ADVERTISEMENT

ಆಸ್ಪತ್ರೆಗೆ ಭೂಮಿಪೂಜೆ ಮತ್ತೆ ನನೆಗುದಿಗೆ

ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ವೈ ರಾಜೀನಾಮೆ: ಹುಸಿಯಾದ ಜಿಲ್ಲೆಯ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 14:23 IST
Last Updated 26 ಜುಲೈ 2021, 14:23 IST
ಬಿ.ಎಸ್.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ   

ಕಾರವಾರ: ಮುಖ್ಯಮಂತ್ರಿ ಯಡಿಯೂರಪ್ಪ ನಗರಕ್ಕೆ ಆಗಮಿಸುವ ಜನರ ನಿರೀಕ್ಷೆ ಹುಸಿಯಾಗಿದೆ. ತಮ್ಮ ಹುದ್ದೆಗೆ ಅವರು ರಾಜೀನಾಮೆ ನೀಡಿದ್ದರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಸಿಗಲು ಮತ್ತಷ್ಟು ದಿನ ಕಾಯಬೇಕಾಗಿದೆ.

ಬಹುದಿನಗಳಿಂದ ಚರ್ಚೆಗೆ ಗ್ರಾಸವಾಗಿದ್ದ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ 400 ಹಾಸಿಗೆಗಳ ಆಸ್ಪತ್ರೆಯ ಕಟ್ಟಡದ ಕಾಮಗಾರಿ ಅದರಲ್ಲಿ ಮುಖ್ಯವಾದುದು.

₹ 160 ಕೋಟಿ ವೆಚ್ಚದ ಯೋಜನೆಗೆ ಮುಖ್ಯಮಂತ್ರಿಯೇ ಚಾಲನೆ ನೀಡಬೇಕು ಎಂಬುದು ಶಾಸಕಿ ರೂಪಾಲಿ ನಾಯ್ಕ ಸೇರಿದಂತೆ ಹಲವರ ಅಪೇಕ್ಷೆಯಾಗಿತ್ತು. ಈ ಸಂಬಂಧ ಮನವಿಗೆ ಸಹಮತ ವ್ಯಕ್ತಪಡಿಸಿದ್ದ ಯಡಿಯೂರಪ್ಪ, ಜುಲೈ 16ರಂದು ನಗರಕ್ಕೆ ಬರುವುದಾಗಿ ತಿಳಿಸಿದ್ದರು. ಆದರೆ, ಅಂದು ಕೋವಿಡ್ ನಿರ್ವಹಣೆ ಸಂಬಂಧ ಪ್ರಧಾನಿ ಜೊತೆ ವಿಡಿಯೊ ಸಂವಾದ ಏರ್ಪಾಟಾಗಿತ್ತು. ಹಾಗಾಗಿ ಅಂದಿನ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು.

ADVERTISEMENT

ಈ ನಡುವೆ, ಜಿಲ್ಲೆಯಲ್ಲಿ ಜುಲೈ 23ರಂದು ಶುರುವಾದ ಭಾರಿ ಮಳೆಯಿಂದ ಮೂರು ದಿನ ಪ್ರವಾಹ ಉಂಟಾಯಿತು. ಜುಲೈ 24ರಂದು ಬೆಳಗಾವಿಯಲ್ಲಿ ನೆರೆ ಪೀಡಿದ ಪ್ರದೇಶಗಳನ್ನು ವೀಕ್ಷಿಸಿದ್ದರು. ಅಲ್ಲಿಂದ ಉತ್ತರ ಕನ್ನಡಕ್ಕೂ ಭೇಟಿ ನೀಡುವ ನಿರೀಕ್ಷೆ ಮೂಡಿತ್ತು. ಆದರೆ, ಅವರು ಬೆಂಗಳೂರಿಗೆ ಮರಳಿ, ಜಿಲ್ಲೆಗೆ ಭೇಟಿ ನೀಡುವ ಬಗ್ಗೆ ಜುಲೈ 26ರಂದು ಅಂತಿಮ ನಿರ್ಣಯ ಕೈಗೊಳ್ಳುವುದಾಗಿ ಹೇಳಿದ್ದರು. ಸೋಮವಾರ ನಡೆದ ಬೆಳವಣಿಗೆಯಲ್ಲಿ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು.

2019ರ ಆಗಸ್ಟ್‌ 30ರಂದು ಜಿಲ್ಲೆಯ ನೆರೆ ಪರಿಸ್ಥಿತಿ ವೀಕ್ಷಿಸಲು ಕಾರವಾರಕ್ಕೆ ಬರುವುದಾಗಿ ನಿಗದಿಯಾಗಿತ್ತು. ಆದರೆ, ಆಗ ಹವಾಮಾನ ವೈಪರೀತ್ಯದಿಂದಾಗಿ ಅವರ ಹೆಲಿಕಾಪ್ಟರ್ ಶಿವಮೊಗ್ಗದಿಂದ ಈಚೆಗೆ ಪ್ರಯಾಣಿಸಲು ಸಾಧ್ಯವಾಗಲಿಲ್ಲ. ನಗರದ ಸರ್ಕೀಟ್ ಹೌಸ್‌ನಲ್ಲಿ ಅವರನ್ನು ಸ್ವಾಗತಿಸಲು ಕಾದಿದ್ದ ಗಣ್ಯರೆಲ್ಲ ತಾಸುಗಟ್ಟಲೆ ಕಾದು ಮರಳಿದ್ದರು.

2019ರ ಫೆ.8ರಂದು ಬನವಾಸಿ ಕದಂಬೋತ್ಸವದಲ್ಲಿ ಕವಿ ಸಿದ್ದಲಿಂಗಯ್ಯ ಅವರಿಗೆ ‘ಪಂಪ ಪ್ರಶಸ್ತಿ’ ಪ್ರದಾನ ಮಾಡಲು ಆಗಮಿಸಿದ್ದರು. ಅದೇ ವರ್ಷ ನ.24ರಂದು ಬನವಾಸಿಗೆ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದರು.

ಅದೇ ವರ್ಷ ಡಿ.28ರಂದು ಹೊನ್ನಾವರದ ಮಂಕಿಯ ಕೊಕ್ಕೇಶ್ವರ ದೇಗುಲದ ಆವರಣದಲ್ಲಿ ಆಯೋಜಿಸಲಾಗಿದ್ದ ರಾಮಕ್ಷತ್ರಿಯ ಸಮುದಾಯದ ಬೃಹತ್ ಸಮಾವೇಶವನ್ನು ಉದ್ಘಾಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.