
ಜೊಯಿಡಾ: ಕಾರ್ತಿಕ ದ್ವಾದಶಿಯ ಮಾರನೇ ದಿನ ತುಳಸಿ ಹಬ್ಬದ ಅಂಗವಾಗಿ ಜೊಯಿಡಾ ಗಾವಡೆವಾಡಾದ ಖಾಫ್ರಿ ದೇವರ ಜಾತ್ರೆ ಸೋಮವಾರ ಅದ್ದೂರಿಯಾಗಿ ನಡೆಯಿತು.
ಭಕ್ತರು ಹರಕೆ ರೂಪದಲ್ಲಿ ಕಂಬಳಿ ಕೊಡುವುದು ಇಲ್ಲಿಯ ವಿಶೇಷ. ವರ್ಷದಿಂದ ವರ್ಷಕ್ಕೆ ಜಾತ್ರೆ ಪ್ರಸಿದ್ಧಿ ಪಡೆದಿದ್ದು ಸುಮಾರು 2000ಕ್ಕೂ ಹೆಚ್ಚು ಕಂಬಳಿಗಳನ್ನು ಭಕ್ತರು ದೇವರಿಗೆ ಹರಕೆಯಾಗಿ ಅರ್ಪಿಸುವುದರಿಂದ ಜೊಯಿಡಾ ಮಾರುಕಟ್ಟೆಗೆ ರಾಜ್ಯದ ಚಿತ್ರದುರ್ಗ, ಧಾರವಾಡ, ಬೆಳಗಾವಿ ಮತ್ತು ಹಾವೇರಿಯಿಂದ ಕಂಬಳಿ ವ್ಯಾಪಾರಸ್ಥರು ವಾರದ ಹಿಂದೆಯೇ ಬಂದು ಶಿವಾಜಿ ವೃತ್ತದಲ್ಲಿ ಮಾರಾಟಕ್ಕೆ ಇಡುತ್ತಾರೆ.
ತಾಲ್ಲೂಕಿನ ಬುಡಕಟ್ಟು ಕುಣಬಿ ಸಮುದಾಯದ ಸಂಪ್ರದಾಯದಂತೆ ನಡೆಯುವ ಈ ಜಾತ್ರೆಗೆ ಬೆಳಿಗ್ಗೆ ಗ್ರಾಮದ ಬುಧವಂತರ ಮನೆಯ ಅಂಗಳದಲ್ಲಿರುವ ತುಳಸಿ ಕಟ್ಟೆಯನ್ನು ಹೂಗಳಿಂದ ಅಲಂಕರಿಸಿ ಖಾಫ್ರಿ ದೇವರನ್ನು ಪೂಜಿಸಿ ಸೂರ್ಯ ದೇವರನ್ನು ನೆನೆಯುತ್ತಾ ಕುಣಬಿ ಜಾನಪದ ಹಾಡುಗಳನ್ನು ಹಾಡಲು ಪ್ರಾರಂಭಿಸುತ್ತಾರೆ.
ಮಧ್ಯಾಹ್ನ ಮೈಗೆ ಸಂಪೂರ್ಣ ಕಂಬಳಿಗಳನ್ನು ಸುತ್ತಿಕೊಂಡು ಹಾಗೂ ಚೆಂಡು ಹೂವುಗಳಿಂದ ಶೃಂಗರಿಸಿದ ಖಾಫ್ರಿ ಮತ್ತು ಜಲ್ಮಿ ಎಂಬ ಎರಡು ದೇವರುಗಳು ಕೈಯಲ್ಲಿ ಒನಕೆ ಹಿಡಿದು ತುಳಸಿ ಕಟ್ಟೆಯನ್ನು ಪ್ರವೇಶಿಸುತ್ತಾರೆ, ಭಕ್ತರ ಜಯ ಘೋಷ ಮುಗಿಲು ಮುಟ್ಟುತ್ತದೆ.
ಖಾಫ್ರಿಯನ್ನು ಗಡಿ ಕಾಯುವ ದೇವರೆಂದು ಕರೆಯಲಾಗುತ್ತದೆ, ಪ್ರತಿ ಹಂತದಲ್ಲೂ ನಮ್ಮ ಹೊಲ ಗದ್ದೆಗಳನ್ನು ಕಾಯುತ್ತಾರೆ ಎಂಬ ನಂಬಿಕೆ ಇದೆ. ಜಾತ್ರೆಯ ದಿನ ಯಾರೂ ಗದ್ದೆಗೆ ಬೆಳೆ ಕಾಯಲು ರಾತ್ರಿ ಹೋಗುವುದಿಲ್ಲ,ಚಪ್ಪರದಲ್ಲಿ ಬೆಂಕಿ ಹಚ್ಚಿ ಬರುತ್ತಾರೆ, ಹಿಂದೆ ಹೊಲಕ್ಕೆ ಹೋದವರನ್ನು ದೇವರು ಓಡಿಸಿದ್ದ ಘಟನೆ ನಡೆದಿದೆ ಎಂದು ಹಿರಿಯರು ಹೇಳುತ್ತಾರೆ ಎನ್ನುತ್ತಾರೆ ಸ್ಥಳೀಯರಾದ ಸುರೇಶ ಗಾವಡಾ.
ಆರಂಭದಲ್ಲಿ ಗಾವಡೆವಾಡ ಗ್ರಾಮಕ್ಕೆ ಸೀಮಿತವಾಗಿದ್ದ ಜಾತ್ರೆಗೆ ಈಗ ತಾಲ್ಲೂಕಿನ ಬಹುತೇಕ ಎಲ್ಲ ಕಡೆಯಿಂದಲೂ ಜೊತೆಗೆ ಕಾರವಾರ, ಹಳಿಯಾಳ, ಬೆಳಗಾವಿ ಮತ್ತು ನೆರೆಯ ಗೋವಾ ರಾಜ್ಯದಿಂದಲೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಜಾತ್ರೆಗೆ ಬರುತ್ತಾರೆ.
ಜಾತ್ರೆಯ ಹಿಂದಿನ ದಿನ ಅಂದರೆ ದ್ವಾದಶಿಯಂದು ತುಳಸಿ ಮದುವೆ ಮಾಡಿ ಜಾಗರಣೆಗಾಗಿ ಇಲ್ಲಿ ಪೌರಾಣಿಕ ನಾಟಕಮಾಡಲಾಗುತ್ತದೆ.
ಜಾತ್ರೆಯ ಹಿಂದಿನ ದಿನ ₹500ಕ್ಕೆ ಮಾರಾಟವಾಗಿದ್ದ ಕಂಬಳಿಗಳು ಜಾತ್ರೆಯ ದಿನ ₹1,000ಕ್ಕೆ ಮಾರಾಟವಾದವು. ಕೊನೆಗೆ ಗ್ರಾಹಕರು ಕಂಬಳಿಗಳ ಖರೀದಿಗಾಗಿ ಮುಗಿಬಿದ್ದರು ಜೊತೆಗೆ ಕಂಬಳಿಗಳ ಕೊರತೆಯೂ ಇದ್ದು ಹಲವು ಭಕ್ತರು ಕಂಬಳಿ ಸಿಗದೆ ಬೇಸರಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.