ADVERTISEMENT

ಬಡತನ ನಿರ್ಮೂಲನೆ ಯೋಜನೆ: ಸೂಕ್ತ ಅನುಷ್ಠಾನಕ್ಕೆ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2021, 15:47 IST
Last Updated 16 ಏಪ್ರಿಲ್ 2021, 15:47 IST
ಟಿ.ಗೋವಿಂದಯ್ಯ
ಟಿ.ಗೋವಿಂದಯ್ಯ   

ಕಾರವಾರ: ‘ಬಡತನ ನಿರ್ಮೂಲನೆ ಯೋಜನೆಯ ಸೂಕ್ತ ಅನುಷ್ಠಾನಕ್ಕೆ ಅರ್ಹ ಫಲಾನುಭವಿಗಳ ಆಯ್ಕೆಗಾಗಿ ಕಾನೂನು ಸೇವೆಗಳ ಪ್ರಾಧಿಕಾರದಿಂದ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಜಿಲ್ಲೆಯಲ್ಲಿ 86 ಕಾರ್ಯಕರ್ತರು ಕಾರ್ಯ ನಿರ್ವಹಿಸಲಿದ್ದಾರೆ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ.ಗೋವಿಂದಯ್ಯ ತಿಳಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಯೋಜನೆಯು ಬಹಳ ವರ್ಷಗಳಿಂದ ಜಾರಿಯಲ್ಲಿದ್ದರೂ ಅನುಷ್ಠಾನ ಸರಿಯಾಗಿ ಆಗದಿರುವುದನ್ನು ಹೈಕೋರ್ಟ್ ಗಮನಿಸಿದೆ. ಹಾಗಾಗಿ ಜಿಲ್ಲಾಮಟ್ಟದಲ್ಲಿ ನಿಜವಾದ ಬಡವರನ್ನು ಗುರುತಿಸಿ ಅವರಿಗೆ ವಸತಿ ಸೌಕರ್ಯ ಒದಗಿಸಲಾಗುವುದು’ ಎಂದು ಹೇಳಿದರು.

‘ಸಮೀಕ್ಷೆಯಲ್ಲಿ ಕಾರ್ಯಕರ್ತರು, ವಕೀಲರು ಮತ್ತು ನ್ಯಾಯಾಧೀಶರು ಭಾಗಿಯಾಗಲಿದ್ದಾರೆ. 89 ವಕೀಲರಿದ್ದು, ಅವರು ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಕಾರ್ಯಕರ್ತರು ತಮ್ಮ ವರದಿಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸಲ್ಲಿಸಲಿದ್ದಾರೆ. ಸಮೀಕ್ಷೆಯಲ್ಲಿ ಅರ್ಹರೆಂದು ಕಂಡುಬಂದವರನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಯ್ಕೆ ಮಾಡಿ ವಸತಿ ನೀಡಲು ಸರ್ಕಾರಕ್ಕೆ ನಿರ್ದೇಶನ ನೀಡಲಾಗುವುದು’ ಎಂದು ವಿವರಿಸಿದರು.

ADVERTISEMENT

‘ಫಲಾನುಭವಿಗಳು ಸರ್ಕಾರದಿಂದ ಪ್ರಯೋಜನಗಳನ್ನು ಪಡೆಯಲು ಲಂಚ ಕೊಡಬೇಕಿಲ್ಲ. ಕನಿಷ್ಠ ನಾಗರಿಕ ಸೌಲಭ್ಯಗಳನ್ನು ಕೊಡುವುದು ಸರ್ಕಾರದ ಕರ್ತವ್ಯವಾಗಿದೆ. ಲಂಚ ನಿರ್ಮೂಲನೆ ಮಾಡಬೇಕು ಮತ್ತು ಯಾವುದೇ ಸರ್ಕಾರಿ ಸೌಲಭ್ಯ ಪಡೆಯಲು ಮಧ್ಯವರ್ತಿಗಳ ಅಗತ್ಯವಿಲ್ಲ ಎಂದೂ ಅರಿವು ಮೂಡಿಸಲಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.