ಹೊನ್ನಾವರ: ತಾಲ್ಲೂಕಿನಲ್ಲಿ ಮಳೆ ಅಬ್ಬರಿಸುತ್ತಿರುವಂತೆಯೇ ಗುಡ್ಡ ಕುಸಿತದ ಅವಾಂತರ ಮುಂದುವರಿದಿದ್ದು, ಗುಡ್ಡದ ಸಮೀಪ ಮನೆ ಕಟ್ಟಿಕೊಂಡಿರುವವರು ಆತಂಕದಲ್ಲಿ ದಿನ ಕಳೆಯುವಂತಾಗಿದೆ. ಇದು ಸಾಲದೆಂಬಂತೆ ಸ್ಥಳಕ್ಕೆ ಭೇಟಿ ನೀಡುವ ಅಧಿಕಾರಿಗಳು ಇಂಥ ನಿವಾಸಿಗಳಿಗೆ ನೀಡುತ್ತಿರುವ ನೋಟಿಸ್ ಅವರ ಆತಂಕ ಕಡಿಮೆ ಮಾಡುವ ಬದಲು ಇನ್ನಷ್ಟು ಹೆಚ್ಚಿಸುತ್ತಿದೆ.
12ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳ ಸುಮಾರು 300 ಮನೆಗಳು ಭೂಕುಸಿತದ ಅಪಾಯ ಎದುರಿಸುತ್ತಿವೆ ಎಂಬುದಾಗಿ ಪ್ರಾಥಮಿಕ ಹಂತದ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಅಂತಹ ಮನೆಗಳಲ್ಲಿನ ಜನರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಮನವರಿಕೆ ಮಾಡುತ್ತಿದ್ದೇವೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.
‘ಸಾಲ್ಕೋಡ, ಕುದ್ರಿಗಿ, ಕಡ್ಲೆ, ಮಾಗೋಡ, ಉಪ್ಪೋಣಿ, ಚಿಕ್ಕನಕೋಡ, ಕೊಡಾಣಿ, ಮಾವಿನಕುರ್ವ, ನಗರಬಸ್ತಿಕೇರಿ, ಹೆರಂಗಡಿ, ನವಿಲಗೋಣ, ಕೆಳಗಿನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳಲ್ಲಿ ಗುಡ್ಡ ಕುಸಿತದ ಪ್ರಕರಣಗಳು ಹೆಚ್ಚಾಗಿವೆ. ನಿಖರ ಅಂಕಿ-ಸಂಖ್ಯೆ ಪಡೆಯಲು ಮಾಹಿತಿ ಕ್ರೋಢಿಕರಿಸಲಾಗುತ್ತಿದೆ. ಹೊನ್ನಾವರ ಹಾಗೂ ಮಂಕಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲೂ ಕೆಲ ಮನೆಗಳಿಗೆ ಧರೆ ಕುಸಿತದಿಂದ ಅಪಾಯ ಇದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಎರಡು ವರ್ಷಗಳ ಹಿಂದೆ ಮಳೆಗಾಲದಲ್ಲಿ ಧರೆ ಕುಸಿತದ ಜಾಗವನ್ನು ಅಧಿಕಾರಿಗಳು ಪರಿಶೀಲಿಸಿ ತೆರಳಿದ್ದರು. ನಂತರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಮಳೆಗಾಲದಲ್ಲಿ ಮತ್ತೆ ಬಂದು ಸುರಕ್ಷಿತ ಜಾಗಕ್ಕೆ ತೆರಳುವಂತೆ ನೋಟಿಸ್ ನೀಡಿದ್ದಾರೆ. ಆತಂಕ ಹೆಚ್ಚಿದೆ’ ಎಂದು ಗುಂಡಿಬೈಲ್ ನಿವಾಸಿ ನಾಗರಾಜ ಶೇಟ್ ಅಳಲು ತೋಡಿಕೊಂಡರು.
‘ಮಳೆಗಾಲವಿಡಿ ಸಂತ್ರಸ್ತರು ಯಾವ ಸುರಕ್ಷಿತ ಜಾಗ ನೋಡಿಕೊಳ್ಳಬೇಕು ಅಥವಾ ಸಂತ್ರಸ್ತರು ಉಳಿಯಲು ಸರ್ಕಾರದ ವತಿಯಿಂದ ಕಾಳಜಿ ಕೇಂದ್ರ ತೆರೆಯಲಾಗಿದೆಯೇ ಎನ್ನುವುದಕ್ಕೆ ಅಧಿಕಾರಿಗಳ ಬಳಿ ಉತ್ತರವಿಲ್ಲ. ಸಂತ್ರಸ್ತ ಕುಟುಂಬಗಳಿಗೆ ಧೈರ್ಯ ತುಂಬುವ ಬದಲು ಅವರಿಗೆ ನೋಟಿಸ್ ಜಾರಿ ಮಾಡುವ ಮೂಲಕ ಜಿಲ್ಲಾಡಳಿತ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಧರೆ ಕುಸಿತ ತಡೆಗಟ್ಟಲು ಅಥವಾ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸಚಿವರು, ಜನಪ್ರತಿನಿಧಿಗಳೆಲ್ಲ ಮೌನ ವಹಿಸಿದ್ದಾರೆ’ ಎಂಬ ಟೀಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಜನರ ಜೀವ ಹಾಗೂ ಆಸ್ತಿ-ಪಾಸ್ತಿ ರಕ್ಷಣೆಗೆ ಆಡಳಿತ ವ್ಯವಸ್ಥೆ ಮುಂಜಾಗ್ರತಾ ಕ್ರಮವಾಗಿ ನಿಯಮಾನುಸಾರ ಧರೆ ಪಕ್ಕದ ನಿವಾಸಿಗಳಿಗೆ ನೋಟಿಸ್ ಜಾರಿಗೊಳಿಸುತ್ತಿದೆ. ಜನರಿಗೆ ಆತಂಕ ಬೇಡಪ್ರವೀಣ ಕರಾಂಡೆ ತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.