ADVERTISEMENT

‘ಕುಲಗೌರವವನ್ನು ಜಗತ್ತಿಗೆ ಸಾರಿದ ಕೆಂಪೇಗೌಡ’

​ಪ್ರಜಾವಾಣಿ ವಾರ್ತೆ
Published 27 ಜೂನ್ 2018, 13:17 IST
Last Updated 27 ಜೂನ್ 2018, 13:17 IST
ಹೊನ್ನಾವರದಲ್ಲಿ ಬುಧವಾರ ನಡೆದ ನಾಡಪ್ರಭು ಕೆಂಪೇಗೌಡ ಜನ್ಮದಿನಾಚರಣೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ಜೆ.ಗೌಡ ದೀಪ ಬೆಳಗಿದರು
ಹೊನ್ನಾವರದಲ್ಲಿ ಬುಧವಾರ ನಡೆದ ನಾಡಪ್ರಭು ಕೆಂಪೇಗೌಡ ಜನ್ಮದಿನಾಚರಣೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ಜೆ.ಗೌಡ ದೀಪ ಬೆಳಗಿದರು   

ಹೊನ್ನಾವರ: ‘ಐದು ನೂರು ವರ್ಷಗಳ ಹಿಂದೆ ಬೆಂಗಳೂರು ನಗರವನ್ನು ಕಟ್ಟುವ ಜೊತೆಗೆ ಒಕ್ಕಲಿಗರ ಕುಲಗೌರವವನ್ನು ಜಗತ್ತಿಗೆ ಸಾರಿದ ಮಹಾನ್ ವ್ಯಕ್ತಿ ಕೆಂಪೇಗೌಡ’ ಎಂದು ಶಿಕ್ಷಕ ಎಂ.ಟಿ.ಗೌಡ ಶ್ಲಾಘಿಸಿದರು.

ತಾಲ್ಲೂಕು ಒಕ್ಕಲಿಗರ ಸಂಘ ಬುಧವಾರ ಇಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಕೆಂಪೇಗೌಡ ಅವರ ಕುರಿತು ಉಪನ್ಯಾಸ ನೀಡಿದರು.

‘ಸಂವಿಧಾನದಲ್ಲಿ ಭಾರತ ದೇಶಕ್ಕೆ ಜಾತ್ಯತೀತ ವ್ಯವಸ್ಥೆಯನ್ನು ಅಂಗೀಕರಿಸಲಾಗಿದೆ. ಸಾಮಾಜಿಕ ಪ್ರಜ್ಞೆ ಜನರಲ್ಲಿ ಜಾಗೃತವಾಗಬೇಕು. ಮೂಲ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಬೇಕಿದೆ. ಮೂಲ ಕಸುಬಾದ ಒಕ್ಕಲುತನವನ್ನು ಬಿಡದ ಒಕ್ಕಲಿಗರು, ಕೆಂಪೇಗೌಡ ಅವರ ಆದರ್ಶವನ್ನು ಪಾಲಿಸಿ ನಾಡು ಕಟ್ಟುವ ಕೆಲಸದಲ್ಲಿ ಕೈಜೋಡಿಸಬೇಕು’ ಎಂದು ಅವರು ಹೇಳಿದರು.

ADVERTISEMENT

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಪಂಚಾಯಿತಿ ಸದಸ್ಯ ಗಣಪಯ್ಯ ಗೌಡ ಮಾತನಾಡಿ, ‘ಕೆಂಪೇಗೌಡರು ಕೇವಲ ಒಕ್ಕಲಿಗ ಸಮಾಜಕ್ಕೆ ಸೀಮಿತರಾಗಿಲ್ಲ. ಅವರು ನಾಡಿಗೇ ಆದರ್ಶಪ್ರಾಯರಾಗಿದ್ದಾರೆ, ಅವರ ವ್ಯಕ್ತಿತ್ವ ನಮಗೆ ಸ್ಫೂರ್ತಿದಾಯಕ. ಬೇರೆಯವರನ್ನು ತುಳಿಯಲು ನಮ್ಮತನ ಉಪಯೋಗಿಸಬಾರದು. ಸಮಾಜ ಕಟ್ಟುವ ಕಾರ್ಯದಲ್ಲಿ ಎಲ್ಲರೂ ತೊಡಗಿಸಿಕೊಳ್ಳೋಣ’ ಎಂದು ಸಲಹೆ ನೀಡಿದರು.

ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಕೃಷ್ಣ ಗೌಡ, ಒಕ್ಕಲಿಗ ಸಂಘದ ಅಧ್ಯಕ್ಷ ಟಿ.ಜೆ.ಗೌಡ, ಒಕ್ಕಲಿಕ ಯುವ ವೇದಿಕೆಯ ಅಧ್ಯಕ್ಷ ವಾಸು ಗೌಡ ಮಾತನಾಡಿದರು. ಸಂಘದ ನಿರ್ದೇಶಕ ತಿಮ್ಮಪ್ಪ ಗೌಡ, ಮಾಬ್ಲ ಗೌಡ ಹಕ್ಕಲಕೇರಿ, ಅಣ್ಣಪ್ಪ ಗೌಡ ಕೆಳಗಿನೂರು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಬಾಲಚಂದ್ರ ಗೌಡ ಸ್ವಾಗತಿಸಿದರು. ತಿಮ್ಮಪ್ಪ ಗೌಡ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.