
ಶಿರಸಿ: ‘ಸಮಾಜ ಸುಧಾರಕ ಮಾಚಿದೇವ ಅವರ ತತ್ವಗಳು ಮತ್ತು ಶ್ರಮಜೀವಿಗಳ ಬದುಕು ಇಂದಿನ ಪೀಳಿಗೆಗೆ ಮಾದರಿಯಾಗಿದ್ದು, ಸಮಾಜದ ಸಮಗ್ರ ಅಭಿವೃದ್ಧಿಯಲ್ಲಿ ಮಡಿವಾಳ ಸಮುದಾಯದ ಪಾತ್ರ ಬಹಳ ದೊಡ್ಡದಿದೆ’ ಎಂದು ಶಾಸಕ ಭೀಮಣ್ಣ ನಾಯ್ಕ ಅಭಿಪ್ರಾಯಪಟ್ಟರು.
ನಗರದ ಮಾಚಿದೇವ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಮಾಚಿದೇವ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ಸಂಘಟಿತ ಹೋರಾಟದ ಮೂಲಕ ಸಮುದಾಯವು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಮತ್ತಷ್ಟು ಸಬಲರಾಗಬೇಕು’ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ‘ಶರಣ ಚಳವಳಿಯ ಕಾಲದಲ್ಲಿ ಮಾಚಿದೇವರು ಕೇವಲ ಕಾಯಕ ಜೀವಿಯಾಗಿರದೆ, ವಿಚಾರವಂತ ಕ್ರಾಂತಿಕಾರಿಯಾಗಿದ್ದರು. ಅವರ ವಚನಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ಶರಣರ ಸಾಹಿತ್ಯವು ಮನುಕುಲದ ಸಮಾನತೆಯನ್ನು ಸಾರುತ್ತದೆ, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮುದಾಯದ ಪ್ರತಿಭೆಗಳಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸಲ್ಲಿಸಿ ಪ್ರೋತ್ಸಾಹಿಸಲಾಯಿತು. ಮಡಿವಾಳ ಸಮಾಜದ ಶಿರಸಿ ಘಟಕದ ಗೌರವಾಧ್ಯಕ್ಷ ಜಿ.ವಿ.ಮಡಿವಾಳ, ನಗರಸಭೆ ಮಾಜಿ ಸದಸ್ಯೆ ವೀಣಾ ಭಟ್, ಶಿರಸಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಲೆಕ್ಕಪರಿಶೋಧಕ ಮಂಜುನಾಥ ಶೆಟ್ಟಿ, ದೊಡ್ನಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿರುಮಲೇಶ ಮಡಿವಾಳ, ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಐ.ಜಿ.ಗಿಡ್ಡನ್, ಕಾಂಗ್ರೆಸ್ ಪ್ರಮುಖರಾದ ಎಸ್.ಕೆ.ಭಾಗವತ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.