ADVERTISEMENT

ಕಾರವಾರ: ಕೇಣಿ ಬಂದರು ಯೋಜನೆ ಕೈಬಿಡಲು ಮನವಿ

ಡಿಸಿಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಮನವಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 3:12 IST
Last Updated 22 ಆಗಸ್ಟ್ 2025, 3:12 IST
ಅಂಕೋಲಾ ತಾಲ್ಲೂಕಿನ ಕೇಣಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸರ್ವಋತು ಆಳ ಸಮುದ್ರ ಗ್ರೀನ್‌ಫೀಲ್ಡ್ ಬಂದರು ಯೋಜನೆ ಕೈಬಿಡಬೇಕೆಂದು ಒತ್ತಾಯಿಸಿ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರಿಗೆ ಮನವಿ ಸಲ್ಲಿಸಿದರು
ಅಂಕೋಲಾ ತಾಲ್ಲೂಕಿನ ಕೇಣಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸರ್ವಋತು ಆಳ ಸಮುದ್ರ ಗ್ರೀನ್‌ಫೀಲ್ಡ್ ಬಂದರು ಯೋಜನೆ ಕೈಬಿಡಬೇಕೆಂದು ಒತ್ತಾಯಿಸಿ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರಿಗೆ ಮನವಿ ಸಲ್ಲಿಸಿದರು   

ಕಾರವಾರ: ‘ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆಯದೆ ಅಂಕೋಲಾ ತಾಲ್ಲೂಕಿನ ಕೇಣಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸರ್ವಋತು ಆಳ ಸಮುದ್ರ ಗ್ರೀನ್‌ಫೀಲ್ಡ್ ಬಂದರು ಯೋಜನೆ ಕೈಬಿಡಬೇಕು’ ಎಂದು ಒತ್ತಾಯಿಸಿ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

‘ಸಾವಿರಾರು ಕೋಟಿ ವೆಚ್ಚದ ಈ ಯೋಜನೆ ಜಾರಿಯಿಂದ ಮೀನುಗಾರರು, ರೈತರಿಗೆ ಸೇರಿದ ನೂರಾರು ಎಕರೆ ಭೂಮಿ ಸ್ವಾಧೀನಗೊಳ್ಳಲಿದೆ. ಕೃಷಿ, ಮೀನುಗಾರಿಕೆ ಅವಲಂಭಿಸಿಕೊಂಡಿರುವ ಕುಟುಂಬಗಳು ಬೀದಿಪಾಲಾಗಲಿವೆ. ನೂರಾರು ಜನರನ್ನು ಬೀದಿಗೆ ತಳ್ಳುವ ಯೋಜನೆ ಜಾರಿಗೊಳಿಸುವ ಅಗತ್ಯವಿಲ್ಲ’ ಎಂದು ಒತ್ತಾಯಿಸಿದರು.

‘ಬಂದರು ನಿರ್ಮಾಣಗೊಳ್ಳಲಿರುವ ಸ್ಥಳಕ್ಕೆ ಸಮೀಪದಲ್ಲೇ ನೌಕಾನೆಲೆ ಇದೆ. ಗ್ರೀನ್‌ಫೀಲ್ಡ್ ಬಂದರಿಗೆ ವಿದೇಶಿ ಹಡಗುಗಳ ಸಂಚಾರ ನಿರಂತರವಾಗಿರುವುದರಿಂದ ಭದ್ರತೆ ದೃಷ್ಟಿಯಿಂದ ಈ ಯೋಜನೆ ಕಾರ್ಯಸಾಧು ಅಲ್ಲ ಎಂದೆನಿಸುತ್ತದೆ. ಯೋಜನೆ ಜಾರಿಗೆ ಮುನ್ನ ರಕ್ಷಣಾ ಇಲಾಖೆಯಿಂದ ಅನುಮತಿ ಪಡೆದುಕೊಂಡಿಲ್ಲ. ಅಲ್ಲದೇ, ಬಂದರು ಯೋಜನೆಗೆ ಸಂಬಂಧಿಸಿದಂತೆ ಪರಿಸರ ಪರಿಣಾಮ ಮೌಲ್ಯೀಕರಣ ವರದಿಯನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಿಲ್ಲ’ ಎಂದು ದೂರಿದರು.

ADVERTISEMENT

‘ಬಂದರು ಯೋಜನೆ ಜಾರಿಗೆ ತರುವಂತೆ ಜನರ ದಿಕ್ಕು ತಪ್ಪಿಸಲು ಬಾಹ್ಯಶಕ್ತಿಗಳು ಪ್ರಯತ್ನ ನಡೆಸುತ್ತಿವೆ. ಯೋಜನೆ ವ್ಯಾಪ್ತಿಯ ಪ್ರದೇಶದವರಲ್ಲದ, ಹೊರಗಿನಿಂದ ಬಂದ ಕೆಲವರು ಬಂದರು ನಿರ್ಮಿಸಲಿರುವ ಖಾಸಗಿ ಕಂಪನಿ ಮತ್ತು ಜನರನ್ನು ವಂಚಿಸಲು ಯತ್ನಿಸುತ್ತಿದ್ದಾರೆ’ ಎಂದೂ ದೂರಿದರು.

ಪ್ರಮುಖರಾದ ರಾಜೇಂದ್ರ ನಾಯ್ಕ, ಹುವಾ ಕಂಡೇಕರ, ಜಗದೀಶ ನಾಯಕ ಮೊಗಟಾ, ಸಂಜು ನಾಯ್ಕ, ಪರ್ಬತ್ ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.