ಭರಮಪ್ಪ ಕುಂಟಗೇರಿ
ಕಾರವಾರ: ‘ಅಂಕೋಲಾದ ಕೇಣಿಯಲ್ಲಿ ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆದುಕೊಂಡು ಸರ್ವಋತು ಆಳ ಸಮುದ್ರ ಗ್ರೀನ್‌ಫೀಲ್ಡ್ ಬಂದರು ನಿರ್ಮಾಣ ಯೋಜನೆ ಕಾರ್ಯಗತಗೊಳಿಸಲಾಗುತ್ತದೆ’ ಎಂದು ಜೆಎಸ್‌ಡಬ್ಲ್ಯೂ ಕೇಣಿ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಯೋಜನಾ ಮುಖ್ಯಸ್ಥ ಭರಮಪ್ಪ ಕುಂಟಗೇರಿ ಹೇಳಿದರು.
‘ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಆಧಾರದಲ್ಲಿ ಬಂದರು ಯೋಜನೆ ಕೈಗೊಳ್ಳಲು 2022ರಲ್ಲಿಯೇ ಸರ್ಕಾರ ಆದೇಶಿಸಿದೆ. 2023ರಲ್ಲಿ ಸರ್ಕಾರದೊಂದಿಗೆ ಯೋಜನೆ ಕುರಿತು ಕಂಪನಿಯು ಒಪ್ಪಂದ ಮಾಡಿಕೊಂಡಿದೆ. ಯೋಜನೆ ಕಾರ್ಯಸಾಧ್ಯತೆಯ ಬಗ್ಗೆ ಪರಿಸರ ಸಾಧ್ಯತಾ ವರದಿ ಸಿದ್ಧವಾಗಿದ್ದು, ಭೂವೈಜ್ಞಾನಿಕ ಸಮೀಕ್ಷೆ ಕೂಡ ಮುಕ್ತಾಯಗೊಂಡಿದೆ’ ಎಂದು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಪರಿಸರ ಅನುಮತಿ ಇನ್ನಷ್ಟೆ ಸಿಗಬೇಕಿದೆ. ಯೋಜನೆ ಸಾಧಕ ಬಾಧಕದ ಕುರಿತು ಚರ್ಚಿಸಲು ರಾಜ್ಯ ಮಾಲಿನ್ಯ ಮಂಡಳಿಯು ಸದ್ಯದಲ್ಲಿಯೇ ಸಾರ್ವಜನಿಕ ಅಹವಾಲು ಸಭೆ ನಡೆಸಲಿದೆ. ಸಭೆಗೂ ಮುನ್ನ ಸ್ಥಳೀಯರಿಗೆ ಮಾಹಿತಿ ನೀಡಲಾಗುತ್ತದೆ. ಸ್ಥಳೀಯರನ್ನು ದೂರವಿರಿಸಿ ಯಾವುದೇ ಚಟುವಟಿಕೆ ನಡೆಸುವುದಿಲ್ಲ’ ಎಂದರು.
‘4,118 ಕೋಟಿ ವೆಚ್ಚದ ಯೋಜನೆ ಇದಾಗಿದ್ದು, 30 ವರ್ಷಗಳ ಅವಧಿಗೆ ಕಂಪನಿಯು ಬಂದರನ್ನು ಲೀಸ್ ಆಧಾರದಲ್ಲಿ ನಡೆಸಲಿದೆ. ಮೊದಲ ಹಂತದಲ್ಲಿ ವಾರ್ಷಿಕ 30 ದಶಲಕ್ಷ ಟನ್ ಸಾಮರ್ಥ್ಯದ (ಎಂಟಿಪಿಎ) ಬಂದರು ನಿರ್ಮಾಣಗೊಳ್ಳಲಿದ್ದು, ಬಳಿಕ ಹಂತ ಹಂತವಾಗಿ 92 ಎಂಟಿಪಿಎ ಸಾಮರ್ಥ್ಯಕ್ಕೆ ಏರಿಕೆ ಮಾಡಲಾಗುತ್ತದೆ’ ಎಂದರು.
‘ಯೋಜನೆಗೆ 140 ಎಕರೆಯಷ್ಟು ಜಾಗ ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ. ಸುಮಾರು 75 ಮನೆಗಳು ತೆರವುಗೊಳ್ಳಬಹುದು. ಆರ್ಥಿಕ ಸಬಲೀಕರಣಕ್ಕೆ ವಿವಿಧ ಯೋಜನೆ ಹಮ್ಮಿಕೊಳ್ಳಲಾಗುವುದು’ ಎಂದರು.
ಬಂದರು ಜಲಸಾರಿಗೆ ಮಂಡಳಿ ಇಇ ಎಂ.ಇ.ಪ್ರಸಾದ್, ಎಇಇ ವಿನಾಯಕ ನಾಯ್ಕ, ಎಇ ಬಸಪ್ಪ, ರೇಷ್ಮಾ ಇದ್ದರು.
ಕೇಣಿ ಭಾಗದ ಸ್ಥಳೀಯರಿಗೆ ಉದ್ಯೋಗಾವಕಾಶ ಸೃಷ್ಟಿಗೆ ಪೂರಕ ಕೌಶಲ ತರಬೇತಿ ನೀಡಲಾಗುವುದುಭರಮಪ್ಪ ಕುಂಟಗೇರಿ, ಜೆಎಸ್‌ಡಬ್ಲ್ಯೂ ಕೇಣಿ ಪೋರ್ಟ್ ಯೋಜನಾ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.