ADVERTISEMENT

ಉತ್ತರ ಕನ್ನಡ | ಕಾಳಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ: ಭೂಕುಸಿತ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 14:00 IST
Last Updated 3 ಜುಲೈ 2025, 14:00 IST
ಕಾರವಾರ ತಾಲ್ಲೂಕಿನ ಬಾಳೆಮನೆ ಸಮೀಪ ಕದ್ರಾ–ಕೊಡಸಳ್ಳಿ ಸಂಪರ್ಕ ರಸ್ತೆಯಲ್ಲಿ ಭೂಕುಸಿತ ಸಂಭವಿಸಿ, ಮಣ್ಣಿನ ರಾಶಿಯೊಂದಿಗೆ ಮರಗಳು ರಸ್ತೆಯ ಮೇಲೆ ಬಿದ್ದಿರುವುದು.
ಕಾರವಾರ ತಾಲ್ಲೂಕಿನ ಬಾಳೆಮನೆ ಸಮೀಪ ಕದ್ರಾ–ಕೊಡಸಳ್ಳಿ ಸಂಪರ್ಕ ರಸ್ತೆಯಲ್ಲಿ ಭೂಕುಸಿತ ಸಂಭವಿಸಿ, ಮಣ್ಣಿನ ರಾಶಿಯೊಂದಿಗೆ ಮರಗಳು ರಸ್ತೆಯ ಮೇಲೆ ಬಿದ್ದಿರುವುದು.   

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಕಾಳಿ ಜಲಾನಯನ ಪ್ರದೇಶದಲ್ಲಿ ಸುರಿದ ವ್ಯಾಪಕ ಮಳೆಯಿಂದ ಭೂಕುಸಿತ ಉಂಟಾಗಿದೆ.

ಕಾರವಾರ ತಾಲ್ಲೂಕಿನ ಬಾಳೆಮನೆ ಸಮೀಪ ಕದ್ರಾ–ಕೊಡಸಳ್ಳಿ ರಸ್ತೆಯ ಪಕ್ಕ ಎತ್ತರದ ಗುಡ್ಡವು 50 ಮೀಟರ್ ಅಗಲ ಕುಸಿದಿದೆ. ಮಣ್ಣಿನ ರಾಶಿಯು ರಸ್ತೆ ಪೂರ್ತಿ ಆವರಿಸಿದ್ಡು, ಪಕ್ಕದ ಕದ್ರಾ ಅಣೆಕಟ್ಟೆಯ ಹಿನ್ನೀರಿಗೂ ಬಿದ್ದಿದೆ. ಕುಸಿತವಾದ ಸ್ಥಳವು ಕದ್ರಾ ಅಣೆಕಟ್ಟೆಯಿಂದ 12 ಕಿ.ಮೀ, ಕೊಡಸಳ್ಳಿ ಅಣೆಕಟ್ಟೆಯಿಂದ 22 ಕಿ.ಮೀ ಅಂತರದಲ್ಲಿದೆ.

‘ಮಣ್ಣಿನ ರಾಶಿ ತೆರವುಗೊಳಿಸಿದರೆ, ಪುನಃ ಕುಸಿತ ಸಂಭವಿಸುವ ಸಾಧ್ಯತೆಯಿರುವ ಕಾರಣ ತೆರವು ಕಾರ್ಯ ನಡೆದಿಲ್ಲ. ಕೊಡಸಳ್ಳಿ ಅಣೆಕಟ್ಟೆ ಮತ್ತು ವಿದ್ಯುದಾಗಾರ ನಿರ್ವಹಣೆಗೆ ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿ) ಸಿಬ್ಬಂದಿ ತೆರಳಲು ಇದ್ದ ಏಕೈಕ ಮಾರ್ಗ ಇದಾಗಿದ್ದು, ಸದ್ಯ ಅವರಿಗೆ ದೋಣಿ ಮೂಲಕ ಹಿನ್ನೀರಿನಲ್ಲಿ ಸಾಗಲು ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಕೆಪಿಸಿ ಮುಖ್ಯ ಎಂಜಿನಿಯರ್ ಶ್ರೀಧರ ಕೋರಿ ತಿಳಿಸಿದ್ದಾರೆ.

ADVERTISEMENT

ಜಿಲ್ಲೆಯ ಕರಾವಳಿ ಭಾಗದ ತಾಲ್ಲೂಕುಗಳಲ್ಲಿ ಮಳೆ ವ್ಯಾಪಕವಾಗಿದ್ದು ಹಳ್ಳಕೊಳ್ಳಗಳು ಭರ್ತಿಯಾಗಿ ಹರಿಯುತ್ತಿವೆ. ಕಾರವಾರದ ಕದ್ರಾ, ಗೋಟೆಗಾಳಿಯಲ್ಲಿ 18 ಸೆಂ.ಮೀ ಮಳೆ ಸುರಿದಿದೆ. ಶಿರಸಿಯ ಗಣೇಶ ನಗರದಲ್ಲಿ ಮಳೆಯಿಂದ ಮೂರು ಮನೆಗಳ ಪಕ್ಕ ಭೂಕುಸಿತವಾಗಿದ್ದು, ಅಪಾಯದ ಸ್ಥಿತಿ ಸೃಷ್ಟಿಯಾಗಿದೆ.

ಕಾರವಾರ ತಾಲ್ಲೂಕಿನ ಕದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಿದ ಹಿನ್ನೆಲೆಯಲ್ಲಿ 4 ಕ್ರಸ್ಟ್ ಗೇಟುಗಳ ಮುಖಾಂತರ 12 ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದೆ.

ಕಾರವಾರ ತಾಲ್ಲೂಕಿನ ಬಾಳೆಮನೆ ಸಮೀಪ ಕದ್ರಾ–ಕೊಡಸಳ್ಳಿ ರಸ್ತೆಯಲ್ಲಿ ಉಂಟಾದ ಭೂಕುಸಿತದಿಂದ ಭಾರಿ ಪ್ರಮಾಣದಲ್ಲಿ ಮಣ್ಣಿನ ರಾಶಿಯೊಂದಿಗೆ ಮರಗಳು ಬಿದ್ದಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.