
ಕಾರವಾರ: ‘ಸ್ವಾಭಿಮಾನ, ಧೈರ್ಯಕ್ಕೆ ಹೆಸರಾದ ಕಿತ್ತೂರು ರಾಣಿ ಚೆನ್ನಮ್ಮ ಇಡೀ ಸಮಾಜಕ್ಕೆ ಎಲ್ಲ ಕಾಲಕ್ಕೆ ಮಾದರಿಯಾಗಬಲ್ಲ ವ್ಯಕ್ತಿತ್ವ ಹೊಂದಿದ್ದವರು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹೇಳಿದರು.
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ನಾಡು, ದೇಶದ ಸಂಪತ್ತು ಪರಕೀಯರ ಪಾಲಾಗದಂತೆ ದಿಟ್ಟತನದಿಂದ ಹೋರಾಡುವ ಮೂಲಕ ದೇಶಕ್ಕೆ ಸ್ವಾಭಿಮಾನದ ದಿಕ್ಸೂಚಿ ತೋರಿಸಿದ್ದಾರೆ. ಈ ದಿಕ್ಸೂಚಿಯಡಿ ನಾವೆಲ್ಲರೂ ನಡೆಯಬೇಕು’ ಎಂದರು.
‘ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ಈಗ ಎರಡು ಶತಮಾನ ಕಳೆದಿದೆ. ಅವರ ಹೋರಾಟ ಇಂದಿಗೂ ಅಜರಾಮರವಾಗಿದೆ. ಹಲವು ಪೀಳಿಗೆ ಕಳೆದರೂ ಚೆನ್ನಮ್ಮನ ಯಶೋಗಾಥೆ ಸ್ಫೂರ್ತಿ ನೀಡುತ್ತಲೇ ಇದೆ ಎಂದಾದರೆ ಅವರು ಸ್ವಾರ್ಥಕ್ಕೆ ಬದುಕಿರಲಿಲ್ಲ ಎಂಬುದೇ ಅರ್ಥ. ಸಮಾಜಕ್ಕೆ ಅವರ ಕೊಡುಗೆ ಅನನ್ಯ’ ಎಂದರು.
ಉಪನ್ಯಾಸ ನೀಡಿದ ಯಮುನಾ ಗಾಂವಕರ, ‘ಕಿತ್ತೂರು ರಾಣಿ ಚೆನ್ನಮ್ಮ ಅವರು ಕತ್ತಿವರಸೆ, ಬಿಲ್ಲುಗಾರಿಕೆಯ ತರಬೇತಿ ಪಡೆದಿದ್ದರು. ಸಾಹಸ, ಶೌರ್ಯ, ಧೈರ್ಯ, ದೇಶಪ್ರೇಮದ ಪ್ರತಿರೂಪ. ಅವರಂತೆ ಎಲ್ಲರೂ ರಾಷ್ಟ್ರಾಭಿಮಾನ ಬೆಳೆಸಿಕೊಳ್ಳಬೇಕು’ ಎಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸತೀಶ ನಾಯ್ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ರಾಮಾ ನಾಯ್ಕ, ಗೌರವ ಕಾರ್ಯದರ್ಶಿ ಜಿ.ಡಿ.ಮನೋಜೆ, ಉಪನ್ಯಾಸಕರಾದ ಮಂಜುನಾಥ ಗುನಗಾ, ಸತೀಶ ಪಾಲ್ಗೊಂಡಿದ್ದರು. ಶಿಕ್ಷಕಿ ವನಿತಾ ಶೇಟ್ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.