ಕುಮಟಾದ ಗಿಬ್ ವೃತ್ತದ ಬಳಿ ಚತುಷ್ಪಥ ಕಾಮಗಾರಿ ನನೆಗುದಿಗೆ ಬಿದ್ದಿದೆ
ಕುಮಟಾ: ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ–66 ಅನ್ನು ವಿಸ್ತರಿಸಿ, ಚತುಷ್ಪಥ ನಿರ್ಮಿಸುವ ಕಾಮಗಾರಿ ಪಟ್ಟಣದ ವ್ಯಾಪ್ತಿಯಲ್ಲಿ ಇನ್ನೂ ಪೂರ್ಣಗೊಂಡಿಲ್ಲ.
ತಾಲ್ಲೂಕಿನ ಹಂದಿಗೋಣ ಹಾಗೂ ಮಣಕಿವರೆಗೆ ಚತುಷ್ಪಥ ಕಾಮಗಾರಿ ಮುಗಿದು ಮೂರು ವರ್ಷ ಕಳೆದಿವೆ. ಅಲ್ಲಿಂದ ಮುಂದೆ ಪಟ್ಟಣದ ವ್ಯಾಪ್ತಿಯ ಸುಮಾರು 5 ಕಿ.ಮೀ.ನಷ್ಟು ಭಾಗದಲ್ಲಿ ಅಲ್ಲಲ್ಲಿ ತೇಪೆ ಹಚ್ಚಿದಂತೆ ಡಾಂಬರೀಕರಣ ಮಾಡಲಾಗಿದೆ. ಇದು ವಾಹನಗಳ ನಿಲುಗಡೆಗೆ ಅನುಕೂಲಕರವಾದ ಸ್ಥಳವಾಗಿ ಮಾರ್ಪಟ್ಟಿದೆ.
ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂಸದರಾದ ನಂತರ ಕರೆದ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಚತುಷ್ಪಥ ಕಾಮಗಾರಿ ವಿಷಯವೇ ಪ್ರಧಾನವಾಗಿ ಚರ್ಚೆಯಾಗಿತ್ತು. ಭೂ ಸ್ವಾಧೀನಕ್ಕೆ ಅಡ್ಡಿಯಾಗಿರುವ ಎಲ್ಲ ಸಮಸ್ಯೆಗಳನ್ನು ನಿವಾರಿಸಿ ಪಟ್ಟಣದಲ್ಲಿ ಚತುಷ್ಪಥ ಕಾಮಗಾರಿ ಆರಂಭಿಸುವ ಭರವಸೆಯನ್ನೂ ಸಂಸದರು ನೀಡಿದ್ದರು.
ಸೂಚನೆ ಬೆನ್ನಲ್ಲೇ ಆರಂಭವಾದ ಕಾಮಗಾರಿಯು, ಹೆಚ್ಚು ಸಂಚಾರ ದಟ್ಟಣೆ ಹಾಗೂ ಶಾಲೆ-ಕಾಲೇಜು ವಲಯವಿರುವ ಪಟ್ಟಣದ ಗಿಬ್ ವೃತ್ತದ ಬಳಿ ಸ್ಥಗಿತಗೊಂಡಿದೆ. ಸಂಚಾರ ದಟ್ಟಣೆಯಿಂದ ಪಟ್ಟಣದ ಅಲ್ಲಲ್ಲಿ ಸಂಭವಿಸುವ ಅಪಘಾತ ನಿಯಂತ್ರಿಸಲು ಹೆದ್ದಾರಿಯ 2 ಕಿ.ಮೀ. ಅಂತರದಲ್ಲಿ ಸುಮಾರು ಎಂಟು ಕಡೆ ವೇಗ ನಿಯಂತ್ರಣ ತಡೆಗಳನ್ನು ನಿರ್ಮಿಸಲಾಗಿದೆ.
‘ಗಿಬ್ ವೃತ್ತದ ಬಳಿ ಹೆದ್ದಾರಿ ಕಾಮಗಾರಿಗೆ ಅಗತ್ಯ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಸ್ವಾಧೀನಗೊಳ್ಳುವ ಜಾಗದ 3ಡಿ ವಿನ್ಯಾಸ ತಯಾರಾಗಿದ್ದು, ಪರಿಹಾರ ಆದೇಶ ಸಿದ್ಧವಾದ ಬಳಿಕ ಜಾಗದ ಮಾಲೀಕರಿಗೆ ಪರಿಹಾರ ವಿತರಿಸಿ ಜಾಗ ಸ್ವಾಧೀನ ಮಾಡಿಕೊಳ್ಳಲಾಗುವುದು’ ಎಂದು ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಪ್ರತಿಕ್ರಿಯಿಸಿದರು.
‘ಗಿಬ್ ವೃತ್ತದ ಬಳಿ ಇದ್ದ ಭೂ ಸ್ವಾಧೀನ ಸಮಸ್ಯೆ ನಿವಾರಿಸಲಾಗಿದೆ. ಇನ್ನು ಕೆಲ ದಿನಗಳಲ್ಲಿ ಮತ್ತೆ ಚತುಷ್ಪಥ ಕಾಮಗಾರಿ ಆರಂಭವಾಗಲಿದೆ. ಪಟ್ಟಣದ ಹೊನಮಾಂವ್ ಹೊಳೆಯ ಅಕ್ಕಪಕ್ಕ ಎರಡು ಹೊಸ ಸೇತುವೆ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಲಾಗಿದೆ. ಆದರೆ, ಮುಖ್ಯ ಬಸ್‌ನಿಲ್ದಾಣದ ಬಳಿ ರೈಲ್ವೆ ಮೇಲ್ಸೇತುವೆ ಕೆಳಗೆ ಚತುಷ್ಪಥ ನಿರ್ಮಾಣ ಕಾಮಗಾರಿ ನಡೆಯುವ ಬಗ್ಗೆ ಅನುಮಾನವಿದೆ. ಆದರೂ, ಸಂಸದರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳೊಂದಿಗೆ ಆ ಬಗ್ಗೆ ಚರ್ಚಿಸಲಾಗುವುದು’ ಎಂದು ಶಾಸಕ ದಿನಕರ ಶೆಟ್ಟಿ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.