇಬಿಯಾಕ್ಕೆ ತೆರಳಿದ್ದತಾಲ್ಲೂಕಿನ ವ್ಯಕ್ತಿಯೊಬ್ಬರು ವಾಪಸ್ ಬರಲಾಗದೇ ಸಂಕಷ್ಟದಲ್ಲಿದ್ದಾರೆ. ಅವರನ್ನು ತಾಯ್ನಾಡಿಗೆ ಕರೆದುಕೊಂಡು ಬರಲು ಕ್ರಮ ಕೈಗೊಳ್ಳಬೇಕು ಎಂದು ಕುಟುಂಬದವರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ತಾಲ್ಲೂಕಿನಕೊಠಾರ ಗ್ರಾಮದ ಬಾಲಕೃಷ್ಣ ಕೊಠಾರಕರ ಅತಂತ್ರ ಸ್ಥಿತಿಯಲ್ಲಿದ್ದು, ತಮ್ಮ ಪರಿಸ್ಥಿತಿಯ ಬಗ್ಗೆ ವಿಡಿಯೊ ಸಂದೇಶದಲ್ಲಿ ವಿವರಿಸಿದ್ದಾರೆ. ಅವರು ‘ಕಾರ್ಪೊರೇಷನ್ ಮುಲ್ತಾಖಾ ಅಲ್ ಅಸ್ರಾರ್’ ಎಂಬ ಸಂಸ್ಥೆಯ ವಾಹನ ಚಾಲಕನ ನೌಕರಿಗಾಗಿ ಕಳೆದ ವರ್ಷ ಆಗಸ್ಟ್‌ನಲ್ಲಿ ಸೌದಿ ಅರೇಬಿಯಾಕ್ಕೆ ತೆರಳಿದ್ದರು.ಆದರೆ, ಅಲ್ಲಿ ತನಗೆ ರಸ್ತೆ ಬದಿಯಿಂದ ಕಾಗದ ಹೆಕ್ಕುವ ಕೆಲಸ ನೀಡಲಾಯಿತು. ತಾನಿರುವ ಊರು ಹಳ್ಳಿಯಾಗಿದ್ದು, ರಸ್ತೆಗಳ ಪರಿಚಯವಿಲ್ಲ. ಎಲ್ಲಿಗೆ ಹೋಗಬೇಕು ಎಂದು ತಿಳಿಯುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

‘ಎಂಟು ತಿಂಗಳ ಅವಧಿಯ ದುಡಿಮೆಗೆ ಕೇವಲ ಮೂರು ತಿಂಗಳ ವೇತನವನ್ನು ನೀಡಿದ್ದಾರೆ. ವಾಪಸ್ ಬರಲು, ಊಟೋಪಚಾರಕ್ಕೆ ಹಣವಿಲ್ಲದೇ ಪರದಾಡುವಂತಾಗಿದೆ. ಸಂಸ್ಥೆಯ ಮಾಲೀಕರು ಯಾವುದಕ್ಕೂ ಸ್ಪಂದಿಸುತ್ತಿಲ್ಲ. ಪಾಸ್‌ಪೋರ್ಟನ್ನೂ ಅವರು ತೆಗೆದುಕೊಂಡಿದ್ದಾರೆ. ಮತ್ತೂ ಕೆಲಸ ಮಾಡುವಂತೆಒತ್ತಡ ಹೇರುತ್ತಿದ್ದಾರೆ. ಹೊರಗೆ ಹೋದರೆ ಕೊರೊನಾ ವೈರಸ್‌ನಿಂದ ಸತ್ತು ಹೋದೇನು ಎಂದರೆ ಅದಕ್ಕೂ ನಕಾರಾತ್ಮಕವಾಗಿ ಉತ್ತರಿಸುತ್ತಾರೆ.ಕಾರವಾರದಲ್ಲಿರುವ ಪತ್ನಿ, ಮಕ್ಕಳು ಅಸಹಾಯಕರಾಗಿದ್ದಾರೆ. ನನ್ನನ್ನು ಹೇಗಾದರೂ ಮಾಡಿ ಊರಿಗೆ ಕರೆಸಿಕೊಳ್ಳಿ’ ಎಂದು ಕಣ್ಣೀರು ಹಾಕಿ ಅಳಲು ತೋಡಿಕೊಂಡಿದ್ದಾರೆ.

ADVERTISEMENT

ಈ ಸಂಬಂಧ ಶಾಸಕಿ ರೂಪಾಲಿ ನಾಯ್ಕ ಹಾಗೂ ರಾಜ್ಯ ಸರ್ಕಾರಕ್ಕೆ ಅವರು ವಿಡಿಯೊದಲ್ಲಿ ಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಅವರನ್ನು ಸೋಮವಾರ ಭೇಟಿ ಮಾಡಿದ ಪತ್ನಿ ಮಂಗಲಾ, ತಮ್ಮ ಪತಿಯನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ. ಮನವಿಯ ಪ್ರತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಸಂಸದ ಅನಂತಕುಮಾರ ಹೆಗಡೆ ಹಾಗೂ ಶಾಸಕಿ ರೂಪಾಲಿ ನಾಯ್ಕ ಅವರಿಗೂನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.