ADVERTISEMENT

ಪ್ರಧಾನಿ ಮೋದಿ ಆಗಮನಕ್ಕೆ ಸಜ್ಜಾದ ಶಿರಸಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2024, 14:25 IST
Last Updated 27 ಏಪ್ರಿಲ್ 2024, 14:25 IST
ಶಿರಸಿಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮದ ಹಿನ್ನೆಲೆ ನಿರ್ಮಿಸಿದ ವೇದಿಕೆಯ ಸಿದ್ಧತೆಯನ್ನು ವಿ.ಸುನೀಲ್ ಕುಮಾರ ಹಾಗೂ ಇತರರು ವೀಕ್ಷಿಸಿದರು
ಶಿರಸಿಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮದ ಹಿನ್ನೆಲೆ ನಿರ್ಮಿಸಿದ ವೇದಿಕೆಯ ಸಿದ್ಧತೆಯನ್ನು ವಿ.ಸುನೀಲ್ ಕುಮಾರ ಹಾಗೂ ಇತರರು ವೀಕ್ಷಿಸಿದರು   

ಶಿರಸಿ: ಲೋಕಸಭಾ ಚುನಾವಣೆ ಪ್ರಚಾರ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಶಿರಸಿಗೆ ಪ್ರಥಮ ಬಾರಿಗೆ ಬರುತ್ತಿದ್ದು, ಬಹಿರಂಗ ಸಮಾವೇಶಕ್ಕೆ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣ ಸಜ್ಜಾಗಿದೆ.

ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರವಾಗಿ ಬೆಳಿಗ್ಗೆ 11 ಗಂಟೆಗೆ ಪ್ರಧಾನಿ ಪ್ರಚಾರ ಕೈಗೊಳ್ಳಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ 12 ತಾಲ್ಲೂಕುಗಳ ಕಾರ್ಯಕರ್ತರು ಸೇರಿ ಬೆಳಗಾವಿಯ ಕಿತ್ತೂರು ಹಾಗೂ ಖಾನಾಪುರ ಭಾಗದ ಕಾರ್ಯಕರ್ತರು ಪಾಲ್ಗೊಳ್ಳಲಿದ್ದು, ಸುಮಾರು 80 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ. 1 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಕ್ರೀಡಾಂಗಣದಲ್ಲಿ ಇಪ್ಪತ್ತು ಬ್ಲಾಕ್‌ಗಳಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಇದೆ. ಪ್ರತಿ ಬ್ಲಾಕ್‌ನಲ್ಲಿ‌ ಐದು ಸಾವಿರ ಜನರಿಗೆ ಅವಕಾಶ ಮಾಡಲಾಗಿದೆ. ಮಹಿಳೆಯರಿಗೆ, ಪ್ರಥಮ ಮತದಾರರಿಗೆ, ಯುವಕರಿಗೆ ಪ್ರತ್ಯೇಕ ವಿಭಾಗ ಮಾಡಲಾಗಿದೆ. ಪ್ರವೇಶಕ್ಕೆ ಐದು ದ್ವಾರಗಳಿವೆ. ಹಲವೆಡೆ ವಿಐಪಿ ಪಾಸ್ ಹಂಚಿಕೆ ಮಾಡಲಾದರೂ, ಎಲ್ಲರಿಗೂ‌ ಮುಕ್ತ ಅವಕಾಶ ಮಾಡಲಾಗಿದೆ.  ಬಿಸಿಲ ತಾಪ ಆಗದಂತೆ ಫ್ಯಾನ್ ಅಳವಡಿಕೆ, ಪ್ರತಿ ಬ್ಲಾಕ್‌ನಲ್ಲೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಎಲ್ಲಡೆ ಶುದ್ಧೀಕರಿಸಿದ ನೀರಿನ ಸೇವೆಯನ್ನು ಕಾರ್ಯಕರ್ತರು ಒದಗಿಸಲಿದ್ದಾರೆ’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ ನೀಡಿದರು.

ADVERTISEMENT

‘ಪ್ರಮುಖ ವೇದಿಕೆ ಮೇಲೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದ ಅನಂತಕುಮಾರ ಹೆಗಡೆ, ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ, ಲೋಕಸಭಾ ಕ್ಷೇತ್ರದ ಉಸ್ತುವಾರಿ ವಿ.ಸುನೀಲಕುಮಾರ, ಶಾಸಕರು, ಮಾಜಿ ಶಾಸಕರು, ಬಿಜೆಪಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷರು ಭಾಗಿಯಾಗುವರು. ಸಭೆ‌ ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿದೆ. ಇನ್ನೊಂದು ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ‌ ಕೂಡ ಬೆಳಿಗ್ಗೆ 10ರಿಂದ ನಡೆಯಲಿದೆ. ಎಲ್ಲ ಕಡೆ ಬಿಜೆಪಿ‌ ಕಾರ್ಯಕರ್ತರು, ಪೊಲೀಸರ ಸಹಕಾರದಿಂದ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ’ ಎಂದು ತಿಳಿಸಿದರು.

ಜೀವ‌ಜಲ‌ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಮಾರ್ಗದರ್ಶನದಲ್ಲಿ‌ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಂಗಣದ ಹೊರ ಭಾಗದಲ್ಲಿ 40 ಸಾವಿರ‌ ನೀರಿನ ಬಾಟಲಿ ವ್ಯವಸ್ಥೆ‌ ಮಾಡಲಾಗಿದೆ. ಜರ್ಮನ್ ಟೆಂಟ್‌ ಒಳಗಡೆ ಯಾವುದೇ ಬಾಟಲಿ, ಕಪ್ಪು ವಸ್ತುಗಳನ್ನು ಒಯ್ಯಲು ನಿಷೇಧವಿದೆ. ಒಳಾಂಗಣದಲ್ಲಿ ಎಂಟು ಡಿಜಿಟಲ್ ಪರದೆ, ಹೊರಗಡೆ ನಾಲ್ಕು‌ ಪರದೆ ಹಾಕಲಾಗುತ್ತಿದ್ದು, ಹೆಚ್ಚುವರಿ ಕಾರ್ಯಕರ್ತರು ಬಂದರೆ ಅನುಕೂಲ ಆಗಲಿದೆ. ವಾಹನ ನಿಲುಗಡೆಗೂ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ' ಎಂದರು.

ಮೊಘಲರು ಬ್ರಿಟೀಷರಿಗಿಂತ ಕಾಂಗ್ರೆಸ್ ಅಪಾಯ:

ಪ್ರಧಾನಿ ಮೋದಿ ಕಾರ್ಯಕ್ರಮದ ಸಿದ್ಧತೆ ವೀಕ್ಷಿಸಿದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ ಬಿಜೆಪಿಯ ಗೆಲುವಿನ ಅಂತರ ಹೆಚ್ಚಾಗುತ್ತಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾತನಾಡುವುದು ನೋಡಿದರೆ ಅಲ್ಪಸಂಖ್ಯಾತರನ್ನು ಓಲೈಕೆ ಎದ್ದು ಕಾಣುತ್ತಿದೆ. ಮೊಘಲರು ಬ್ರಿಟೀಷರು ಬಂದರೂ ಹಿಂದೂಗಳಿಗೆ ತೊಂದರೆಯಾಗಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಅವರ ಆಳ್ವಿಕೆಯಲ್ಲಿ ಆಗಿರುವ ದ್ವಂಸ ಎಲ್ಲವನ್ನೂ ಗಮನಿಸಿದ್ದೇವೆ. ಅವರಿಗಿಂತ ಹೆಚ್ಚು ಅಪಾಯಕಾರಿ ನಿಲುವು ಕಾಂಗ್ರೆಸ್ ಮಾಡುತ್ತಿದೆ ಎಂದರು. ಲೋಕಸಭಾ ಚುನಾವಣಾ ಸಂಚಾಲಕ ವಿ.ಸುನೀಲಕುಮಾರ ಪ್ರಮುಖರಾದ ಗಿರೀಶ ಪಟೇಲ ಎಂ‌.ಜಿ.ಮಹೇಶ ಹರಿಪ್ರಕಾಶ ಕೋಣೆಮನೆ ಎನ್.ಎಸ್.ಹೆಗಡೆ ವೆಂಕಟೇಶ ನಾಯ್ಕ ಚಂದ್ರು ಎಸಳೆ ಶ್ರೀನಿವಾಸ ಹೆಬ್ಬಾರ್ ಸದಾನಂದ ಭಟ್ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.