ADVERTISEMENT

ಕಾರವಾರ: ವರ್ಷಾಂತ್ಯಕ್ಕೆ ಜಿಲ್ಲೆಯಲ್ಲಿ ‘ಮದ್ಯದ ಹೊಳೆ’

ಡಿಸೆಂಬರ್‌ನಲ್ಲಿ 1.02 ಲಕ್ಷ ಪೆಟ್ಟಿಗೆ ಮಾರಾಟ:ಪ್ರವಾಸಿ ತಾಣಗಳಲ್ಲಿ ಹೆಚ್ಚು ಬಳಕೆ

ಗಣಪತಿ ಹೆಗಡೆ
Published 2 ಜನವರಿ 2026, 5:46 IST
Last Updated 2 ಜನವರಿ 2026, 5:46 IST
<div class="paragraphs"><p>– ಪ್ರಜಾವಾಣಿ ಚಿತ್ರ</p></div>
   

– ಪ್ರಜಾವಾಣಿ ಚಿತ್ರ

ಕಾರವಾರ: ವರ್ಷಾಂತ್ಯದ ವೇಳೆಗೆ ಜಿಲ್ಲೆಯಲ್ಲಿ ಭಾರತೀಯ ತಯಾರಿಕಾ ಮದ್ಯ (ಐಎಂಎಲ್), ಬಿಯರ್‌ಗಳ ಮಾರಾಟ ಜೋರಾಗಿದ್ದು, ಪ್ರವಾಸಿ ತಾಣಗಳಲ್ಲಿನ ಮದ್ಯದಂಗಡಿಗಳಲ್ಲಿ ಭರಪೂರ ಮದ್ಯ ಮಾರಾಟ ನಡೆದಿದೆ.

ಡಿಸೆಂಬರ್ ಕೊನೆಯ ವಾರದಲ್ಲಿ ಜಿಲ್ಲೆಯ 8 ಅಬಕಾರಿ ವಲಯ ವ್ಯಾಪ್ತಿಯಲ್ಲಿ 26,690 ಪೆಟ್ಟಿಗೆಯಷ್ಟು ಮದ್ಯ, 22,747 ಪೆಟ್ಟಿಗೆಯಷ್ಟು ಬಿಯರ್‌ಗಳ ಮಾರಾಟ ನಡೆದಿದೆ. ಪ್ರವಾಸಿಗರು ಹೆಚ್ಚು ಭೇಟಿ ನೀಡುವ ವರ್ಷದ ಕೊನೆಯ ತಿಂಗಳಿನಲ್ಲಿ ದಾಖಲೆಯ 1.02 ಲಕ್ಷ ಪೆಟ್ಟಿಗೆಯಷ್ಟು ಮದ್ಯ ಮಾರಾಟವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಪ್ರಮಾಣ ಹೆಚ್ಚಿದೆ ಎಂದು ಅಬಕಾರಿ ಇಲಾಖೆ ಹೇಳಿದೆ.

ADVERTISEMENT

ವಾರಾಂತ್ಯಕ್ಕೆ ಸಮೀಪದಲ್ಲೇ ಕ್ರಿಸ್‌ಮಸ್ ಹಬ್ಬ ಬಂದಿದ್ದರಿಂದ ಸಾಲು ಸಾಲು ರಜೆ ಸಿಕ್ಕ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ದೇಶದ ನಾನಾ ಕಡೆಯಿಂದ ಪ್ರವಾಸಿಗರು ಗೋಕರ್ಣ, ಮುರುಡೇಶ್ವರ, ದಾಂಡೇಲಿ ಸೇರಿದಂತೆ ವಿವಿಧ ಪ್ರವಾಸಿ ತಾಣಗಳತ್ತ ಮುಖಮಾಡಿದ್ದರು. ಇಡೀ ತಿಂಗಳಲ್ಲಿ ನಡೆದ ವಹಿವಾಟಿನ ಪೈಕಿ ಕೊನೆಯ ವಾರವೊಂದರಲ್ಲೇ ಶೇ 25ರಷ್ಟು ಮದ್ಯ ವಹಿವಾಟು ನಡೆದಿದೆ ಎಂದು ಇಲಾಖೆ ಹೇಳಿದೆ.

‘ದಿನದ ಬೇಡಿಕೆ ಆಧರಿಸಿ ಮದ್ಯ ಮಾರಾಟಗಾರರು ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮತದ (ಕೆಎಸ್‍ಬಿಸಿಎಲ್) ಉಗ್ರಾಣದಿಂದ ಮದ್ಯ ಖರೀದಿಸಿಟ್ಟುಕೊಳ್ಳುತ್ತಾರೆ. ವರ್ಷಾಂತ್ಯದ ವೇಳೆ ಹೆಚ್ಚು ಬೇಡಿಕೆ ಇರುವ ಹಿನ್ನೆಲೆಯಲ್ಲಿ ಡಿ.26ರಿಂದ ಐದು ದಿನವೂ ಸರಾಸರಿ 4ರಿಂದ 6 ಸಾವಿರದಷ್ಟು ಪೆಟ್ಟಿಗೆ ಭಾರತೀಯ ತಯಾರಿತ ಮದ್ಯ ಮತ್ತು ಬಿಯರ್‌ಗಳು ಮದ್ಯದಂಗಡಿಗಳಿಗೆ ಪೂರೈಕೆ ಆಗಿದ್ದವು’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಕರಾವಳಿ ಭಾಗದ ಮದ್ಯದಂಗಡಿಗಳಿಗೆ ಹೊನ್ನಾವರದ ಉಗ್ರಾಣದಿಂದ, ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡಕ್ಕೆ ಶಿರಸಿಯ ಉಗ್ರಾಣದಿಂದ ಪೂರೈಕೆಯಾದರೆ, ದಾಂಡೇಲಿ, ಹಳಿಯಾಳ ಮತ್ತು ಜೊಯಿಡಾಕ್ಕೆ ಹುಬ್ಬಳ್ಳಿಯ ಉಗ್ರಾಣದಿಂದ ಮದ್ಯ ಪೂರೈಕೆ ಆಗುತ್ತಿದೆ’ ಎಂದರು.

‘ಕಳೆದ ವರ್ಷ ಇದೇ ಅವಧಿಯಲ್ಲಿ 27,418 ಪೆಟ್ಟಿಗೆಯಷ್ಟು ಮದ್ಯ, 24,577 ಪೆಟ್ಟಿಗೆಯಷ್ಟು ಬಿಯರ್ ಮಾರಾಟವಾಗಿದ್ದವು. ಆಗಿನ ವಹಿವಾಟು ಹೋಲಿಸಿದರೆ ಈ ಬಾರಿ ಸ್ವಲ್ಪ ಇಳಿಕೆಯಾಗಿದೆ. ಆದರೆ, ಕ್ರಿಸ್‌ಮಸ್ ರಜೆಯ ಹಿನ್ನೆಲೆಯಲ್ಲಿ ಕೊನೆಯ ವಾರಕ್ಕೆ ಮುಂಚೆಯೇ ಹಲವು ಮದ್ಯದಂಗಡಿಗಳು ಬೇಡಿಕೆ ಹೆಚ್ಚಿರುವ ಕಾರಣಕ್ಕೆ ದಾಸ್ತಾನು ಮಾಡಿಕೊಂಡಿದ್ದು, ಕಳೆದ ವರ್ಷಕ್ಕಿಂತಲೂ ಮಾರಾಟ ಹೆಚ್ಚೇ ಇರಬಹುದು’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.