ADVERTISEMENT

‘ಗೂಡಂಗಡಿಗಳಲ್ಲಿ ಮದ್ಯ ಅಕ್ರಮ ಮಾರಾಟ’

ಕುಮಟಾ ತಾಲ್ಲೂಕಿನ ಬಾಡ ಗ್ರಾಮ ಪಂಚಾಯಿತಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 15:06 IST
Last Updated 8 ಏಪ್ರಿಲ್ 2022, 15:06 IST

ಕಾರವಾರ: ‘ಕುಮಟಾ ತಾಲ್ಲೂಕಿನ ಬಾಡ ಗ್ರಾಮದಲ್ಲಿ ಹತ್ತಾರು ಗೂಡಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಅದನ್ನು ಸಂಪೂರ್ಣವಾಗಿ ನಿಲ್ಲಿಸಿದರೆ ಎಂ.ಎಸ್.ಐ.ಎಲ್ ಮಳಿಗೆ ತೆರೆಯುವುದನ್ನೂ ಕೈಬಿಡಲಾಗುವುದು’ ಎಂದು ಉದ್ದೇಶಿತ ಮಳಿಗೆ ಸ್ಥಾಪಿಸಲು ಮುಂದಾಗಿರುವ ಶ್ರೀನಿವಾಸ ನಾಯ್ಕ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದಲ್ಲಿ ಮಳಿಗೆ ತೆರೆಯುವುದಕ್ಕೆ ವ್ಯಕ್ತವಾಗಿರುವ ವಿರೋಧಗಳಿಗೆ ಪ್ರತಿಕ್ರಿಯಿಸಿದರು.

‘ಉದ್ದೇಶಿತ ಮಳಿಗೆಯು ಗ್ರಾಮದಲ್ಲಿರುವ ಜನತಾ ವಿದ್ಯಾಲಯ ಪ್ರೌಢಶಾಲೆಯ ಪ್ರವೇಶದ್ವಾರಕ್ಕಿಂತ 110 ಮೀಟರ್ ದೂರದಲ್ಲಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆಯವರು ಅಳತೆ ಮಾಡಿ ಪ್ರಮಾಣಪತ್ರ ನೀಡಿದ್ದಾರೆ. ಆದರೆ, ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ವಕೀಲ ಆರ್.ಜಿ.ನಾಯ್ಕ, ಮಳಿಗೆ ಸ್ಥಾಪನೆಯನ್ನು ವಿರೋಧಿಸಿದ್ದರು. ಅಲ್ಲದೇ ಅಂತರವು ಕೇವಲ 60 ಮೀಟರ್ ಇದೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಸ್ಥಳೀಯರು ಕಳಪೆ ಮದ್ಯ ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಗುಣಮಟ್ಟದ ಮದ್ಯ ಕೊಡಬೇಕು ಎಂಬ ಉದ್ದೇಶದಿಂದ ಮಳಿಗೆ ಸ್ಥಾಪಿಸಲು ಪ್ರಯತ್ನಿಸುತ್ತಿದ್ದೇನೆ. ಇದನ್ನು ಕೆಲವರು ಸ್ವಾರ್ಥಕ್ಕಾಗಿ ವಿರೋಧಿಸುತ್ತಿದ್ದಾರೆ. ಅವರ ಹತ್ತಿರದ ಸಂಬಂಧಿಕರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ’ ಎಂದು ದೂರಿದರು.

ಮುಖಂಡ ಆರ್.ಎಚ್.ನಾಯ್ಕ ಮಾತನಾಡಿ, ‘ಬಾಡ ಗ್ರಾಮದಲ್ಲಿ ಮದ್ಯ ಅಕ್ರಮ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಠರಾವು ಮಾಡಿತ್ತು. ಆ ಹಿನ್ನೆಲೆಯಲ್ಲಿ ಎಂ.ಎಸ್.ಐ.ಎಲ್ ಮಳಿಗೆ ತೆರೆಯಲು ಶ್ರೀನಿವಾಸ ಪ್ರಯತ್ನಿಸುತ್ತಿದ್ದಾರೆ. ಎಲ್ಲವೂ ನಿಯಮದ ಪ್ರಕಾರವೇ ಇದೆ’ ಎಂದರು.

ಗ್ರಾಮದ ಪ್ರಮುಖ ಸೋಮನಾಥ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.