ADVERTISEMENT

ಅಣಶಿ ಘಟ್ಟ: ರಾಜ್ಯ ಹೆದ್ದಾರಿ ಸಂಚಾರಕ್ಕೆ ಮುಕ್ತ

ಗುಡ್ಡ ಕುಸಿದು ಸಂಪರ್ಕ ಕಡಿತಗೊಂಡಿದ್ದ ಪ್ರದೇಶ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2021, 14:45 IST
Last Updated 25 ಆಗಸ್ಟ್ 2021, 14:45 IST
ಜೊಯಿಡಾ ತಾಲ್ಲೂಕಿನ ಅಣಶಿಯಲ್ಲಿ ಬೆಳಗಾವಿ- ಸದಾಶಿವಗಡ ರಾಜ್ಯ ಹೆದ್ದಾರಿಯ ಮೇಲೆ ಕುಸಿದಿದ್ದ ಬೆಟ್ಟದ ಮಣ್ಣನ್ನು ಬುಧವಾರ ತೆರವುಗೊಳಿಸಿದ ಬಳಿಕ ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಂಭ್ರಮಾಚರಣೆ ಮಾಡಿದರು
ಜೊಯಿಡಾ ತಾಲ್ಲೂಕಿನ ಅಣಶಿಯಲ್ಲಿ ಬೆಳಗಾವಿ- ಸದಾಶಿವಗಡ ರಾಜ್ಯ ಹೆದ್ದಾರಿಯ ಮೇಲೆ ಕುಸಿದಿದ್ದ ಬೆಟ್ಟದ ಮಣ್ಣನ್ನು ಬುಧವಾರ ತೆರವುಗೊಳಿಸಿದ ಬಳಿಕ ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಂಭ್ರಮಾಚರಣೆ ಮಾಡಿದರು   

ಜೊಯಿಡಾ: ಬೆಳಗಾವಿ- ಸದಾಶಿವಗಡ ರಾಜ್ಯ ಹೆದ್ದಾರಿಯ ಅಣಶಿ ಘಟ್ಟದಲ್ಲಿ ಕುಸಿದ ಗುಡ್ಡದ ಮಣ್ಣಿನ ತೆರವು ಕಾರ್ಯ ಬುಧವಾರ ಸಂಜೆ ಮುಗಿಯಿತು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಮೇಶ ನಾಯ್ಕ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಿಂದ ಹೆದ್ದಾರಿಯು ವಾಹನ ಸಂಚಾರಕ್ಕೆ ಮುಕ್ತವಾಯಿತು.

ಜೊಯಿಡಾ, ದಾಂಡೇಲಿ ಹಾಗೂ ಹಳಿಯಾಳ ತಾಲ್ಲೂಕಿನಿಂದ ಜಿಲ್ಲಾ ಕೇಂದ್ರ ಕಾರವಾರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ಜುಲೈ 22ರಂದು ಅಣಶಿ ಘಟ್ಟದಲ್ಲಿ ಗುಡ್ಡ ಕುಸಿದಿದ್ದರಿಂದ ವಾಹನ ಸಂಚಾರ ಕಳೆದ ಒಂದು ತಿಂಗಳಿನಿಂದ ಸಂಪೂರ್ಣ ಸ್ಥಗಿತಗೊಂಡಿತ್ತು. ಮೂರು ತಾಲ್ಲೂಕುಗಳ ಸಾರ್ವಜನಿಕರು ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಸಾಧಿಸಲು ಪರದಾಡುವಂತಾಗಿತ್ತು.

ರಸ್ತೆಯನ್ನು ದುರಸ್ತಿ ಪಡಿಸಿ ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ಅವಕಾಶ ನೀಡುವಂತೆ ಜೊಯಿಡಾ ಸಾರ್ವಜನಿಕರು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಸೇರಿದಂತೆ ಕಾರವಾರ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದರು. ಆದರೆ ಇದಕ್ಕೆ ಸ್ಪಂದನ ಸಿಗಲಿಲ್ಲ ಎಂಬ ಅಸಮಾಧಾನ ಸ್ಥಳೀಯರದ್ದಾಗಿದೆ.

ಜಿಲ್ಲಾ ಪಂಚಾಯಿತಿ ನಿಕಟ ಪೂರ್ವ ಸದಸ್ಯರಾದ ರಮೇಶ ನಾಯ್ಕ ಅವರ ಮುಂದಾಳತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿರ ಸಹಕಾರದಲ್ಲಿ ಮಣ್ಣಿನ ತೆರವು ಆರಂಭಿಸಲಾಗಿತ್ತು. ಸೋಮವಾರ ಬೆಳಿಗ್ಗೆಯಿಂದ ಮೂರು ದಿನ ನೂರಾರು ಸಾರ್ವಜನಿಕರು ದೊಡ್ಡ ಗಾತ್ರದ ಮರಗಳನ್ನು ಹಾಗೂ ಕಲ್ಲುಗಳನ್ನು ತೆರವುಗೊಳಿಸಿದ್ದರು. ಈ ಮೂಲಕ ರಸ್ತೆಯನ್ನು ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಿದರು.

ಜೊಯಿಡಾ ಹಾಗೂ ಹಳಿಯಾಳದಲ್ಲಿ ಬುಧವಾರ ಆಯೋಜಿಸಲಾಗಿದ್ದ ವಿಶೇಷ ಸಭೆಗಳಿಗೆ ಜಿಲ್ಲಾಧಿಕಾರಿ ಈ ಮಾರ್ಗದಲ್ಲಿಯೇ ಸಂಚರಿಸಿದರು. ಅಣಶಿ ಘಟ್ಟಕ್ಕೆ ಭೇಟಿ ನೀಡಿ ಜೊಯಿಡಾಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಅವರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಹಾಗೂ ಗುಡ್ಡ ತೆರವುಗೊಳಿಸಿದ ಪ್ರಮುಖರೊಂದಿಗೆ ಚರ್ಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಂಗಾ ಎಂ., ಉಪ ವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ, ಅಣಶಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅರುಣ ನಾಯ್ಕ, ಕಾಳಿ ಬ್ರಿಗೇಡ್‌ ಸಂಚಾಲಕ ರವಿ ರೇಡ್ಕರ, ಮಂಗೇಶ ಕಾಮತ, ನಾಗೋಡಾ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿಗಂಬರ ದೇಸಾಯಿ, ಉಳವಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥ ಮುಖಾಶಿ, ನಂದಿಗದ್ದಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅರುಣ ದೇಸಾಯಿ, ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಕೃಷ್ಣ ದೇಸಾಯಿ, ದತ್ತಾ ನಾಯ್ಕ, ಆರ್.ಎ.ಭಟ್ಟ, ರತ್ನಾಕರ ದೇಸಾಯಿ, ಅಜಿತ ಟೆಂಗ್ಸೆ, ರಮೇಶ ನಾಯ್ಕ ಜೊಯಿಡಾ, ಸದಾನಂದ ಉಪಾಧ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.