ಕಾರವಾರ: ನೂರಕ್ಕೂ ಹೆಚ್ಚು ಪರ್ಸಿನ್, ಟ್ರಾಲರ್ ಬೋಟ್ ನಿಲುಗಡೆಯಾಗುವ ಇಲ್ಲಿನ ಬೈತಕೋಲ ಮೀನುಗಾರಿಕೆ ಬಂದರಿನಲ್ಲಿ ‘ದುರಸ್ತಿ ಯಾರ್ಡ್’ ಸೌಲಭ್ಯ ಇಲ್ಲ. ಹೀಗಾಗಿ, ಮಳೆಯಿಂದ ಪಾರಾಗಲು ದೋಣಿಯ ಮೇಲೆ ತಾಡಪತ್ರಿ ಹೊದಿಸಿ, ಕಾರ್ಮಿಕರು ದುರಸ್ತಿ ಕೈಗೊಳ್ಳುವ ಅನಿವಾರ್ಯತೆ ಉಂಟಾಗಿದೆ.
ಪ್ರತಿ ವರ್ಷ ಜೂನ್ ಮತ್ತು ಜುಲೈ ತಿಂಗಳು ಯಾಂತ್ರೀಕೃತಕ ಮೀನುಗಾರಿಕೆ ನಿಷೇಧದ ಅವಧಿ. ಈ 61 ದಿನಗಳಲ್ಲೇ ಟ್ರಾಲರ್, ಪರ್ಸಿನ್ ಬೋಟ್‌ಗಳನ್ನು ದುರಸ್ತಿ ಮಾಡಿಕೊಟ್ಟುಕೊಳ್ಳಲು ಮಾಲೀಕರು ಮುಂದಾಗುತ್ತಾರೆ. ಪ್ರತಿ ಬೋಟ್ 4ರಿಂದ 5 ವರ್ಷಕ್ಕೊಮ್ಮೆ ದುರಸ್ತಿಗೆ ಒಳಪಡುತ್ತದೆ.
ಮೀನುಗಾರಿಕೆ ನಿಷೇಧ ಅವಧಿ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಬೈತಕೋಲ ಬಂದರಿನಲ್ಲಿ ಬೋಟ್‌ಗಳ ತಳಪಾಯದಲ್ಲಿನ ಮರದ ಹಲಗೆಗಳನ್ನು ಮರುಜೋಡಿಸುವುದು, ಎಂಜಿನ್‌ಗಳ ನಿರ್ವಹಣೆ, ಬೋಟ್‌ಗಳ ಎಂಜಿನ್ ಕೊಠಡಿಗಳ ದುರಸ್ತಿ ಕೆಲಸಗಳು ಚುರುಕು ಪಡೆದಿವೆ. ಕುಂದಾಪುರ, ಮಲ್ಪೆ, ಸಾಗರ ಭಾಗದ ಕಾರ್ಮಿಕರು ದುರಸ್ತಿ ಕೆಲಸಗಳಲ್ಲಿ ತೊಡಗಿದ್ದಾರೆ.
‘ಮಳೆಯಲ್ಲೇ ನೆನೆಯುತ್ತ ದೋಣಿಗಳ ತಳಪಾಯಕ್ಕೆ ಹಲಗೆ ಜೋಡಿಸುವ ಕೆಲಸ ನಡೆದಿದೆ. ಇಡೀ ದೋಣಿ ಮಳೆಯಲ್ಲಿ ನೆನೆಯದಂತೆ ತಾಡಪತ್ರಿ ಅಳವಡಿಸುವುದು ಕಷ್ಟ. ದುರಸ್ತಿ ನಡೆಯುವ ಭಾಗದಲ್ಲಿ ಮಾತ್ರ ಮಳೆ ನೀರು ಬೀಳದಂತೆ ತಾಡಪತ್ರಿ ಅಥವಾ ಪ್ಲಾಸ್ಟಿಕ್ ಹೊದಿಕೆ ಮುಚ್ಚಿಕೊಂಡು ಕೆಲಸ ಮಾಡುತ್ತಿದ್ದೇವೆ’ ಎಂದು ಕಾರ್ಮಿಕ ಉಮೇಶ್ ಹೇಳಿದರು.
‘ಮಳೆಗಾಲ ಆರಂಭವಾಗುತ್ತಿದ್ದಂತೆ ಬೋಟ್‌ಗಳ ದುರಸ್ತಿ ಆರಂಭಿಸಬೇಕಾಗುತ್ತದೆ. ಆಗ ಬೋಟ್‌ಗಳನ್ನು ದಡಕ್ಕೆ ಎಳೆಯಲು ಇಲ್ಲಿನ ಬಂದರಿನಲ್ಲಿ ಟ್ರಾಲಿ ವ್ಯವಸ್ಥೆ ಇಲ್ಲ. ಮರದ ದಿಮ್ಮಿಗಳನ್ನು ನೆಲಕ್ಕೆ ಹಾಸಿಕೊಂಡು, ಕಬ್ಬಿಣದ ಹಗ್ಗವನ್ನು ಕಟ್ಟಿಕೊಂಡು ಹತ್ತಾರು ಕಾರ್ಮಿಕರ ನೆರವಿನಿಂದ ಎಳೆದು ತರಬೇಕಾಗುತ್ತದೆ. ಇದಕ್ಕಾಗಿ ₹35 ರಿಂದ ₹40 ಸಾವಿರ ವೆಚ್ಚವಾಗುತ್ತಿದೆ. ಇದು ಮಾಲೀಕರಿಗೆ ಆರ್ಥಿಕ ಹೊರೆಯಾಗುತ್ತಿದೆ’ ಎಂದ ಟ್ರಾಲರ್ ಬೋಟ್ ಮಾಲೀಕ ಸುಭಾಷ ದುರ್ಗೇಕರ್ ಹೇಳಿದರು.
‘ಬೋಟ್‌ಗಳು ದುರಸ್ತಿಗೊಂಡ ಬಳಿಕ ನೀರಿಗಿಳಿಸುವುದೂ ಕಷ್ಟ. ಸಮುದ್ರದಲ್ಲಿ ದೊಡ್ಡ ಕಲ್ಲೊಂದು ಇರುವುದರಿಂದ ಬೋಟ್‌ಗೆ ಹಾನಿಯಾಗುವ ಸಾಧ್ಯತೆ ಹೆಚ್ಚು. ಕಲ್ಲು ತೆರವುಗೊಳಿಸುವ ಜೊತೆಗೆ ಬೋಟ್ ಎಳೆದು ತರಲು ಟ್ರಾಲಿ ವ್ಯವಸ್ಥೆ ಕಲ್ಪಿಸುವಂತೆ ಹಲವು ವರ್ಷದಿಂದ ಒತ್ತಾಯಿಸುತ್ತಿದ್ದರೂ ಸ್ಪಂದನೆ ಸಿಕ್ಕಿಲ್ಲ’ ಎನ್ನುತ್ತಾರೆ ಮೀನುಗಾರರ ಯುವ ಸಂಘರ್ಷ ಸಮಿತಿ ಅಧ್ಯಕ್ಷ ವಿನಾಯಕ ಹರಿಕಂತ್ರ.
ಮೀನುಗಾರಿಕೆ ಬಂದರಿನಲ್ಲಿ ಟ್ರಾಲಿ ಸೇರಿದಂತೆ ಅಗತ್ಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಮೀನುಗಾರರೊಂದಿಗೆ ಚರ್ಚಿಸಿ ಪ್ರಸ್ತಾವ ಸಲ್ಲಿಸಲಾಗುತ್ತದೆರವೀಂದ್ರ ತಳೇಕರ್ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ
ಹೊನ್ನಾವರದಲ್ಲಿ ಮಾತ್ರ ಸೌಲಭ್ಯ
‘ಹೊನ್ನಾವರದಲ್ಲಿ ಮಾತ್ರ ಖಾಸಗಿಯವರಿಗೆ ಸೇರಿದ ಬೋಟ್ ದುರಸ್ತಿ ಯಾರ್ಡ್ ಸೌಲಭ್ಯವಿದೆ. ಮುದಗಾ ಬಂದರಿನಲ್ಲಿ ಟ್ರಾಲಿ ವ್ಯವಸ್ಥೆ ಇದೆ. ಬೋಟ್‌ಗಳು ಹೆಚ್ಚಿರುವ ಬೈತಕೋಲದಲ್ಲಿ ಯಾವ ವ್ಯವಸ್ಥೆಯೂ ಇಲ್ಲ. ಇಲ್ಲಿ ಏಕಕಾಲಕ್ಕೆ ಐದಕ್ಕಿಂತ ಹೆಚ್ಚು ಬೋಟ್‌ಗಳ ದುರಸ್ತಿಯೂ ಕಷ್ಟ. ಜಾಗದ ಕೊರತೆ ಇದೆ. ದೊಡ್ಡ ಬೋಟ್‌ಗಳನ್ನು ದೂರದ ಹೊನ್ನಾವರಕ್ಕೆ ಸಾಗಿಸಬೇಕಾಗುತ್ತದೆ’ ಎಂದು ಸ್ಥಳೀಯ ಮೀನುಗಾರರು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.