ADVERTISEMENT

ನಕಲಿ ನೋಟು ಚಲಾವಣೆ: ಪ್ರಮುಖ ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 19 ಮೇ 2022, 15:48 IST
Last Updated 19 ಮೇ 2022, 15:48 IST
ಬಂಧಿತ ಆರೋಪಿಗಳಿಂದ ನಕಲಿ ನೋಟುಗಳು, ಕೃತ್ಯಕ್ಕೆ ಬಳಸಿದ ವಿವಿಧ ಸಲಕರಣೆಗಳನ್ನು ಉತ್ತರ ಕನ್ನಡ ಪೊಲೀಸರು ವಶ ಪಡಿಸಿಕೊಂಡಿರುವುದು
ಬಂಧಿತ ಆರೋಪಿಗಳಿಂದ ನಕಲಿ ನೋಟುಗಳು, ಕೃತ್ಯಕ್ಕೆ ಬಳಸಿದ ವಿವಿಧ ಸಲಕರಣೆಗಳನ್ನು ಉತ್ತರ ಕನ್ನಡ ಪೊಲೀಸರು ವಶ ಪಡಿಸಿಕೊಂಡಿರುವುದು   

ಕಾರವಾರ: ನಕಲಿ ನೋಟು ಚಲಾವಣೆ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳು ಮತ್ತು ಇವರಿಗೆ ಸಹಕರಿಸಿದ ಇಬ್ಬರನ್ನು ಬಂಧಿಸುವಲ್ಲಿ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಎಂಟಕ್ಕೇರಿದೆ.

ಕಾರವಾರದ ಕೋಡಿಬಾಗ ನಿವಾಸಿಗಳಾದ ಮುಸ್ತಾಕ್ ಹಸನ್ ಬೇಗ್ (43) ಹಾಗೂ ಅಫ್ಜಲ್ ಹಸನ್ ಬೇಗ್ (45) ಬಂಧಿತ ಪ್ರಮುಖ ಆರೋಪಿಗಳು. ಇಬ್ಬರೂ ವೃತ್ತಿಯಲ್ಲಿ ಚಾಲಕರಾಗಿದ್ದಾರೆ. ಇವರ ಕೃತ್ಯಕ್ಕೆ ಸಹಕರಿಸಿದ ಕುಟುಂಬ ಸದಸ್ಯರಾದ ಸೀಮಾ ಮುಸ್ತಾಕ್ (40) ಹಾಗೂ ಆಸ್ಮಾ ಅಫ್ಜಲ್ ಬೇಗ್ (42) ಅವರನ್ನೂ ಪೊಲೀಸರು ಬಂಧಿಸಿದ್ದಾರೆ. ಎಲ್ಲರೂ ಗೋವಾದ ಮಡಗಾಂವ್‌ನಲ್ಲಿ ಸೆರೆ ಸಿಕ್ಕಿದ್ದಾರೆ.

ಆರೋಪಿಗಳಿಂದ ₹ 500 ಮುಖಬೆಲೆಯ ನಕಲಿ ನೋಟುಗಳು, ಕಲರ್ ಪ್ರಿಂಟರ್, ಲ್ಯಾಪ್‌ಟಾಪ್, ಕೃತ್ಯಕ್ಕೆ ಬಳಸುತ್ತಿದ್ದ ಇತರ ಪರಿಕರಗಳನ್ನು ಜಪ್ತಿ ಮಾಡಲಾಗಿದೆ.

ADVERTISEMENT

ಪ್ರಕರಣದ ಹಿನ್ನೆಲೆ:

ಮೇ 5ರಂದು ರಾತ್ರಿ ಕಾರವಾರದ ಭದ್ರಾ ಹೋಟೆಲ್ ಎದುರಿನಲ್ಲಿ ನಕಲಿ ಬದಲಿಸಿಕೊಳ್ಳುತ್ತಿದ್ದ ವೇಳೆ ದಾಳಿ ನಡೆಸಿದ್ದ ಅಂಕೋಲಾ ಪೊಲೀಸರು, ನಾಲ್ವರನ್ನು ಬಂಧಿಸಿದ್ದರು. ಪ್ರಮುಖ ಆರೋಪಿ ಮುಸ್ತಾಕ್ ತಲೆ ಮರೆಸಿಕೊಂಡಿದ್ದ. ಪ್ರಕರಣದ ಇತರ ಆರೋಪಿಗಳ ಬಂಧನಕ್ಕೆ ವಿಶೇಷ ತನಿಖಾ ತಂಡವನ್ನು ರಚಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೇಕರ್ ಆದೇಶಿಸಿದ್ದರು.

ಕಾರವಾರ ನಗರ ಠಾಣೆ ಇನ್‌ಸ್ಪೆಕ್ಟರ್ ಸಿದ್ದಪ್ಪ ಬೀಳಗಿ, ಹೊನ್ನಾವರದ ಇನ್‌ಸ್ಪೆಕ್ಟರ್ ಶ್ರೀಧರ ಎಸ್.ಆರ್, ಅಂಕೋಲಾ ಠಾಣೆಯ ಪಿ.ಎಸ್.ಐ ಪ್ರೇಮನ ಗೌಡ ಪಾಟೀಲ, ಸಿಬ್ಬಂದಿ ಭಗವಾನ್ ಗಾಂವಕರ್, ಮಂಜುನಾಥ ಲಕ್ಮಾಪುರ, ಸಂತೋಷ ಕುಮಾರ ಕೆ.ಬಿ, ಶ್ರೀಕಾಂತ.ಕೆ, ಮೊಹಮ್ಮದ್ ಶಫಿ ಶೇಖ್, ಹನುಮಂತ ರಡ್ಡೇರ ಹಾಗೂ ಎಸ್.ಪಿ ಕಚೇರಿಯ ಸಿ.ಡಿ.ಆರ್ ವಿಭಾಗದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.