ADVERTISEMENT

ಶಿರಸಿ: ನನಸಾದ ಆರ್.ಟಿ.ಓ. ಕಚೇರಿ ಸ್ವಂತ ಕಟ್ಟಡದ ಕನಸು

ಸ್ಥಾಪನೆಗೊಂಡ ನಾಲ್ಕು ದಶಕಗಳ ಬಳಿಕ ಆರ್.ಟಿ.ಓ. ಕಚೇರಿಗೆ ಜಾಗ

ಗಣಪತಿ ಹೆಗಡೆ
Published 23 ಜನವರಿ 2022, 19:31 IST
Last Updated 23 ಜನವರಿ 2022, 19:31 IST
ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಶಿರಸಿ ಆರ್‌ಟಿಓ ಕಚೇರಿ
ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಶಿರಸಿ ಆರ್‌ಟಿಓ ಕಚೇರಿ   

ಶಿರಸಿ: ಇಲ್ಲಿನ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್.ಟಿ.ಓ.) ಕಚೇರಿ ಸ್ಥಾಪನೆಗೊಂಡು ನಲ್ವತ್ತು ವರ್ಷ ಕಳೆದ ಬಳಿಕ ಸ್ವಂತ ಕಟ್ಟಡ ಪಡೆದುಕೊಳ್ಳುವ ಹಂತಕ್ಕೆ ತಲುಪಿದೆ.

ಬಸವೇಶ್ವರ ನಗರದಲ್ಲಿ 20 ಗುಂಟೆ ಜಾಗವನ್ನು ಕಂದಾಯ ಇಲಾಖೆ ಆರ್‌ಟಿಓ ಕಚೇರಿ ಸ್ಥಾಪನೆಗಾಗಿ ಮಂಜೂರು ನೀಡಿದೆ. ಸಾರಿಗೆ ಇಲಾಖೆಯಿಂದ ಕಟ್ಟಡ ನಿರ್ಮಾಣಕ್ಕೆ ₹5 ಕೋಟಿ ಬಿಡುಗಡೆ ಆಗಿದ್ದು, ಟೆಂಡರ್ ಪ್ರಕ್ರಿಯೆಗೆ ಅನುಮೋದನೆ ದೊರೆತಿದೆ.

1980ರ ದಶಕದಲ್ಲಿ ಆರಂಭಗೊಂಡಿರುವ ಆರ್‌ಟಿಓ ಕಚೇರಿ ಈವರೆಗೂ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಪ್ರತಿ ವರ್ಷ ಲಕ್ಷಾಂತರ ಮೊತ್ತವನ್ನು ಬಾಡಿಗೆಗೆ ಪಾವತಿಸಲಾಗುತ್ತಿದೆ. ಬಶೆಟ್ಟಿ ಕೆರೆ ಪಕ್ಕದಲ್ಲಿರುವ ಸಭಾಭವನದಲ್ಲಿ ಕಚೇರಿ ನಡೆಯುತ್ತಿದೆ.

ADVERTISEMENT

‘ಆರ್.ಟಿ.ಓ. ಕಚೇರಿಗೆ ವಿಶಾಲವಾದ ಸ್ಥಳಾವಕಾಶ ಇರಬೇಕಿತ್ತು. ಚಾಲನಾಪಥ, ವಾಹನ ನಿಲುಗಡೆಗೆ ಇಲ್ಲಿ ಸ್ಥಳಾವಕಾಶದ ಸಮಸ್ಯೆ ಉಂಟಾಗುತ್ತಿದೆ’ ಎಂಬುದು ಸಾರ್ವಜನಿಕರು ಹಲವು ಬಾರಿ ದೂರಿದ್ದರು.

ಕಟ್ಟಡ ನಿರ್ಮಾಣಕ್ಕೆ ಜಾಗ ಮತ್ತು ಅನುದಾನ ಮಂಜೂರು ಪಡೆಯಲು ಹಲವು ವರ್ಷಗಳಿಂದ ಪ್ರಯತ್ನ ಸಾಗಿತ್ತು. ಅದು ಈ ಬಾರಿ ಕೈಗೂಡಿದೆ.

‘ಕಟ್ಟಡ ನಿರ್ಮಾಣಕ್ಕೆ ಜಾಗ ಅಂತಿಮಗೊಂಡಿದ್ದು, ವಿಭಾಗಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದ ನಂತರ ಕಟ್ಟಡ ಕಾಮಗಾರಿ ಆರಂಭಗೊಳ್ಳಲಿದೆ’ ಎಂದು ಆರ್.ಟಿ.ಓ. ಸಿ.ಡಿ.ನಾಯ್ಕ ತಿಳಿಸಿದರು.

‘ವಾರ್ಷಿಕ ಹತ್ತು ಕೋಟಿಗೂ ಹೆಚ್ಚು ಆದಾಯ ಹೊಂದಿರುವ ಕಚೇರಿಗೆ ಪ್ರತ್ಯೇಕ ಕಟ್ಟಡ ನಿರ್ಮಿಸಿಕೊಡಲು ಪ್ರಸ್ತಾವ ಕಳುಹಿಸಿದ್ದೆವು. ಹಲವು ವರ್ಷಗಳವರೆಗೆ ಜಾಗ ಮಂಜೂರಾತಿಗೆ ತೊಡಕುಗಳು ಎದುರಾಗಿದ್ದವು. ಈಗ ಅವೆಲ್ಲ ಸಮಸ್ಯೆ ನಿವಾರಣೆಯಾಗಿದೆ’ ಎಂದು ಹೇಳಿದರು.

ಚಾಲನಾ ಪಥಕ್ಕೆ 4 ಎಕರೆ:

‘ಚಾಲನಾ ಪರವಾನಗಿ ನೀಡುವ ಮುನ್ನ ಸವಾರರ ಚಾಲನಾ ಸಾಮರ್ಥ್ಯ ಪರೀಕ್ಷಿಸಲು ಸೂಕ್ತವಾದ ಚಾಲನಾಪಥದ ಅಗತ್ಯವಿರುತ್ತದೆ. ಇದಕ್ಕಾಗಿ ದೊಡ್ನಳ್ಳಿಯಲ್ಲಿ 4 ಎಕರೆ ಜಾಗವನ್ನು ಈಗಾಗಲೆ ಮಂಜೂರು ಮಾಡಲಾಗಿದೆ. ಕಚೇರಿ ಕಟ್ಟಡ ಪೂರ್ಣಗೊಂಡ ಬಳಿಕ ಚಾಲನಾಪಥಕ್ಕೆ ಪ್ರಸ್ತಾವ ಸಲ್ಲಿಸಲಾಗುತ್ತದೆ’ ಎನ್ನುತ್ತಾರೆ ಆರ್.ಟಿ.ಓ. ಸಿ.ಡಿ.ನಾಯ್ಕ.

‘ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಪಥ ನಿರ್ಮಿಸುವ ಗುರಿ ಹೊಂದಲಾಗಿದೆ. ಅದರ ನಿರ್ಮಾಣಕ್ಕೆ ದೊಡ್ಡ ಮೊತ್ತದ ಅನುದಾನವೂ ಬೇಕಾಗುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.