ADVERTISEMENT

ಕೊಕ್ಕಾರ ಕೆರೆ ತುಂಬ ಜಲ: ಅಡಿಕೆ ತೋಟ ಸಬಲ, ನೀರ ನೆಮ್ಮದಿ ನೀಡಿದ ಜೋಡುಕೆರೆ

ಸಂಧ್ಯಾ ಹೆಗಡೆ
Published 21 ಮಾರ್ಚ್ 2020, 19:45 IST
Last Updated 21 ಮಾರ್ಚ್ 2020, 19:45 IST
ಮಂಚಿಕೇರಿ ಸಮೀಪದ ಜೋಗಿಮಟ್ಟಿ ಕೊಕ್ಕಾರ ಕೆರೆ
ಮಂಚಿಕೇರಿ ಸಮೀಪದ ಜೋಗಿಮಟ್ಟಿ ಕೊಕ್ಕಾರ ಕೆರೆ   

ಶಿರಸಿ: ಬೇಸಿಗೆ ಬಂತೆಂದರೆ ಕಣ್ಣೆದುರು ಒಣಗುವ ತೋಟ, ಬರಿದಾಗುವ ಬಾವಿ, ಕುಡಿಯುವ ನೀರಿಗಾಗಿ ಅಲೆದಾಡುತ್ತಿದ್ದ ಈ ಗ್ರಾಮಸ್ಥರ ಬದುಕನ್ನು ಪುಟ್ಟ ಕೆರೆಯೊಂದು ಬದಲಿಸಿದೆ. ಊರು–ಕೇರಿಯ ತುಂಬ ನೀರ ನೆಮ್ಮದಿಯನ್ನು ಹರಡಿದೆ.

ಯಲ್ಲಾಪುರ ತಾಲ್ಲೂಕು ಮಂಚಿಕೇರಿ ಸುತ್ತಮುತ್ತ ಬಹುತೇಕ ಹಳ್ಳಿಗರಿಗೆ ಬೇಸಿಗೆ ಬಿಸಿಲಿಗಿಂತ ಕುಡಿಯುವ ನೀರಿನ ಹುಡುಕಾಟವೇ ಹೆಚ್ಚು ಪ್ರಖರ. ಹೀಗಾಗಿ, ಬೇಸಿಗೆಯಲ್ಲಿ ಕೊಳವೆಬಾವಿ ಕೊರೆಯುವ ಯಂತ್ರಗಳು ಇಲ್ಲಿ ಜೋರು ಸದ್ದು ಮಾಡುತ್ತವೆ. ಕೆಲವೊಮ್ಮೆ ಕೊಳವೆಬಾವಿಯೂ ಬರಿದಾಗಿ, ನೀರು ಅರಸಿ ಊರು ಅಲೆಯುವ ಸಂದರ್ಭವೂ ಎದುರಾಗುತ್ತದೆ.

ಇಂತಹುದೇ ಪರಿಸ್ಥಿತಿ ಎದುರಿಸಿದ ಜೋಗಿಮಟ್ಟಿ ಕೆಕ್ಕಾರ್ ಗ್ರಾಮಸ್ಥರು, 2017ರಲ್ಲಿ ಊರಿನ ಕೆರೆ ಪುನಶ್ಚೇತನಕ್ಕೆ ಮುಂದಾದರು. ‘ತೋಟದಲ್ಲಿ ಬೆಳೆಯಿಲ್ಲ, ರೈತರ ಬಳಿ ದುಡ್ಡಿಲ್ಲ. ಇದ್ದ ಹಣದಲ್ಲಿಯೇ ಪ್ರತಿ ಮನೆಯವರು ₹ 2000 ವಂತಿಗೆ ನೀಡಿದರು. ಅರಣ್ಯ ಇಲಾಖೆಯವರು ₹ 40ಸಾವಿರ ಅನುದಾನ ಕೊಟ್ಟರು. ಸ್ಥಳೀಯ ಸಂಸ್ಥೆಯ ನೆರವು ಪಡೆದು, ಜಲತಜ್ಞ ಶಿವಾನಂದ ಕಳವೆಯವರ ಮಾರ್ಗದರ್ಶನದಲ್ಲಿ ಕೆರೆ ಅಭಿವೃದ್ಧಿಗೆ ಕೈ ಹಾಕಿದೆವು. ಹೂಳು ಖಾಲಿಯಾಗುತ್ತಿದ್ದಂತೆ, ಮೇ ತಿಂಗಳಿನಲ್ಲೂ ಕೆರೆಯಲ್ಲಿ ನೀರು ಜಿನುಗಿತು’ ಎನ್ನುತ್ತಾರೆ ಸ್ಥಳೀಯರಾದ ಗುರು ಭಟ್ಟ.

ADVERTISEMENT

‘ಜಲ ಜಾಗೃತಿ ಮೂಡಿಸುತ್ತಿರುವ ಹಾಸಣಗಿ ಸೊಸೈಟಿ ಅಧ್ಯಕ್ಷ ಆರ್.ಎನ್.ಹೆಗಡೆ ಗೋರ್ಸಗದ್ದೆ, ಗೋಪಾಲ ಭಟ್ಟ, ನಾಗರಾಜ ಹೆಗಡೆ, ನವೀನ ಹೆಗಡೆ, ಊರಿನ ಪ್ರತಿಯೊಬ್ಬರೂ ತಮ್ಮ ಮನೆಯ ಕೆಲಸದಂತೆ, ಕೆರೆ ಕಾಯಕದಲ್ಲಿ ತೊಡಗಿಕೊಂಡರು. ಜೋಡುಕೆರೆ ಒಳ್ಳೆಯ ಫಲಿತಾಂಶ ಕೊಡುತ್ತದೆ ಎಂದು ಕಳವೆ ಹೇಳಿದ್ದರು ಹೀಗಾಗಿ, ದೊಡ್ಡ ಕೆರೆಯ ಮೇಲ್ಭಾಗದಲ್ಲಿ ನೀರಿಂಗಲು ಸಣ್ಣ ಕೆರೆ ನಿರ್ಮಿಸಿದೆವು. ಕೆಲಸಗಾರರಿಗೆ ಪ್ರತಿ ಮನೆಯಲ್ಲಿ ಒಂದೊಂದು ದಿನ ಊಟ, ಚಹಾದ ವ್ಯವಸ್ಥೆ ಮಾಡಿದೆವು. ಕೆರೆ ಹೂಳೆತ್ತಿದ ವರ್ಷ ಉತ್ತಮ ಮಳೆಯಾಯಿತು. ಕೆರೆ ತುಂಬಿತು’ ಎಂದು ಅವರು ಕೆರೆ ಕಟ್ಟಿದ ಕಥೆ ಬಿಚ್ಚಿಟ್ಟರು.

ಮೂರು ವರ್ಷಗಳಿಂದ ಊರಿನ ಎಲ್ಲ ಬಾವಿಗಳಲ್ಲಿ ಬೇಸಿಗೆಯಲ್ಲೂ ಆರೇಳು ಅಡಿ ನೀರು ಇರುತ್ತದೆ. ಕೊಳವೆಬಾವಿ ಬಳಸುವ ಸಂದರ್ಭ ಬರಲೇ ಇಲ್ಲ. ತೋಟ ಸದಾ ಹಸಿರಾಗಿರುತ್ತದೆ. ಮಾರ್ಚ್‌ ತಿಂಗಳಿನಲ್ಲೂ ಕೆರೆಯಲ್ಲಿ 5.5 ಅಡಿ ನೀರಿದೆ ಎನ್ನುವಾಗ ಅವರ ಮೊಗದಲ್ಲಿ ನಗುವಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.