ಕುಮಟಾ : `ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದರೂ ಸಾಹಿತ್ಯದಲ್ಲಿ ತೀವ್ರ ಆಸಕ್ತಿ ಹೊಂದಿದ್ದ ಕವಿ, ಕತೆಗಾರ, ನಾಟಕಕಾರರಾಗಿದ್ದ ಗೆಳೆಯ ವಿಠ್ಠಲ ಪೇರುಮನೆ ಸಹೃದಯರ ಮನಸ್ಸಿನಲ್ಲಿ ಸ್ಥಾನ ಪಡೆದಿದ್ದಾರೆ’ ಎಂದು ನಿವೃತ್ತ ಶಿಕ್ಷಕ ಎಚ್.ಎಸ್. ಗುನಗ ಹೇಳಿದರು.
ಕಸಾಪ ಕುಮಟಾ ತಾಲ್ಲೂಕು ಘಟಕದಿಂದ ಮಂಗಳವಾರ ಪಟ್ಟಣದಲ್ಲಿ ಆಯೋಜಿಸಿದ್ದ ಬರಹಗಾರ, ನಿವೃತ್ತ ಶಿಕ್ಷಕ ದಿವಂಗತ ವಿಠ್ಠಲ ಪೇರುಮನೆ ನೆನಪಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬಂಕಿಕೊಡ್ಲದ ಆನಂದಾಶ್ರಮ ಪ್ರೌಢಶಾಲೆಯಲ್ಲಿ ಕವಿ ಸು.ರಂ. ಎಕ್ಕುಂಡಿ ಅವರ ಕಿರಿಯ ಸಹೋದ್ಯೋಗಿಯಾಗಿ ಕೆಲಸ ಮಾಡಿದ್ದ ವಿಠ್ಠಲ ಕ್ರೀಡೆ, ಸಾಹಿತ್ಯದ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು’ ಎಂದರು.
ಜಿಲ್ಲಾ ಕ.ಸಾ.ಪ ಮಾಜಿ ಅಧ್ಯಕ್ಷ ರೋಹಿದಾಸ ನಾಯಕ ಮಾತನಾಡಿ, ‘ಉತ್ತಮ ಬರಹಗಾರರಾಗಿದ್ದರೂ ವಿಠ್ಠಲ ಪೇರುಮನೆ ತಮ್ಮ ಕೃತಿಗಳನ್ನು ಪ್ರಕಟಿಸಲು ಕಷ್ಟಪಟ್ಟಿದ್ದರು. ಸ್ವಾತಂತ್ರ್ಯ ಯೋಧರಾಗಿದ್ದ ಅವರ ತಾಯಿಯನ್ನು ಜಿಲ್ಲಾ ಕ.ಸಾ.ಪ ಗೌರವಿಸಿತ್ತು’ ಎಂದರು.
ಜಿಲ್ಲಾ ಕ.ಸಾ.ಪ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ ಮಾತನಾಡಿ, ‘ನಮ್ಮ ಸುತ್ತಲಿನ ನಿರ್ಲಕ್ಷ್ಯಿತ ಸೂಕ್ಷ್ಮ ಸಮಸ್ಯೆಗಳೇ ವಿಠ್ಠಲ ಅವರ ಸಾಹಿತ್ಯದ ವಸ್ತುಗಳಾಗಿದ್ದವು. ಈ ಕಾರಣದಿಂದಲೇ ಅವರ ಬರಹ ಓದುಗರನ್ನು ಸೆಳೆದಿತ್ತು’ ಎಂದರು.
ಮುಖ್ಯ ಶಿಕ್ಷಕಿ ಶೈಲಾ ಗುನಗಿ, ಮಂಜುನಾಥ ನಾಯ್ಕ, ನಿವೃತ್ತ ಪ್ರಾಧ್ಯಾಪಕ ಎಂ.ಜಿ. ನಾಯ್ಕ, ನಿವೃತ್ತ ಮುಖ್ಯ ಶಿಕ್ಷಕ ಎನ್.ಆರ್. ಗಜು ಮಾತನಾಡಿದರು. ಕಾರ್ಯಕ್ರಮದಲ್ಲಿ ವಸಂತ ಶೇಟ್, ಬೀರಣ್ಣ ನಾಯಕ, ಪ್ರದೀಪ ನಾಯಕ, ವಕೀಲ ರವೀಂದ್ರ ನಾಯ್ಕ ಇದ್ದರು. ಕ.ಸಾ.ಪ ತಾಲ್ಲೂಕು ಘಟಕ ಅಧ್ಯಕ್ಷ ಪ್ರಮೋದ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.