ADVERTISEMENT

ಮಳೆ ಕೊರತೆ: ನಾಟಿ ಕಾರ್ಯಕ್ಕೆ ಹಿನ್ನೆಡೆ

ಮನೆ ಅಂಗಳದಲ್ಲೇ ಬೆಳೆದು ನಿಂತಿರುವ ಭತ್ತದ ಸಸಿಗಳ ಆರೈಕೆ

ಗಣಪತಿ ಹೆಗಡೆ
Published 1 ಆಗಸ್ಟ್ 2022, 14:32 IST
Last Updated 1 ಆಗಸ್ಟ್ 2022, 14:32 IST
ಶಿರಸಿ ತಾಲ್ಲೂಕಿನ ಬನವಾಸಿ ಹೋಬಳಿಯ ಗದ್ದೆಯೊಂದರಲ್ಲಿ ಭತ್ತದ ನಾಟಿ ಮಾಡಲು ಪಂಪ್‍ಸೆಟ್ ಮೂಲಕ ಗದ್ದೆಗೆ ನೀರು ಹಾಯಿಸಲಾಯಿತು
ಶಿರಸಿ ತಾಲ್ಲೂಕಿನ ಬನವಾಸಿ ಹೋಬಳಿಯ ಗದ್ದೆಯೊಂದರಲ್ಲಿ ಭತ್ತದ ನಾಟಿ ಮಾಡಲು ಪಂಪ್‍ಸೆಟ್ ಮೂಲಕ ಗದ್ದೆಗೆ ನೀರು ಹಾಯಿಸಲಾಯಿತು   

ಶಿರಸಿ: ಜುಲೈ ಅರ್ಧ ತಿಂಗಳ ಕಾಲ ಜಿಲ್ಲೆಯಲ್ಲಿ ಅಬ್ಬರದೊಂದಿಗೆ ಸುರಿದಿದ್ದ ಮಳೆ ತದನಂತರ ಸಂಪೂರ್ಣ ಇಳಿಮುಖಗೊಂಡಿರುವುದು ಭತ್ತದ ಕೃಷಿಗೆ ಹಿನ್ನೆಡೆ ಉಂಟಾಗಲು ಕಾರಣವಾಗಿದೆ.

ನಾಟಿ ಪದ್ಧತಿ ಮೂಲಕ ಜಿಲ್ಲೆಯಲ್ಲಿ ಒಟ್ಟು 28,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದ್ದು ಆಗಸ್ಟ್ ಆರಂಭದವರೆಗೆ ಕೇವಲ 11,700 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ನಾಟಿ ಕಾರ್ಯ ಪೂರ್ಣಗೊಂಡಿದೆ. ನೇರ ಬಿತ್ತನೆ ಪದ್ಧತಿ ಮೂಲಕ 16,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ.

ಜೂನ್ ಆರಂಭದಲ್ಲಿ ಮುಂಗಾಐರಿನ ನಿರೀಕ್ಷೆ ಇತ್ತಾದರೂ ತಿಂಗಳಿನ ಅಂತ್ಯದ ವೇಳೆ ಮಳೆ ಆರಂಭಗೊಂಡಿತ್ತು. ಇದರಿಂದ ಉಳುಮೆ ಚಟುವಟಿಕೆಗೂ ವಿಳಂಬವಾಗಿತ್ತು. ಜುಲೈನಲ್ಲಿ ಏಕಾಏಕಿ ಮಳೆ ಹೆಚ್ಚಳವಾಗಿದ್ದರಿಂದ ಕೃಷಿ ಚಟುವಟಿಕೆಗೆ ಅಡ್ಡಿ ಉಂಟಾಗಿತ್ತು. ಇದೇ ವೇಳೆ ಮನೆ ಅಂಗಳದಲ್ಲೇ ಬಹುತೇಕ ರೈತರು ಭತ್ತದ ಬೀಜಗಳನ್ನು ಸಸಿ ಮಾಡಿ ಬೆಳೆಸುವ ಕೆಲಸ ಕೈಗೆತ್ತಿಕೊಂಡಿದ್ದರು. ಕೆಲವರು ಮಾತ್ರ ಗದ್ದೆಗಳಲ್ಲಿ ಸಸಿ ಮಾಡಿದ್ದಾರೆ.

ADVERTISEMENT

ಮಳೆ ಕಡಿಮೆಯಾದ ಬಳಿಕ ನಾಟಿಗೆ ಸಿದ್ಧತೆ ನಡೆಸಿಕೊಳ್ಳುತ್ತಿರುವಾಗಲೇ ಬಿಸಿಲಿನ ವಾತಾವರಣ ಎದುರಾಗಿದ್ದರಿಂದ ಸಸಿಗಳ ನಾಟಿಗೆ ಸಮಸ್ಯೆಯಾಗಿದೆ. ಗದ್ದೆಯಲ್ಲಿ ನೀರು ಲಭ್ಯವಿಲ್ಲದೆ ಹಲವು ರೈತರು ಪಂಪಪ್‍ಸೆಟ್‍ಗಳ ಮೂಲಕ ಗದ್ದೆಗೆ ನೀರು ಹಾಯಿಸಿ ನಾಟಿಗೆ ತೊಡಗಿರುವುದು ಶಿರಸಿ, ಸಿದ್ದಾಪುರ ಭಾಗದ ಹಲವು ಕಡೆ ಕಾಣಸಿಗುತ್ತಿದೆ.

‘ಜೋಯಿಡಾ ಮತ್ತು ಸಿದ್ದಾಪುರ ತಾಲ್ಲೂಕುಗಳಲ್ಲಿ ಜುಲೈ ಬಳಿಕ ನಾಟಿ ಕಾರ್ಯ ನಡೆಯುವುದು ಸಾಮಾನ್ಯ. ಆದರೆ ಕರಾವಳಿ ಸೇರಿದಂತೆ ಘಟ್ಟದ ಮೇಲಿನ ಕೆಲವು ತಾಲ್ಲೂಕುಗಳಲ್ಲಿ ಇಷ್ಟರವರೆಗೆ ಶೇ 90 ರಷ್ಟು ನಾಟಿ ಕಾರ್ಯ ನಡೆಯಬೇಕಿತ್ತು. ಮಳೆಯ ಕೊರತೆಯಿಂದ ಕೇವಲ ಶೇ 40ರಷ್ಟು ಪ್ರದೇಶಕ್ಕೆ ಮಾತ್ರ ನಾಟಿ ಕಾರ್ಯ ನಡೆದಿದೆ’ ಎನ್ನುತ್ತಾರೆ ಕೃಷಿ ಇಲಾಖೆ ಉಪನಿರ್ದೇಶಕ ಟಿ.ನಟರಾಜ್.

‘ಅತಿವೃಷ್ಟಿಯಿಂದ ಆರಂಭದಲ್ಲಿ ಕೃಷಿ ಚಟುವಟಿಕೆಗೆ ತೊಡಕು ಎದುರಾಯಿತು. ಈಗ ಮಳೆ ಕೊರತೆಯಿಂದ ಗದ್ದೆಗೆ ನೀರು ಲಭಿಸದೆ ಸಮಸ್ಯೆ ಉಂಟಾಗಿದೆ. ಹಳ್ಳ, ಕೆರೆ ಪಕ್ಕದ ಕೃಷಿ ಜಮೀನುಗಳಿಗೆ ರೈತರು ಪಂಪ್‍ಸೆಟ್ ಮೂಲಕ ನೀರು ಹಾಯಿಸಿಕೊಳ್ಳುತ್ತಿದ್ದಾರೆ. ಈ ಸೌಲಭ್ಯವಿಲ್ಲದ ರೈತರ ಪರಿಸ್ಥಿತಿ ಕಷ್ಟವಾಗಿದೆ’ ಎನ್ನುತ್ತಾರೆ ರೈತ ಬನವಾಸಿಯ ಸುದರ್ಶನ ನಾಯ್ಕ.

---------------

ಅಂಕಿಅಂಶ

28,000 ಹೆಕ್ಟೇರ್

ನಾಟಿ ಮೂಲಕ ಭತ್ತ ಬೆಳೆಯುವ ಪ್ರದೇಶ

11,700 ಹೆ.

ನಾಟಿ ಕಾರ್ಯ ಪೂರ್ಣಗೊಂಡಿರುವ ಪ್ರದೇಶ

16,000 ಹೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.