ADVERTISEMENT

20 ವರ್ಷದ ಕೃಷಿ ಕ್ಷಣದಲ್ಲಿ ಮಣ್ಣುಪಾಲು

ಜೊಯಿಡಾ ತಾಲ್ಲೂಕಿನ ನಂದಿಗದ್ದೆ ಗ್ರಾಮದಲ್ಲಿ ತೋಟದ ಮೇಲೆ ಎರಗಿದ ಗುಡ್ಡದ ಮಣ್ಣು

ಸದಾಶಿವ ಎಂ.ಎಸ್‌.
Published 12 ಆಗಸ್ಟ್ 2019, 11:24 IST
Last Updated 12 ಆಗಸ್ಟ್ 2019, 11:24 IST
ಜೊಯಿಡಾ ತಾಲ್ಲೂಕಿನ ನಂದಿಗದ್ದೆ ಗ್ರಾಮ ಪಂಚಾಯ್ತಿಯ ಬಟ್ನಪಾಲು ಎಂಬಲ್ಲಿ ಅಡಿಕೆ ತೋಟದಲ್ಲಿ ಹೊಳೆಯಂತೆ ಹರಿಯುತ್ತಿರುವ ಹಳ್ಳದ ನೀರು.
ಜೊಯಿಡಾ ತಾಲ್ಲೂಕಿನ ನಂದಿಗದ್ದೆ ಗ್ರಾಮ ಪಂಚಾಯ್ತಿಯ ಬಟ್ನಪಾಲು ಎಂಬಲ್ಲಿ ಅಡಿಕೆ ತೋಟದಲ್ಲಿ ಹೊಳೆಯಂತೆ ಹರಿಯುತ್ತಿರುವ ಹಳ್ಳದ ನೀರು.   

ಕಾರವಾರ: ಒಂದೆಡೆ ಭಾರಿ ಮಳೆಯಿಂದ ಉಕ್ಕಿ ಹರಿದ ಹಳ್ಳ, ಮತ್ತೊಂದೆಡೆ ಗುಡ್ಡ ಕುಸಿದು ನೂರಾರು ಅಡಿಕೆ ಮರಗಳು ಮಣ್ಣುಪಾಲು. ಪರಿಚಯದವರನ್ನು ಸಂಪರ್ಕಿಸಲು ಮೊಬೈಲ್ ನೆಟ್‌ವರ್ಕ್ ಕೂಡ ಇರಲಿಲ್ಲ.

ನಾಲ್ಕೈದು ದಿನಗಳಿಂದ ಇಂತಹ ಸಂಕಟದ ಸ್ಥಿತಿಯನ್ನುಜೊಯಿಡಾ ತಾಲ್ಲೂಕಿನ ನಂದಿಗದ್ದೆ ಗ್ರಾಮ ಪಂಚಾಯ್ತಿಯ ಬಟ್ನಪಾಲು ನಿವಾಸಿಗಳುಅನುಭವಿಸಿದ್ದಾರೆ. ತಮ್ಮ ಮನೆಯ ಸುತ್ತಮುತ್ತ ಆಗಿರುವ ಅನಾಹುತವನ್ನು ಅಲ್ಲಿನ ನಿವಾಸಿ ಶ್ರೀಪಾದ ಅನಂತ ಹೆಗಡೆ‘ಪ್ರಜಾವಾಣಿ’ಗೆ ವಿವರಿಸಿದರು.

ಸೋಮವಾರ ಮೊಬೈಲ್ ನೆಟ್‌ವರ್ಕ್ ಸಿಕ್ಕಿದ ಕೂಡಲೇ ಕರೆ ಮಾಡಿದ ಅವರು, ‘ಮನೆಯ ಹತ್ತಿರದ ಹಳ್ಳವು ಜೋರಾಗಿ ಸುರಿದ ಮಳೆಯಿಂದ ಉಕ್ಕಿ ಹರಿದು ತೋಟವಿಡೀ ಜಲಾವೃತವಾಯಿತು.ಅಷ್ಟರಲ್ಲಿತೋಟದ ಮೇಲ್ಭಾಗದಲ್ಲಿದ್ದ ಗುಡ್ಡದ ಮಣ್ಣು, ಅದರಲ್ಲಿದ್ದ ಕಾಡು ಜಾತಿಯಬೃಹತ್ ಮರಗಳು ತೋಟದ ಮೇಲೆ ಎರಗಿದವು. ಅವುಗಳ ಹೊಡೆತಕ್ಕೆಸುಮಾರು ಒಂದು ಎಕರೆಯಷ್ಟು ತೋಟಕ್ಕೆ ಹಾನಿಯಾಗಿದೆ’ ಎಂದು ಅಳಲು ತೋಡಿಕೊಂಡರು.

ADVERTISEMENT

‘ಅವೆಲ್ಲವೂ ಚೆನ್ನಾಗಿ ಫಸಲು ಕೊಡುತ್ತಿದ್ದ ಅಡಿಕೆ ಗಿಡಗಳಾಗಿದ್ದವು.15– 20 ವರ್ಷ ಅಕ್ಕರೆಯಿಂದ ಸಲಹಿ ಒಂದೇ ಹೊಡೆತಕ್ಕೆ ನಾಶವಾದರೆ ಕೃಷಿಕರ ಪರಿಸ್ಥಿತಿ ಏನಾಗಬೇಡ? ಅಡಿಕೆಧಾರಣೆಯೂ ಸಾಕಷ್ಟು ಏರಿಳಿತ ಆಗುತ್ತಿರುವಾಗಈ ನಷ್ಟವನ್ನು ಹೇಗೆ ಭರ್ತಿ ಮಾಡಿಕೊಳ್ಳಬೇಕು ಎಂದು ತೋಚುತ್ತಿಲ್ಲ’ ಎಂದುಆತಂಕವನ್ನು ಬಿಡಿಸಿಟ್ಟರು.

‘ಸುಮಾರು ಅರ್ಧ ಕಿಲೋಮೀಟರ್ ದೂರದಿಂದಲೇ ಗುಡ್ಡ ಜಾರಿ ತೋಟದ ಮೇಲೆ ಮಣ್ಣು ಆವರಿಸಿದೆ. ಅರಣ್ಯ ರಕ್ಷಕರು ಹಾಗೂ ಶಾನುಭೋಗರು ಬಂದು ಈ ಪ್ರದೇಶವನ್ನು ನೋಡಿದ್ದಾರೆ. ತೋಟಕ್ಕೆ ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ನಿಖರವಾಗಿ ಗೊತ್ತಾಗುತ್ತಿಲ್ಲ’ ಎಂದು ಹೇಳಿದರು.

ರಸ್ತೆಯಿಲ್ಲದೇ ಪರದಾಟ: ‘ಮಳೆಗಾಲದಲ್ಲಿ ಇಲ್ಲಿ ಜೀವನ ಭಾರಿ ಕಷ್ಟವಾಗುತ್ತದೆ. ಅನಾರೋಗ್ಯವಾದರೂಎರಡು ಕಿಲೋಮೀಟರ್ ದೂರದಲ್ಲಿರುವ ತಮ್ಮಣಿಗೆ ಎಂಬಲ್ಲಿಗೆ ನಡೆದುಕೊಂಡು ಹೋಗಬೇಕು. ನಂತರವೇ ಡಾಂಬರು ರಸ್ತೆ ಸಿಗುತ್ತದೆ. ಅಲ್ಲಿಂದ ಅಣಶಿ ಅಥವಾ ಉಳವಿಗೆ ವಾಹನದಲ್ಲಿ ಹೋಗಬೇಕು’ಗೃಹಿಣಿ ಅರ್ಚನಾ ಶ್ರೀಪಾದ ಹೆಗಡೆಬೇಸರಿಸಿದರು.

‘ಈ ಪ್ರದೇಶದಲ್ಲಿರುವ ಐದಾರು ಮನೆಗಳಿಗೆ ಇಂದಿಗೂ ವಾಹನಗಳನ್ನು ತೆಗೆದುಕೊಂಡು ಹೋಗಲು ಆಗುತ್ತಿಲ್ಲ. ಜನಪ್ರತಿನಿಧಿಗಳು ಚುನಾವಣೆ ಸಂದರ್ಭದಲ್ಲಿ ರಸ್ತೆ, ಮೂಲಸೌಕರ್ಯದ ಭರವಸೆ ನೀಡುತ್ತಾರೆ. ಆದರೆ, ಈವರೆಗೂ ಈಡೇರಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.