ADVERTISEMENT

‘ನಮ್ಮ ಬೆವರಿನ ದರ ನಿಗದಿ ಮಾಡಬೇಡಿ’

ಗುತ್ತಿಗೆದಾರರ ಸಂಘದ ವಿರುದ್ಧ ಕಾರ್ಮಿಕ ಪ್ರಮುಖರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 16:29 IST
Last Updated 29 ಆಗಸ್ಟ್ 2022, 16:29 IST

ಕಾರವಾರ: ‘ನಗರದಲ್ಲಿ ಕಾರ್ಮಿಕರು ₹ 1,500 ದಿನಗೂಲಿ ಕೇಳುತ್ತಾರೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ. ನಮ್ಮ ಬೆವರಿಗೆ ದರಪಟ್ಟಿ ನಿಗದಿ ಮಾಡುವ ಅಧಿಕಾರ ಯಾರಿಗೂ ಇಲ್ಲ’ ಎಂದು ನಿಯೋಜಿತ ಗೌಂಡಿ, ಮೇಸ್ತ್ರಿ, ಕಾರ್ಮಿಕರ ಸಂಘದ ಅಧ್ಯಕ್ಷ ತಿಮ್ಮಾರೆಡ್ಡಿ ಹೇಳಿದ್ದಾರೆ.

ನಗರದಲ್ಲಿ ಈಚೆಗೆ ಗುತ್ತಿಗೆದಾರರ ಸಂಘದವರು ಸಭೆ ನಡೆಸಿ, ಕಾರ್ಮಿಕರ ದಿನಗೂಲಿಯ ಬಗ್ಗೆ ಫಲಕ ಅಳವಡಿಸಲು ತೀರ್ಮಾನಿಸಿದ್ದರು. ಅದರ ಬಗ್ಗೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಪ್ರಸ್ತುತ ಕಾರವಾರದಲ್ಲಿ ಸಾಮಾನ್ಯವಾಗಿ ₹ 900ರ ತನಕ ದಿನಗೂಲಿಯಿದೆ. ತುರ್ತು ಸಂದರ್ಭಗಳಲ್ಲಿ ₹ 50, ₹ 100 ಹೆಚ್ಚಾಗುತ್ತದೆ. ಆದರೆ, ಗುತ್ತಿಗೆದಾರರ ಸಂಘದವರು ಆರೋಪಿಸಿದಂತೆ ದೇಶದ ಎಲ್ಲೂ ಇಲ್ಲದ ಕೂಲಿಯನ್ನು ನಾವು ಪಡೆಯುತ್ತಿಲ್ಲ. ಒಂದುವೇಳೆ ಪಡೆಯುತ್ತಿದ್ದರೆ ಕಾರ್ಮಿಕರು ಕೆಲಸಕ್ಕಾಗಿ ಕಾಯುತ್ತಿರಲಿಲ್ಲ. ಬದಲಾಗಿ ಸ್ವಂತ ಮನೆಯಲ್ಲಿದ್ದು, ಹವಾನಿಯಂತ್ರಿತ ಕಾರಿನಲ್ಲಿ ಸಂಚರಿಸುತ್ತಿದ್ದರು’ ಎಂದು ತಿರುಗೇಟು ನೀಡಿದರು.

ADVERTISEMENT

‘ಬೆಳಿಗ್ಗೆಯಿಂದ ಸಂಜೆಯವರೆಗೆ ಬಿಸಿಲಿನಲ್ಲಿ ಕಲ್ಲು ಕೆತ್ತುವುದು, ಸಿಮೆಂಟ್, ಕಲ್ಲುಗಳನ್ನು ಹೊರುವುದು, ನಿರ್ಮಾಣ ಹಂತದ 30– 40 ಅಡಿಗಳಷ್ಟು ಎತ್ತರದ ಕಟ್ಟಡಗಳಲ್ಲಿ ಕೆಲಸ ಮಾಡುತ್ತೇವೆ. ನಮ್ಮ ಬೆವರಿನ ಬೆಲೆಯನ್ನು ತಾವೇ ನಿರ್ಧರಿಸುವುದು ತಪ್ಪಾ’ ಎಂದು ಪ್ರಶ್ನಿಸಿದರು.

‘ಕೂಲಿ ಕಾರ್ಮಿಕರು, ಗೌಂಡಿಗಳು, ಮೇಸ್ತ್ರಿಗಳು ಯಾವುದೇ ಸಂಘಟನೆಗಳ ಸದಸ್ಯರಲ್ಲ. ನಮ್ಮ ಹಿತರಕ್ಷಣೆಗಾಗಿ ನಮ್ಮದೇ ಆದ ಸಂಘವನ್ನು ರಚಿಸುತ್ತೇವೆ. ಯಾರಾದರೂ ಕೂಲಿಯ ದರಪಟ್ಟಿ ಪ್ರಕಟಿಸಿದರೆ ನಮಗೆ ಸಂಬಂಧವೂ ಇಲ್ಲ. ಅವರ ದರಕ್ಕೆ ಸರಿಯಾಗಿ ಬಿಹಾರದವರೋ ಬಂಗಾಲಿಗಳೋ ಸಿಕ್ಕಿದರೆ ಅವರಿಂದಲೇ ಕೆಲಸ ಮಾಡಿಸಿಕೊಳ್ಳಲಿ’ ಎಂದರು.

ನಿಯೋಜಿತ ಸಂಘದ ಗೌರವಾಧ್ಯಕ್ಷ ಉದಯ ಬಶೆಟ್ಟಿ ಮಾತನಾಡಿ, ‘ಕೂಲಿ ಕಾರ್ಮಿಕರ, ಗೌಂಡಿಗಳ ಹಾಗೂ ಮೇಸ್ತ್ರಿಗಳ ಜೀವನೋಪಾಯದ ಮೂಲ ಸೌಕರ್ಯಗಳನ್ನು ಗುತ್ತಿಗೆದಾರರು ಪೂರೈಸುತ್ತಾರೆಯೇ? ಅಡುಗೆ ಅನಿಲದ ಸಿಲಿಂಡರ್, ಅಕ್ಕಿ, ಬೇಳೆ, ವಿದ್ಯುತ್ ಬಿಲ್ ಇತ್ಯಾದಿಗಳ ದರವನ್ನು ಸರ್ಕಾರದಿಂದ ಕಡಿಮೆ ಮಾಡಿಸಿಕೊಟ್ಟರೆ ಅವರೆಷ್ಟೇ ಕೂಲಿ ದರ ನಿಗದಿ ಮಾಡಿದರೂ ಸೇವೆ ನೀಡಲು ಸಿದ್ಧರಿದ್ದೇವೆ’ ಎಂದರು.

‘ಕಾರ್ಮಿಕರಿಗೆ ಕಡಿವಾಣ ಹಾಕಲು ಮುಂದಾಗುವ ಮೊದಲು ಕೂಲಿ ಮಾಡಿದ ಸಂಬಳವನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ’ ಎಂದೂ ಒತ್ತಾಯಿಸಿದರು.

ನಗರಸಭೆ ಸದಸ್ಯ ಹನುಮಂತ ತಳವಾರ್, ಪ್ರಮುಖರಾದ ರಾಜು ಕಟ್ಟೀಮನಿ, ಫಕ್ಕೀರಪ್ಪ ಕಳ್ಳಿಮನಿ, ಫಕೀರಪ್ಪ, ಹನುಮಂತ ವಡ್ಡರ್, ರಾಜೇಶ ವಡ್ಡರ್, ಮಹಮ್ಮದ್ ಎ.ಇನಾಂದಾರ್, ಹನುಮಂತ ಸಿಗ್ಲಿ, ರಮೇಶ ದೊಡ್ಮನೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.