ADVERTISEMENT

ಕಾರವಾರ | 'ಸಾಲ ಸೌಲಭ್ಯದ ಅರ್ಜಿ ತಿರಸ್ಕರಿಸದಿರಿ'

ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿ.ಪಂ ಸಿಇಒ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 6:56 IST
Last Updated 23 ಸೆಪ್ಟೆಂಬರ್ 2025, 6:56 IST
ಕಾರವಾರದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ ಈಶ್ವರ ಕಾಂದೂ ಮಾತನಾಡಿದರು.
ಕಾರವಾರದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ ಈಶ್ವರ ಕಾಂದೂ ಮಾತನಾಡಿದರು.   

ಕಾರವಾರ: ‘ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ಸಾಲ ಸೌಲಭ್ಯಕ್ಕಾಗಿ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕೃತಗೊಳಿಸದೆ ಬ್ಯಾಂಕ್‍ಗಳು ಸಾಲ ಒದಗಿಸಿಕೊಡಲು ಆದ್ಯತೆ ನೀಡಬೇಕು’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಈಶ್ವರ ಕಾಂದೂ ಹೇಳಿದರು.

ಇಲ್ಲಿ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ‘ದಾಖಲೆಗಳ ಕೊರತೆ ಇದ್ದರೆ, ಸಮರ್ಪಕ ಮಾಹಿತಿ ಒದಗಿಸುವಲ್ಲಿ ಲೋಪಗಳಾಗಿದ್ದರೆ ಅರ್ಜಿದಾರರಿಗೆ ಮನವರಿಕೆ ಮಾಡುವ ಕೆಲಸ ಮಾಡಿ. ಸಣ್ಣ ತಪ್ಪಿಗೆ ಅರ್ಜಿಯನ್ನೇ ತಿರಸ್ಕರಿಸುವ ಕೆಲಸ ಮಾಡದಿರಿ’ ಎಂದು ಬ್ಯಾಂಕ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

‘ಪಶುಪಾಲನೆ ಮತ್ತು ಮೀನುಗಾರಿಕಾ ಇಲಾಖೆ ವತಿಯಿಂದ ನೀಡುವ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ಸಾಲ ವಿತರಿಸಬೇಕು. ಪಿಎಂ ಸ್ವನಿಧಿ ಯೋಜನೆಯಡಿಯಲ್ಲಿ ಸಾಧ್ಯವಾದಷ್ಟು ಬೀದಿ ಬದಿ ವ್ಯಾಪಾರಸ್ಥರಿಗೆ ಸಾಲ ನೀಡಬೇಕು’ ಎಂದು ಸೂಚಿಸಿದರು.

ADVERTISEMENT

‘ಪ್ರಧಾನ ಮಂತ್ರಿ ಉದ್ಯೋಗ ಸೃಜನಾ ಯೋಜನೆಯಡಿ ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ, ಪ್ರವಾಸೋದ್ಯಮ ಅಭಿವೃದ್ದಿಗೆ ಪೂರಕವಾದ ಚಟುವಟಿಕೆಗಳಿಗೆ ಆದ್ಯತೆಯಲ್ಲಿ ಸಾಲ ವಿತರಿಸಿ. ಮುದ್ರಾ ಯೋಜನೆ ಮತ್ತು ಸ್ಟಾರ್ಟಪ್ ಗಳಿಗೆ ಸಾಲ ವಿತರಿಸುವ ಕುರಿತಂತೆ ಎಲ್ಲಾ ಬ್ಯಾಂಕ್‌ಗಳು ಜಿಲ್ಲೆಯಾದ್ಯಂತ ಹೆಚ್ಚಿನ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಆನ್‍ಲೈನ್ ವಂಚನೆಯ ಕುರಿತಾಗಿಯೂ ಗ್ರಾಹಕರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು’ ಎಂದರು.

‘ಸಾರ್ವಜನಿಕರಲ್ಲಿ ₹10 ನಾಣ್ಯದ ಬಳಕೆ ಬಗ್ಗೆ ಗೊಂದಲಗಳಿದೆ. ಈ ನಾಣ್ಯದ ನಕಲು ತಯಾರಿಸಲು ಹೆಚ್ಚು ವೆಚ್ಚ ತಗುಲುವುದರಿಂದ ನಕಲು ಸಾಧ್ಯವಿಲ್ಲ. ದೈನದಿಂದ ವಹಿವಾಟಿನಲ್ಲಿ ₹10ರ ನಾಣ್ಯ ಬಳಕೆ ನಿರಾತಂಕವಾಗಿ ಮಾಡಬಹುದು’ ಎಂದು ಆರ್.ಬಿ.ಐನ ಜಿಲ್ಲಾ ಲೀಡ್ ವ್ಯವಸ್ಥಾಪಕ ತನು ನಂಜಪ್ಪ ಹೇಳಿದರು.

ಜಿಲ್ಲಾ ಪಂಚಾಯ್ತಿ ಯೋಜನಾ ನಿರ್ದೇಶಕ ಕರೀಂ ಅಸಾದಿ ಇದ್ದರು.

ಗುರಿ ಮೀರಿ ಸಾಲ ವಿತರಣೆ

‘ಜಿಲ್ಲೆಯಲ್ಲಿ ಕಳೆದ ತ್ರೈಮಾಸಿಕ ಅವಧಿಯಲ್ಲಿ ₹1957 ಕೋಟಿ ಸಾಲ ವಿತರಣೆ ಗುರಿ ಇಟ್ಟುಕೊಳ್ಳಲಾಗಿತ್ತು. ₹2442.14 ಕೋಟಿ ಸಾಲ ವಿತರಿಸುವ ಮೂಲಕ ಶೇ.124.79 ರಷ್ಟು ಸಾಧನೆ ಮಾಡಲಾಗಿದೆ. ಕೃಷಿ ವಲಯಕ್ಕೆ ₹1128.11 ಕೋಟಿ ಮಧ್ಯಮ ಮತ್ತು ಸಣ್ಣ ವಲಯಕ್ಕೆ ₹820.74 ಕೋಟಿ ಸಾಲ ವಿತರಿಸಲಾಗಿದೆ. ಗೃಹ ನಿರ್ಮಾಣ ಮತ್ತು ಶೈಕ್ಷಣಿಕ ಸಾಲ ವಿತರಣೆಯಲ್ಲಿ ಬ್ಯಾಂಕ್‍ಗಳು ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಬೇಕಿದೆ. ಜಿಲ್ಲೆಯ ಸಾಲ ಮತ್ತು ಠೇವಣಿ ಅನುಪಾತ ಕಳೆದ ಸಾಲಿಗೆ ಹೋಲಿಸಿದಲ್ಲಿ ಪ್ರಗತಿಯಾಗಿದ್ದು ಸಾಲ ನೀಡಿಕೆ ಪ್ರಮಾಣ ಇನ್ನೂ ಹೆಚ್ಚಳವಾಗಬೇಕಿದೆ’ ಎಂದು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ರೇವತಿ ಸುಧಾಕರ್ ಸಭೆಯಲ್ಲಿ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.