ADVERTISEMENT

ಮುತ್ತು ಮೂರು ಪಾಲಾಯಿತಲೇ ಪರಾಕ್...

ಚವಡಳ್ಳಿ ಗ್ರಾಮದ ಮೈಲಾರಲಿಂಗ ಜಾತ್ರೆಯಲ್ಲಿ ಭಕ್ತಿಯ ಪರಾಕಾಷ್ಠೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2021, 15:21 IST
Last Updated 23 ಮಾರ್ಚ್ 2021, 15:21 IST
ಮುಂಡಗೋಡ ತಾಲ್ಲೂಕಿನ ಚವಡಳ್ಳಿ ಗ್ರಾಮದ ಮೈಲಾರಲಿಂಗ ಸನ್ನಿಧಾನದಲ್ಲಿ ಕೈಯಿಂದ ಕಬ್ಬಿಣದ ಸರಪಳಿಗಳನ್ನು ತುಂಡರಿಸಿದರು
ಮುಂಡಗೋಡ ತಾಲ್ಲೂಕಿನ ಚವಡಳ್ಳಿ ಗ್ರಾಮದ ಮೈಲಾರಲಿಂಗ ಸನ್ನಿಧಾನದಲ್ಲಿ ಕೈಯಿಂದ ಕಬ್ಬಿಣದ ಸರಪಳಿಗಳನ್ನು ತುಂಡರಿಸಿದರು   

ಮುಂಡಗೋಡ: ತಾಲ್ಲೂಕಿನ ಚವಡಳ್ಳಿ ಗ್ರಾಮದ ಮೈಲಾರಲಿಂಗ ಜಾತ್ರೆಯು, ನೂರಾರು ಭಕ್ತರ ಸಮ್ಮುಖದಲ್ಲಿ ಸಡಗರ, ವಿಜೃಂಭಣೆಯಿಂದ ಮಂಗಳವಾರ ಜರುಗಿತು. ವಿಶಾಲವಾದ ಆಲದಮರದ ಕೆಳಗೆ ಭಕ್ತಿಯ ಪರಾಕಾಷ್ಠೆ ನಡೆಯಿತು.

ಬಂದ ಭಕ್ತರಿಗೆ ಭಂಡಾರ ಹಚ್ಚುತ್ತಿದ್ದ ಗೊರವಪ್ಪಗಳು, ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಭಕ್ತಿಯಲ್ಲಿ ತೇಲಿ ಹೆಜ್ಜೆ ಹಾಕಿದರು. ಕಲ್ಲಿನ ಮೂರ್ತಿಗೆ ಕಟ್ಟಿದ್ದ ಕಬ್ಬಿಣದ ಸರಪಳಿಗಳನ್ನು, ಭಕ್ತರು ಕ್ಷಣಮಾತ್ರದಲ್ಲಿ ತುಂಡರಿಸಿ, ಏಳುಕೋಟಿ, ಏಳು ಕೋಟಿ ಎನ್ನುತ್ತ ಕೈಮುಗಿದರು.

ಮುತ್ತು ಮೂರು ಪಾಲಾಯಿತಲೇ:

ADVERTISEMENT

ಚವಡಳ್ಳಿ ಹಾಗೂ ಕ್ಯಾಸನಕೇರಿ ಗ್ರಾಮಗಳಲ್ಲಿ ಹಿರಿಯ ಗೊರವಪ್ಪಜ್ಜರ ನೇತೃತ್ವದಲ್ಲಿ ಬೆಳಿಗ್ಗೆ ಕಾರಣಿಕ ನುಡಿಯಲಾಯಿತು. ಗ್ರಾಮದ ಮಧ್ಯಭಾಗದಲ್ಲಿ ನೂರಾರು ಭಕ್ತರು ಸುಡುಬಿಸಿಲನ್ನು ಲೆಕ್ಕಿಸದೇ, ಈ ವರ್ಷದ ಕಾರಣಿಕ ಕೇಳಲು ಸೇರಿದ್ದರು. ಹತ್ತಾರು ಅಡಿ ಎತ್ತರದ ಕಂಬ ಏರಿದ ಗೊರವಪ್ಪಜ್ಜ, ‘ಮುತ್ತು ಮೂರು ಪಾಲಾಯಿತಲೇ ಪರಾಕ್’... ಎಂದು ಕಾರಣಿಕ ನುಡಿದು, ಕೆಳಗೆ ಜಿಗಿದರು. ಭಕ್ತರು ಕಾರಣಿಕವನ್ನು ತಮ್ಮದೇ ಆದ ಶೈಲಿಯಲ್ಲಿ ವಿವರಿಸುತ್ತ, ಆಲದಮರದ ಕೆಳಗಡೆಯ ಮೈಲಾರಲಿಂಗ ಗದ್ದುಗೆಯತ್ತ ಹೆಜ್ಜೆ ಹಾಕಿದರು.

ಸರಪಳಿ ತುಂಡರಿಸಿದರು:

ಬೃಹತ್ ಆಕಾರದಲ್ಲಿ ಬೆಳೆದಿರುವ ಆಲದಮರದ ಕೆಳಗೆ ಮೈಲಾರಲಿಂಗನ ಮೂರ್ತಿಯಿದ್ದು, ಎರಡೂ ಗ್ರಾಮಗಳ ಪಲ್ಲಕ್ಕಿಯು ಅಲ್ಲಿಗೆ ಬಂದು ತಲುಪುತ್ತದೆ. ನಂತರ ದೇವರ ಗದ್ದುಗೆ ಎದುರಿನ ಕಲ್ಲಿನಮೂರ್ತಿಗೆ ಕಬ್ಬಿಣದ ಸರಪಳಿಗಳನ್ನು ಕಟ್ಟಿದರು. ಭಕ್ತರು ಏಳು ಕೋಟಿ, ಏಳು ಕೋಟಿ ಎಂದು ಪ್ರದಕ್ಷಿಣೆ ಹಾಕುತ್ತ, ಕಬ್ಬಿಣದ ಐದು ಸರಪಳಿಗಳನ್ನು ಕೈಯಿಂದ ತುಂಡರಿಸಿದರು. ಸರಪಳಿ ಪವಾಡವನ್ನು ಕಣ್ತುಂಬಿಕೊಂಡ ಜನರು, ದೇವರ ಆಶೀರ್ವಾದ ಪಡೆದರು.

‘ಹಲವು ವರ್ಷಗಳಿಂದ ಇಲ್ಲಿನ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಶಿವದಾರ, ಶಸ್ತದಾರ ಹಾಗೂ ಸರಪಳಿ ಪವಾಡ ನಡೆಯುತ್ತವೆ. ಬೇರೆ ಬೇರೆ ಊರುಗಳಿಂದಲೂ ಗೊರವಪ್ಪಜ್ಜರು ಇಲ್ಲಿನ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ತಾಲ್ಲೂಕಿನಲ್ಲಿಯೇ ಕಾರಣಿಕ ನುಡಿಯುವ ಜಾತ್ರೆ ಇದಾಗಿದೆ’ ಎಂದು ಜಾತ್ರೆಗೆ ಬಂದಿದ್ದ ಹನಮಂತ ಪಾಟೀಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.